ಡಿಡಿಪಿಐ ವೀರಯ್ಯ ಸಾಲಿಮಠ ವರ್ಗಾವಣೆ, ತನಿಖೆ ಹಂತದಲ್ಲಿಯೇ ಆದೇಶ...!

DDPI-OFFICE
DDPI-OFFICE
Published on

ಪ್ರಮುಖ ಮುಖ್ಯಾಂಶಗಳು

  • ಶಾಲಾ ಮಾನ್ಯತೆ ನವೀಕರಣ ಹಗರಣ
  • ತನಿಖೆ ಹಂತದಲ್ಲಿಯೇ ಇರುವ ಪ್ರಕರಣ
  • ಕ್ರಮಕ್ಕೆ ಶಿಫಾರಸ್ಸಾದರೂ ಫಲಿತಾಂಶ ಶೂನ್ಯ
  • ಶಿಕ್ಷಣ ಇಲಾಖೆ ಅವ್ಯವಸ್ಥೆಯೆ ಕೈಗನ್ನಡಿ
ವಿಜಯಪುರ: ‘ಅನುದಾನಿತ, ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಮಾನ್ಯತೆ ನವೀಕರಣ ಹಾಗೂ ಪ್ರಥಮ ಮಾನ್ಯತೆ ನೀಡುವಲ್ಲಿ ಉಂಟಾದ ಅಕ್ರಮ’ದ ಕುರಿತು ತನಿಖೆ ಪ್ರಗತಿಯಲ್ಲಿರುವಾಗಲೇ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ವೀರಯ್ಯ ಸಾಲಿಮಠ ಅವರನ್ನು ವರ್ಗಾವಣೆ ಮಾಡಲಾಗಿದೆ.
‘ಆಡಳಿತಾತ್ಮಕ ಹಿತದೃಷ್ಠಿ’ಯ ಹೆಸರಲ್ಲಿ ಬೆಳಗಾವಿ ಸರ್ಕಾರಿ ಶಿಕ್ಷಕರ ಶಿಕ್ಷಣ ಕಾಲೇಜಿನ ಖಾಲಿ ಹುದ್ದೆಗೆ ನಿಯೋಜಿಸಲಾಗಿದೆ. ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಅಧೀನ ಕಾರ್ಯದರ್ಶಿ ಮಲ್ಲಿಕಾರ್ಜುನ ರಾಮಚಂದ್ರಪ್ಪ ಅವರು ಮೇ 30 ರಂದೇ ಈ ಆದೇಶ ಹೊರಡಿಸಿದ್ದಾರೆ. ತಕ್ಷಣದಿಂದಲೇ ಸೇವೆಗೆ ಹಾಜರಾಗುವಂತೆ ಸೂಚಿಸಲಾಗಿದೆ.
ಆದರೆ, ಡಿಡಿಪಿಐ ಸಾಲಿಮಠ ಅವರು ‘ಶಾಲೆಗಳ ಮಾನ್ಯತೆ ನವೀಕರಣ ಹಾಗೂ ಪ್ರಥಮ ಮಾನ್ಯತೆ’ಗೆ ಸಂಬಂಧಿಸಿದಂತೆ ತಮ್ಮ ಅರಿವಿಗೆ ಬಾರದಂತೆ ಗೋಲ್‌ಮಾಲ್ ನಡೆದಿರುವ ಬಗ್ಗೆ ಸೈಬರ್ ಠಾಣೆಗೆ ದೂರು ದಾಖಲಿಸಿದ್ದರು. 58 ಶಾಲೆಗಳ ಮಾನ್ಯತೆ ನವೀಕರಣದಲ್ಲಿ ಅಕ್ರಮ ನಡೆದಿರುವುದಾಗಿ ಸ್ವತಃ ತಾವೇ ದೂರು ನೀಡಿದ್ದರಲ್ಲದೇ ವಿಚಾರಣೆ ಪ್ರಗತಿಯಲ್ಲಿದೆ. ಇನ್ನೊಂದೆಡೆ ಜಿಲ್ಲಾ ಪಂಚಾಯಿತಿ ಸಿಇಒ ರಿಷಿ ಆನಂದ ನೇತೃತ್ವದಲ್ಲಿಯೂ ಜಿಲ್ಲಾ ಪಂಚಾಯಿತಿಯಿಂದ ಸಮಗ್ರ ತನಿಖೆ ನಡೆಸಿ ಶಾಲೆ ಮಾನ್ಯತೆ ನವೀಕರಣದಲ್ಲಿ ಲೋಪ-ದೋಷವಾಗಿರುವ ಬಗ್ಗೆ ವರದಿ ಸಲ್ಲಿಸಿತ್ತು. ನಾಲ್ವರು ಡಿಡಿಪಿಐಗಳ ಅವಧಿಯಲ್ಲಿ ಇಂಥ ಲೋಪ-ದೋಷ ಕಂಡು ಬಂದಿದ್ದು ಕ್ರಮ ಕೈಗೊಳ್ಳಲು ಶಿಫಾರಸ್ಸು ಮಾಡಿತ್ತು.
ಡಿಡಿಪಿಐ ವೀರಯ್ಯ ಸಾಲಿಮಠ

