ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

 ಬೆಲೆ ಏರಿಕೆ ಖಂಡಿಸಿ ಬೆಳಗಾವಿ ಚನ್ನಮ್ಮ ವೃತ್ತದಲ್ಲಿ ಶನಿವಾರ ಕಾಂಗ್ರೆಸ್ ಕಾರ್ಯಕರ್ತರು ರಸ್ತೆಯಲ್ಲೇ ಒಲೆ ಹೂಡಿ ಚಪಾತಿ ಬೇಯಿಸಿ ಪ್ರತಿಭಟಿಸಿದರು.
ಬೆಲೆ ಏರಿಕೆ ಖಂಡಿಸಿ ಬೆಳಗಾವಿ ಚನ್ನಮ್ಮ ವೃತ್ತದಲ್ಲಿ ಶನಿವಾರ ಕಾಂಗ್ರೆಸ್ ಕಾರ್ಯಕರ್ತರು ರಸ್ತೆಯಲ್ಲೇ ಒಲೆ ಹೂಡಿ ಚಪಾತಿ ಬೇಯಿಸಿ ಪ್ರತಿಭಟಿಸಿದರು.
Published on
ಬೆಳಗಾವಿ : ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಸೇರಿ ವಿವಿಧ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿರುವುದನ್ನು ಖಂಡಿಸಿ ನಗರದಲ್ಲಿ ಶನಿವಾರ ಜಿಲ್ಲಾ ಕಾಂಗ್ರೆಸ್ ವತಿಯಿಂದ ಕೇಂದ್ರ ಸರ್ಕಾರದ ವಿರುದ್ಧ ವಿನೂತನವಾಗಿ ಪ್ರತಿಭಟಿಸಲಾಯಿತು.
ನಗರದ ಚನ್ನಮ್ಮ ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು, ರಸ್ತೆಯಲ್ಲೇ ಕಟ್ಟಿಗೆಯ ಒಲೆ ಹೂಡಿ ಚಪಾತಿ ಬೇಯಿಸಿದರು. ಈ ವೇಳೆ ಕಾರ್ಯಕರ್ತೆಯರು ಒಲೆ ಊದುತ್ತ, ಕಣ್ಣೀರು ಹಾಕುವ ಮೂಲಕ ಅಡುಗೆ ಅನಿಲ ಸಿಲಿಂಡರ್ ಸಿಗದೇ ಮಹಿಳೆಯರು ಕಟ್ಟಿಗೆ ಒಲೆಯಲ್ಲಿ ಅಡುಗೆ ಮಾಡಲು ಪಡುತ್ತಿರುವ ಪರದಾಟವನ್ನು ಪ್ರದರ್ಶಿಸಿ, ಕೇಂದ್ರ ಸರ್ಕಾರ ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿರುದ್ಧ ಘೋಷಣೆ ಕೂಗಿದರು.
ದೇಶದಲ್ಲಿ ದಿನದಿಂದ ದಿನಕ್ಕೆ ಇಂಧನ ಮತ್ತು ಗ್ಯಾಸ್ ದರ ಹೆಚ್ಚುತ್ತಿರುವುದರಿಂದ ಇದೆಲ್ಲದರ ಹೊರೆ ಸಾಮಾನ್ಯ ಬಡವರು ಹಾಗೂ ಮಧ್ಯಮ ವರ್ಗದವರ ಮೇಲೆ ಬೀಳುತ್ತಿದೆ. ಇದರ ಜತೆಗೆ ವಿವಿಧ ವಸ್ತುಗಳ ಬೆಲೆ ಸಹಜವಾಗಿ ಏರಿಕೆಯಾಗುತ್ತಿದ್ದು, ಬಡವರು ಬದುಕುವುದೇ ದುಸ್ತರವಾಗಿದೆ. ಬೆಲೆ ಏರಿಕೆ ನಿಯಂತ್ರಿಸುವಲ್ಲಿ ಕೇಂದ್ರ ಸರಕಾರ ಸಂಪೂರ್ಣ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾ ಅಧ್ಯಕ್ಷ ವಿನಯ ನಾವಲಗಟ್ಟಿ, ಮಹಿಳಾ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷೆ ಅಶ್ವಿನಿ ಬೆಳವಡಿ, ಆಯಿಷಾ ಸನದಿ, ಮೋಹನ ರೆಡ್ಡಿ, ಲತಾ ಮಾನೆ, ಫರೀದಾ ನದಾಫ್, ರಾಣಿ ಬಿ., ಆರತಿ ಎಸ್. ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net