ಕನ್ನಾಳ ಗ್ರಾಮಕ್ಕೆ ಕರ್ನಾಟಕ ಪಬ್ಲಿಕ್ ಸ್ಕೂಲ್ ಮಂಜೂರು ಮಾಡಿದ ಶಾಸಕ ಲಕ್ಷ್ಮಣ ಸವದಿ ಅವರನ್ನು ಸನ್ಮಾನಿಸಲಾಯಿತು. ನಾನಾಗೌಡ ಪಾಟೀಲ, ವೆಂಕಣ್ಣ ಅಸ್ಕಿ, ಚಂದ್ರಶೇಖರ ವಳಸಂಗ ಇತರರಿದ್ದರು.
ಕನ್ನಾಳ ಗ್ರಾಮಕ್ಕೆ ಎಲ್‌ಕೆಜಿ, ಯುಕೆಜಿ ಹಾಗೂ 8ರಿಂದ 12ನೇ ತರಗತಿಯವರೆಗೆ ಕರ್ನಾಟಕ ಪಬ್ಲಿಕ್ ಸ್ಕೂಲ್ ಮಂಜೂರು ಮಾಡಿದ ಹಿನ್ನೆಲೆಯಲ್ಲಿ ಗ್ರಾಮಸ್ಥರಿಂದ ಈಚೆಗೆ ಸನ್ಮಾನ ಸ್ವೀಕರಿಸಿ ಮಾತನಾಡಿ, ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದು ಅವಶ್ಯ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಆಧುನಿಕ ಶಿಕ್ಷಣ ಸಿಗಬೇಕು.
ಕನ್ನಾಳ ಗ್ರಾಮಕ್ಕೆ ಮಂಜೂರಾಗಿರುವ ಕರ್ನಾಟಕ ಪಬ್ಲಿಕ್ ಸ್ಕೂಲ್, ಎಲ್‌ಕೆಜಿಯಿಂದ ಹಿಡಿದು ಪಿಯುಸಿವರೆಗೆ ಗುಣಮಟ್ಟದ ಶಿಕ್ಷಣವನ್ನು ಒಂದೇ ಸೂರಿನಡಿ ನೀಡಲಿದ್ದು, ಬಡ ಪೋಷಕರಿಗೆ ದೊಡ್ಡ ಆಸರೆಯಾಗಲಿದೆ. ಕೇವಲ ಶಾಲೆ ಮಂಜೂರು ಮಾಡುವುದಷ್ಟೇ ಅಲ್ಲ, ಅದಕ್ಕೆ ಬೇಕಾದ ಉತ್ತಮ ಕಟ್ಟಡ, ಪ್ರಸಕ್ತ ತಂತ್ರಜ್ಞಾನ ಹಾಗೂ ಮೂಲ ಸೌಕರ್ಯ ಒದಗಿಸಿ, ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವಂತೆ ಈ ಶಾಲೆಯನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಭರವಸೆ ನೀಡಿದರು.