ಆದರೆ, ಈವರೆಗೂ ಯಾವುದೇ ಕ್ರಮ ಕೈಗೊಂಡ ಬಗ್ಗೆ ಬಹಿರಂಗಗೊಂಡಿಲ್ಲ. ಮೂಲಗಳ ಪ್ರಕಾರ ನಾಲ್ವರು ಸಿಬ್ಬಂದಿ ಮೇಲೆ ಕ್ರಮ ಕೈಗೊಳ್ಳಲಾಗಿದ್ದು, ಅನ್ಯ ಜಿಲ್ಲೆಗಳಿಗೆ ವರ್ಗಾಯಿಸಿ ಆದೇಶ ಹೊರಡಿಸಿರುವ ಮಾಹಿತಿ ಇದೆ. ಇದರಲ್ಲಿ ಈ ಹಿಂದಿನ ಡಿಡಿಪಿಐ ಹೆಸರು ಸಹ ಕೇಳಿ ಬರುತ್ತಿದೆ. ಈ ಮಧ್ಯೆ ಡಿಡಿಪಿಐ ವೀರಯ್ಯ ಸಾಲಿಮಠ ಅವರನ್ನು ಏಕಾಏಕಿ ವರ್ಗಾವಣೆ ಮಾಡಿದ್ದು, ಹಲವು ಅನುಮಾನಗಳಿಗೂ ಕಾರಣವಾಗಿದೆ. ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳುವ ಹಂತದಲ್ಲಿಯೇ ಡಿಡಿಪಿಐ ವರ್ಗಾವಣೆ ಸರಿಯಲ್ಲ. ತನಿಖೆ ಪೂರ್ಣಗೊಳಿಸಿ, ಅನಧಿಕೃತ ಶಾಲೆಗಳ ಮಾನ್ಯತೆ ರದ್ದುಗೊಳಿಸಿ, ಅಸಲಿಯತ್ತು ಹೊರಬೀಳುವವರೆಗೂ ಡಿಡಿಪಿಐ ಅವರನ್ನು ಈಗಿರುವ ಸ್ಥಾನದಲ್ಲಿಯೇ ಮುಂದುವರಿಸಬೇಕಿತ್ತು ಎಂಬ ಮಾತು ಕೇಳಿ ಬರತೊಡಗಿವೆ.
ಶಾಲೆ ಪ್ರಾರಂಭೋತ್ಸವ ಭರ್ಜರಿಯಾಗಿ ನಡೆದಿದ್ದು, ಈ ಹಂತದಲ್ಲಿ ಬಾಕಿ ಇರುವ ಶಾಲೆಗಳ ಮಾನ್ಯತೆ ನವೀಕರಿಸುವುದು ಮತ್ತು ಅರ್ಹ ಶಾಲೆಗಳಿಗೆ ಹೊಸದಾಗಿ ಮಾನ್ಯತೆ ನೀಡುವುದು ಸೇರಿ ಅನೇಕ ಕಾರ್ಯಗಳು ಇನ್ನೂ ಬಾಕಿ ಇವೆ. ಈವರೆಗೂ ಅನಧಿಕೃತ ಶಾಲೆಗಳ ಪಟ್ಟಿ ಶಿಕ್ಷಣ ಇಲಾಖೆ ಬಹಿರಂಗಗೊಳಿಸಿಲ್ಲ. ನಿಯಮಾವಳಿ ಉಲ್ಲಂಘಿಸಿರುವ ಶಾಲೆಗಳ ಮೇಲೆ ಕ್ರಮ ಕೈಗೊಂಡಿಲ್ಲ. ತಪ್ಪಿತಸ್ಥ ಅಧಿಕಾರಿ ಹಾಗೂ ಸಿಬ್ಬಂದಿ ಮೇಲೆ ಕ್ರಮವಾಗಿಲ್ಲ. ಪರಿಸ್ಥಿತಿ ಹೀಗಿರುವಾಗ ‘ಆಡಳಿತಾತ್ಮಕ ಹಿತದೃಷ್ಠಿ’ಯ ಹೆಸರಲ್ಲಿ ವರ್ಗಾವಣೆ ಮಾಡಿದ್ದು ಸರಿಯೇ? ಎಂಬ ಪ್ರಶ್ನೆ ಎದುರಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net