ಡಿಸಿಸಿ ಬ್ಯಾಂಕ್ ನೇಮಕಾತಿ; ಏಜೆಂಟರ್‌ಗೆ ಎಚ್ಚರಿಕೆ

ಬಾಲಚಂದ್ರ ಜಾರಕಿಹೊಳಿ
ಬಾಲಚಂದ್ರ ಜಾರಕಿಹೊಳಿ
Published on
ಬೆಳಗಾವಿ : ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ (ಡಿಸಿಸಿ) ಬ್ಯಾಂಕ್‌ನ 104 ಹುದ್ದೆಗಳ ನೇರ ನೇಮಕಾತಿ ಪ್ರಕ್ರಿಯೆ ಸಂಪೂರ್ಣ ಪಾರದರ್ಶಕತೆ ಹಾಗೂ ಅರ್ಹತೆಯ ಮಾನದಂಡದಡಿ ನಡೆಯಲಿದೆ. ಹೀಗಾಗಿ ಉದ್ಯೋಗದ ಆಮಿಷವೊಡ್ಡಿ ಹಣ ವಸೂಲಿ ಮಾಡುವ ಮಧ್ಯವರ್ತಿಗಳು ಹಾಗೂ ಏಜೆಂಟರ ಜಾಲಕ್ಕೆ ಯಾರೂ ಬಲಿಯಾಗಬಾರದು ಎಂದು ಬೆಮುಲ್ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ವಿನಂತಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಡಿಸಿಸಿ ಬ್ಯಾಂಕ್‌ನಲ್ಲಿ 83 ಗುಮಾಸ್ತರು, 20 ಸಿಪಾಯಿ ಹಾಗೂ ಒಬ್ಬ ಭದ್ರತಾ ಸಿಬ್ಬಂದಿ ಸೇರಿದಂತೆ ಒಟ್ಟು 104 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಜುಲೈ 27ರಿಂದ ಆಗಸ್ಟ 27ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದ್ದು, ಸೆಪ್ಟೆಂಬರ ಅಂತ್ಯದ ವೇಳೆಗೆ ಸ್ಪರ್ಧಾತ್ಮಕ ಲಿಖಿತ ಪರೀಕ್ಷೆ ನಡೆಸುವ ಉದ್ದೇಶವಿದೆ. ಅಭ್ಯರ್ಥಿಗಳಿಗೆ ಸಮರ್ಪಕ ಸಿದ್ಧತೆಗೆ ಒಂದೂವರೆ ತಿಂಗಳಿಂದ ಎರಡು ತಿಂಗಳ ಕಾಲಾವಕಾಶ ದೊರೆಯಲಿದ್ದು, ಬ್ಯಾಂಕಿಂಗ ವಿಷಯಗಳಲ್ಲಿ ಆಳವಾದ ಅಧ್ಯಯನ ನಡೆಸಿ ಪರೀಕ್ಷೆ ಎದುರಿಸಬೇಕು.
’ನೇರ ನೇಮಕಾತಿ’ ಎಂದರೆ ಆಡಳಿತ ಮಂಡಳಿ ಇಚ್ಛೆಯಂತೆ ಆಯ್ಕೆ ಮಾಡುವ ಪ್ರಕ್ರಿಯೆಯಲ್ಲ .ಅಭ್ಯರ್ಥಿಗಳು ಕಡ್ಡಾಯವಾಗಿ ಲಿಖಿತ ಪರೀಕ್ಷೆಯಲ್ಲಿ ಅರ್ಹತೆ ಗಳಿಸಿದ ಬಳಿಕವೇ ಸಂದರ್ಶನಕ್ಕೆ ಅವಕಾಶ ದೊರೆಯಲಿದ್ದು, ಅಂತಿಮ ಆಯ್ಕೆ ಸಂಪೂರ್ಣ ಅರ್ಹತೆ ಮತ್ತು ಸಾಧನೆಯ ಆಧಾರದ ಮೇಲೆಯೇ ನಡೆಯಲಿದೆ. ನೇಮಕಾತಿ ಪ್ರಕ್ರಿಯೆಯ ನೆಪದಲ್ಲಿ ಉದ್ಯೋಗ ಕೊಡಿಸುವ ಭರವಸೆ ನೀಡಿ ಹಣ ವಸೂಲಿ ಮಾಡುವ ವಂಚಕರ ಬಗ್ಗೆ ತೀವ್ರ ಎಚ್ಚರಿಕೆ ವಹಿಸಿ. ಯಾರಾದರೂ ಉದ್ಯೋಗ ಕೊಡಿಸುವುದಾಗಿ ಹೇಳಿ ಹಣ ಕೇಳಿದರೆ ಯಾವುದೇ ಕಾರಣಕ್ಕೂ ಹಣ ನೀಡದೆ, ತಕ್ಷಣವೇ ಪೊಲೀಸ ಠಾಣೆಗೆ ದೂರು ದಾಖಲಿಸಬೇಕು.
ಡಿಸಿಸಿ ಬ್ಯಾಂಕ್ ನೇಮಕಾತಿ ಪ್ರಕ್ರಿಯೆ ಸಂಪೂರ್ಣ ಪಾರದರ್ಶಕತೆ, ನ್ಯಾಯಸಮ್ಮತತೆ ಹಾಗೂ ಅರ್ಹತೆಯ ತತ್ವದಡಿ ನಡೆಯಲಿದ್ದು, ಪಾಲಕರು ಮಕ್ಕಳನ್ನು ಉತ್ತಮ ಅಧ್ಯಯನಕ್ಕೆ ಪ್ರೋತ್ಸಾಹಿಸಬೇಕು. ಅಭ್ಯರ್ಥಿಗಳು ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಿ ತಮ್ಮ ಸಾಮರ್ಥ್ಯದ ಆಧಾರದ ಮೇಲೆ ಉದ್ಯೋಗ ಗಳಿಸಬೇಕು ಎಂದು ಹಾರೈಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net