ಸಾರ್ವಜನಿಕರಿಗೆ ಗುಂಡಿ ಗಂಡಾಂತರ

ಬೆಳಗಾವಿಯ ಚವಾಟಗಲ್ಲಿ-ಡಿಸಿ ಕಚೇರಿ ಆವರಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಬದಿಯಲ್ಲಿರುವ ಅಪಾಯಕಾರಿ ಗುಂಡಿ.
ಬೆಳಗಾವಿಯ ಚವಾಟಗಲ್ಲಿ-ಡಿಸಿ ಕಚೇರಿ ಆವರಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಬದಿಯಲ್ಲಿರುವ ಅಪಾಯಕಾರಿ ಗುಂಡಿ.
Published on
ಬೆಳಗಾವಿ: ಇಲ್ಲಿನ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ, ಲೋಕಾಯುಕ್ತ, ಜಿಪಂ ಸೇರಿ ವಿವಿಧ ಕಚೇರಿ ಹಾಗೂ ಕೋರ್ಟ್ ಆವರಣಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ಮಾರ್ಗವಾಗಿರುವ ಚವಾಟ ಗಲ್ಲಿ-ಡಿಸಿ ಕಾಂಪೌಂಡ್ ಲಿಂಕ್ ರಸ್ತೆಯಲ್ಲಿ ಗುಂಡಿಗಳು ಜನರ ಪಾಲಿಗೆ ಗಂಡಾಂತರವಾಗಿ ಪರಿಣಮಿಸಿವೆ.
ಚವಾಟ ಗಲ್ಲಿ ಮೂಲಕ ಜಿಲ್ಲಾಧಿಕಾರಿ ಕಚೇರಿಯತ್ತ ತೆರಳುವಾಗ ನೌಕರರ ಭವನ ಎದುರಿನಲ್ಲಿರುವ ಕ್ರಾಸ್‌ನಲ್ಲಿ ರಸ್ತೆ ಪಕ್ಕದ ಗಟಾರು ಮುಚ್ಚಳ ಕಿತ್ತು ಹೋಗಿದ್ದು, ಅದರ ಪಕ್ಕದಲ್ಲಿರುವ (ಜಿಪಂ ಕಚೇರಿಯತ್ತ ಸಾಗುವ ರಸ್ತೆ) ಸರ್ಕಾರಿ ಖಾಲಿ ಜಾಗದ ಆವರಣ ಗೋಡೆ ರಸ್ತೆಯಲ್ಲಿ ವಾಲಿ ಬಿದ್ದಿದೆ.
ಉಳಿದ ಭಾಗವೂ ರಸ್ತೆಯತ್ತ ಉರುಳಿ ಬೀಳುತ್ತಿದ್ದು, ಯಾವುದೇ ಸಂದರ್ಭದಲ್ಲಿ ಅವಘಡ ಸಂಭವಿಸುವ ಸಾಧ್ಯತೆಯಿದೆ. ಈ ಹಿಂದೆ ಹೊಸ ಗಟಾರು ನಿರ್ಮಿಸುವಾಗ ಕಬ್ಬಿಣದ ಸರಳುಗಳನ್ನು ಹಾಕಲಾಗಿದೆಯಾದರೂ ಕಾಮಗಾರಿ ಪೂರ್ಣಗೊಳಿಸಿಲ್ಲ. ಹೀಗಾಗಿ ಗುಂಡಿಯೊಳಗೆ ಸರಳುಗಳು ಹಾಗೆಯೇ ಇದ್ದು, ಇದರಲ್ಲಿ ಬಿದ್ದರೆ ಅಪಾಯ ಖಚಿತ.
ಚವಾಟ ಗಲ್ಲಿಯಿಂದ ಮೇಲ್ಭಾಗದತ್ತ ತೆರಳುವ ಬೈಕ್ ಸವಾರರ ಎದುರಿಗೆ ಯಾವುದಾದರೂ ವಾಹನ ಬಂದಾಗ, ಸ್ವಲ್ಪವೇ ಎಡಕ್ಕೆ ಸರಿದರೂ ನೇರವಾಗಿ ಬೈಕ್ ಇದೇ ಗುಂಡಿಗೆ ಇಳಿಯುತ್ತಿದೆ. ಇಲ್ಲಿ ಹತ್ತಾರು ಕಚೇರಿಗಳು, ಝರಾಕ್ಸ್, ಟೈಪಿಂಗ್, ಇ-ಸ್ಟಾೃಂಪ್ ಮಳಿಗೆಗಳಿವೆ. ನೂರಾರು ಜನ ಓಡಾಡುವ ಪ್ರಮುಖ ರಸ್ತೆ.
ನಿತ್ಯವೂ ಒಬ್ಬರಾದರೂ ಇದರಲ್ಲಿ ಬಿದ್ದು ಪೆಟ್ಟು ತಿನ್ನುತ್ತಿದ್ದಾರೆ. ಈ ಗುಂಡಿ ಪಕ್ಕದಲ್ಲೇ ಈಚೆಗೆ ಕಸ ಚೆಲ್ಲುತ್ತಿದ್ದು, ತಿಪ್ಪೆಗುಂಡಿಯಾಗಿ ಪರಿಣಮಿಸಿದೆ. ತಕ್ಷಣ ಕ್ರಮ ವಹಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net