ವಿದ್ಯಾರ್ಥಿಗಳಲ್ಲಿರುವ ಸುಪ್ತ ಪತ್ರಿಭೆಗಳ ಅನಾವರಣಗೊಳಿಸುವುದಕ್ಕಾಗಿಯೇ ಆಯೋಜಿಸಿದ್ದ "ಯುಕ್ತಿ" ಹಲವು ಕಲೆಗಳ ಸಂಗಮವಾಗಿ ಮಾರ್ಪಟಿತ್ತು. ಮೊದಲ ದಿನವಾದ ಶುಕ್ರವಾರ ಸಾವಿರಾರು ವಿದ್ಯಾರ್ಥಿಗಳು ಭಾಗವಹಿಸಿ ಏಕ ವ್ಯಕ್ತಿ ನೃತ್ಯ, ಸಮೂಹ ನೃತ್ಯದಲ್ಲಿ ಭಾಗವಹಿಸಿದ್ದರು. ಒಂದು ಕಡೆ ನೃತ್ಯ ಪ್ರೇಕ್ಷರನ್ನು ಬೆರಗುಗೊಳಿಸಿದರೆ, ಮತ್ತೊಂದೆಡೆ ನಡೆದ ಫ್ಯಾಷನ್ ಶೋ ಪಾಶ್ಚಿಮಾತ್ಯ ಮತ್ತು ಭಾರತೀಯ ಸಾಂಪ್ರದಾಯಿಕ, ಆಧುನಿಕ ಉಡುಗೆ ತೊಡುಗೆಗಳ ಪ್ರದರ್ಶನ ನೋಡುಗರನ್ನು ಮನಸೂರೆಗೊಳಿಸಿತು. ಕೆಲವು ವಿದ್ಯಾರ್ಥಿಗಳ ತಂಡ ಪಾಶ್ಚಿಮಾತ್ಯ ಉಡುಗೆಗಳನ್ನು ತೊಟ್ಟು ಪ್ರದರ್ಶನ ನೀಡಿದರೆ, ಮತ್ತೊಂದು ವಿದ್ಯಾರ್ಥಿಗಳ ತಂಡ "ಕುರುಕ್ಷೇತ್ರ"ದಲ್ಲಿ ಬರುವ ಪಾತ್ರಗಳ ನಿರೂಪಿಸುವ ಮೂಲಕ ಪ್ರೇಕ್ಷರಿಗೆ ಗತ ವೈಭವ ಕಾಲವನ್ನು ಪರಿಚಯಿಸಿದರು.