ಸೈಬರ್​ ವಂಚನೆ, 8 ಜನರ ವಿರುದ್ಧ ಪ್ರಕರಣ

ಎಸ್ಪಿ ಕೆ. ರಾಮರಾಜನ್​
ಎಸ್ಪಿ ಕೆ. ರಾಮರಾಜನ್​
Published on
1.02 ಕೋಟಿ ಹಣ ವರ್ಗಾವಣೆ ಪತ್ತೆ ಮಾಡಿದ ಪೊಲೀಸರು
1,400 ಸಂಶಯಾಸ್ಪದ ಖಾತೆಗಳ ಪರಿಶೀಲನೆ
ಬೆಳಗಾವಿ: ಸೈಬರ್​ ವಂಚನೆಗೆ ಸಂಬಂಧಿಸಿದಂತೆ ಜಿಲ್ಲೆಯ 1,400 ಬ್ಯಾಂಕ್​ ಖಾತೆಗಳು ಕೆಲಸ ಮಾಡಿರುವ ಮಾಹಿತಿ ಆಧರಿಸಿ ನಡೆಸಲಾದ ತನಿಖೆಯಲ್ಲಿ ಮೂರು ಪ್ರತ್ಯೇಕ ಪ್ರಕರಣಗಳಲ್ಲಿ 8 ಜನ ಆರೋಪಿಗಳ 24 ಮ್ಯೂಲ್​ ಅಕೌಂಟ್​ಗಳಿಂದ 1,02,66,928 ರೂ. ವರ್ಗಾವಣೆಯಾಗಿರುವುದು ಪತ್ತೆಯಾಗಿದೆ ಎಂದು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಕೆ.ರಾಮರಾಜನ್​ ತಿಳಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿಪ್ಪಾಣಿಯ ಶುಭಂ ಲಕ್ಕನ್ನವರ, ಅಮಿತ ಶಿಂಧೆ, ರಾಹುಲ ಹಂಚನಾಳೆ, ಅಕ್ಷಯ ಪಸರೆ, ಗಜಾನನ ಧಮೋರ್ಡೆ ಹೆಸರಿನಲ್ಲಿದ್ದ ಖಾತೆಗಳಿಗೆ ಬೇರೆ ರಾಜ್ಯಗಳಲ್ಲಿನ 14 ಪ್ರಕರಣಗಳ 46,12,551 ರೂ. ಹಣ ಜಮೆಯಾಗಿದೆ. ರಾಮದುರ್ಗ ತಾಲೂಕಿನ ಸುರೇಬಾನ ಮನಿಹಾಳ ಗ್ರಾಮದ ಅಷ್ಪಾಕ್​ ಸುರಕೋಡ ಹೆಸರಿನಲ್ಲಿ ಬ್ಯಾಂಕ್​ ಖಾತೆ ತೆರೆದು, ಸೈಬರ್​ ವಂಚಕರಿಗೆ ನೀಡಿದ್ದು, ಈತನ 4 ಖಾತೆಗಳ ಮೇಲೆ ದೇಶಾದ್ಯಂತ 8 ಪ್ರಕರಣ ದಾಖಲಾಗಿವೆ. ಮೂರು ಖಾತೆಗಳಿಗೆ 14,31,301 ರೂ. ವರ್ಗಾವಣೆಯಾಗಿರುವುದು ಪತ್ತೆಯಾಗಿದೆ ಎಂದು ತಿಳಿಸಿದರು.
ಚಿಕ್ಕೋಡಿ ತಾಲೂಕಿನ ಕೆರೂರ ಗ್ರಾಮದ ಸಿದ್ದು ಡಾಂಗ ಮತ್ತು ಕುಲದೀಪ ಬ್ಯಾಳೆ ಅವರು ಪರಿಚಯಸ್ಥರ ಹೆಸರಿನಲ್ಲಿ ಬ್ಯಾಂಕ್​ ಖಾತೆ ತೆರೆದು ಪಾಸ್​ಬುಕ್​, ಎಟಿಎಂ ಜತೆಗೆ ಸಿಮ್​ ಕಾರ್ಡ್​ ಪಡೆದು ಸೈಬರ್​ ಅಪರಾಧಿಗಳಿಗೆ ಸಹಕಾರ ನೀಡಿದ್ದಾರೆ. ಅಂತಹ 15 ಖಾತೆಗಳಿಗೆ 42,13,076 ರೂ. ವರ್ಗಾವಣೆಯಾಗಿದ್ದು, 68 ಪ್ರಕರಣಗಳಲ್ಲಿ ಇವರ ಖಾತೆಗಳ ಪ್ರಸ್ತಾಪವಿದೆ. ಈ ಹಿನ್ನೆಲೆ ಸಿದ್ದು ಮತ್ತು ಕುಲದೀಪನನ್ನು ಬಂಧಿಸಿ, ಅವರ ಮನೆ ಶೋಧ ಮಾಡಲಾಗಿದೆ. ಇನ್ನೂ ಹಲವರಿಂದ ಖಾತೆ ಮಾಡಿಸಿಕೊಂಡು ವಂಚಿಸಿರುವ ಬಗ್ಗೆ ತನಿಖೆ ಮುಂದುವರಿದಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಸಿಸಿಪಿಎಸ್​ ಡಿವೈಎಸ್ಪಿ ವೀರೇಶ ದೊಡ್ಡಮನಿ, ಪಿಐ ಸುನೀಲಕುಮಾರ ನಂದೇಶ್ವರ, ಪಿಎಸ್​ಐ ಆನಂದ ಕ್ಯಾರಕಟ್ಟಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net