ದೋಷಪೂರಿತ ಟಿಕೆಟ್; ವಿಮಾನ ಸಂಸ್ಥೆಗೆ ದಂಡ

ವಿಮಾನ ಸಂಸ್ಥೆ
ವಿಮಾನ ಸಂಸ್ಥೆ
Published on
ಬೆಳಗಾವಿ:ಪ್ರಾಯಾಣಿಕರಿಗೆ ದೋಷಪೂರಿತ ಏರ್ ಟಿಕೆಟ್ ನೀಡಿದ ಸ್ಪೈಸ್ ಜೆಟ್ ವಿಮಾನ ಸಂಸ್ಥೆಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಆಯೋಗವು ಏರ್ ಟಿಕೆಟ್ ಮೊತ್ತ 10,927 ರೂ.ಗೆ ವಾರ್ಷಿಕ ಶೇ.9ರಷ್ಟು ರಂತೆ ಬಡ್ಡಿ ಸಮೇತ ಮರು ಸಂದಾಯ ಮಾಡುವಂತೆ ಆದೇಶಿಸಿದೆ.
ರಾಜ್ಯಸಭೆಯ ಸದಸ್ಯ ಈರಣ್ಣ ಕಡಾಡಿ 2020 ಅಕ್ಟೋಬರ್ 9ರಂದು ದೆಹಲಿಯಿಂದ ಬೆಂಗಳೂರಿಗೆ ಮತ್ತು 2020 ನವಂಬರ್ 9ರಂದು ಬೆಂಗಳೂರಿನಿಂದ ದೆಹಲಿಗೆ ವಿಮಾನಯಾನ ಟಿಕೆಟ್ ಖರೀದಿಸಿ ಪ್ರಯಾಣಿಸಿದ್ದರು. ನಂತರ ಈ ಮೊತ್ತವನ್ನು ಮರು ಸಂದಾಯ ಮಾಡಲು ಕೋರಿ ರಾಜ್ಯಸಭೆಯ ಸಕ್ಷಮ ಸೆಕ್ರೆಟರಿಯೇಟ್‌ಗೆ ಟಿಕೆಟ್ ಸಲ್ಲಿಸಿದಾಗ, ಸಕ್ಷಮ ಪ್ರಾಧಿಕಾರ ಮನವಿಯನ್ನು ತಿರಸ್ಕರಿಸಿ ಈ ಟಿಕೆಟ್‌ಗಳು ಕೂಪನ್ ಟಿಕೆಟ್ ಇರುವುದರಿಂದ ಮರು ಸಂದಾಯ ಮಾಡಲಾಗುವುದಿಲ್ಲವೆಂದು ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಗ್ರಾಹಕ ರಾಜ್ಯಸಭೆಯ ಸದಸ್ಯರು ವಿಮಾನ ಸಂಸ್ಥೆಯ ನಿಷ್ಕಾಳಜಿ ಮತ್ತು ಸೇವಾ ನ್ಯೂನ್ಯತೆಯಿಂದ ತಾವು ಮುಜುಗರಕ್ಕೊಳ ಪಡಬೇಕಾಯಿತು ಮತ್ತು ತಮಗಾದ ತೊಂದರೆಗಳಿಗೆ ಪರಿಹಾರ ನೀಡಲು ಆದೇಶ ಕೋರಿ ಬೆಳಗಾವಿಯ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ಸಲ್ಲಿಸಿದರು.
ಈ ಕುರಿತು ವಿಚಾರಣೆ ನಡೆಸಿದ ಆಯೋಗ ಸ್ಪೈಸ್ ಜೆಟ್ ಮತ್ತು ಈಸ್ ಮೈಟ್ರಿಪ್ ಸೇವಾ ಸಂಸ್ಥೆಗಳಿಗೆ ನೋಟಿಸ್ ಜಾರಿ ಮಾಡಿತ್ತು. ಆದರೆ, ವಿಮಾನಯಾನ ಸಂಸ್ಥೆ ಹಾಜರಾಗದೇ ಇರುವುದರಿಂದ ಸಂಸ್ಥೆಯ ವಿರುದ್ಧ ಏಕತರ್ಫಿ ಆದೇಶಿಸಿತ್ತು. ಬಳಿಕ ಸಂಸ್ಥೆ ತನ್ನ ವಕೀಲರ ಮುಖಾಂತರ ಹಾಜರಾಗಿ ದೂರಿಗೆ ಪ್ರತಿವಾದ ಸಲ್ಲಿಸಿ, ಈಸ್ ಮೈಟ್ರಿಪ್ ಕೇವಲ ಟಿಕೆಟ್ ಬುಕ್ಕಿಂಗ್‌ನ ಮಧ್ಯವರ್ತಿ ಸಂಸ್ಥೆಯಾಗಿ ಮಾತ್ರ ಸೇವೆ ನೀಡಿದ್ದು, ಈ ಪ್ರಕರಣದಲ್ಲಿ ತನ್ನಿಂದ ಯಾವುದೇ ಸೇವಾ ನ್ಯೂನ್ಯತೆಯಾಗಿರುವುದಿಲ್ಲವೆಂದು ವಾದ ಮಂಡಿಸಿತ್ತು.
ಪ್ರಕರಣದ ವಿವಾದಾಂಶಗಳನ್ನು ಪರಿಶಿಲಿಸಿದ ಗ್ರಾಹಕರ ವ್ಯಾಜ್ಯಗಳ ಆಯೋಗದ ಅಧ್ಯಕ್ಷ ಮಹಾಂತೇಶ ಶಿಗ್ಲಿ ಹಾಗೂ ಸದಸ್ಯ ಗಿರೀಶ ಗೌಡ ಪಾಟೀಲ ಒಳಗೊಂಡ ಜಿಲ್ಲಾ ಆಯೋಗವು ವಿಮಾನ ಸೇವಾ ಸಂಸ್ಥೆಯು ದೋಷಯುಕ್ತ ಮತ್ತು ತಪ್ಪಿನಿಂದ ಕೂಡಿದ ಟಿಕೆಟ್ ನೀಡಿ ಗ್ರಾಹಕರಿಗೆ ಸೇವಾ ನ್ಯೂನ್ಯತೆಯುಂಟು ಮಾಡಿದೆ ಎಂದು ಪರಿಗಣಿಸಿ, ದೂರುದಾರರು ಖರೀದಿಸಿದ ಟಿಕೆಟ್‌ನ ಒಟ್ಟು 10,927 ರೂ.ಗೆ 2020 ನವಂಬರ್ 9ರಂದು ಅನ್ವಿಯಸುವಂತೆ ವಾರ್ಷಿಕ ಶೇ.9ರಂತೆ ಬಡ್ಡಿ ಸಮೇತ ಮರು ಸಂದಾಯ ಮಾಡಬೇಕು ಎಂದು ಜೂ.3ರಂದು ಆದೇಶ ಹೊರಡಿಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net