ಕಾಂಗ್ರೆಸ್ ಯಾವತ್ತೂ ಮಹಿಳಾ ವಿರೋಧಿ ಅಲ್ಲ

 ಬೆಳಗಾವಿ ನಗರದ ಕಾಂಗ್ರೆಸ್ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾತನಾಡಿದರು. ವಿನಯ ನಾವಲಗಟ್ಟಿ, ದೇವಕಿ, ಅಶ್ವಿನಿ ಬೆಳವಡಿ ಇತರರಿದ್ದರು.
ಬೆಳಗಾವಿ ನಗರದ ಕಾಂಗ್ರೆಸ್ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾತನಾಡಿದರು. ವಿನಯ ನಾವಲಗಟ್ಟಿ, ದೇವಕಿ, ಅಶ್ವಿನಿ ಬೆಳವಡಿ ಇತರರಿದ್ದರು.
Published on
ಬೆಳಗಾವಿ :ದೇಶದಲ್ಲಿಯೇ ಮೊದಲ ಬಾರಿಗೆ ಮಹಿಳೆಯರಿಗೆ ಪ್ರಧಾನಿ, ರಾಷ್ಟ್ರಪತಿ, ರಾಜ್ಯಪಾಲ, ಮುಖ್ಯಮಂತ್ರಿ ಹುದ್ದೆ ಕಲ್ಪಿಸಿ ಮಹಿಳಾ ಸಬಲೀಕರಣಕ್ಕಾಗಿ ಹೋರಾಡುತ್ತಿರುವ ಕಾಂಗ್ರೆಸ್ ಯಾವತ್ತೂ ಮಹಿಳಾ ವಿರೋಧಿ ಅಲ್ಲ. ಬಿಜೆಪಿ ನಾಯಕರು ರಾಜಕೀಯ ಲಾಭಕ್ಕಾಗಿ ಮಹಿಳಾ ಮೀಸಲಾತಿ ಬಳಸಿಕೊಳ್ಳುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಾಗ್ದಾಳಿ ನಡೆಸಿದರು.
ನಗರದ ಕಾಂಗ್ರೆಸ್ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಮಹಿಳಾ ಮೀಸಲಾತಿಯನ್ನು ಯಾವತ್ತೂ ವಿರೋಧಿಸಿಲ್ಲ. ಕ್ಷೇತ್ರ ಮರುವಿಂಗಡಣೆ ಮತ್ತು ಜನಗಣತಿ ಜತೆಗೆ ಮಸೂದೆ ಜಾರಿಗೆ ತರುತ್ತಿರುವುದಕ್ಕೆ ವಿರೋಧ ಮಾಡಿದ್ದೇವೆ. ಮಹಿಳೆಯರ ಮೇಲೆ ಕಾಳಜಿಯಿದ್ದರೆ ಈಗಿನ ಲೋಕಸಭಾ ಸ್ಥಾನಗಳಲ್ಲೇ ತಕ್ಷಣ ಜಾರಿಗೆ ತರಬಹುದಿತ್ತು. ಬಿಜೆಪಿ ಉದ್ದೇಶಪೂರ್ವಕವಾಗಿ ಜನಗಣತಿ ಮತ್ತು ಕ್ಷೇತ್ರ ವಿಂಗಡಣೆ ಎಂಬ ಷರತ್ತುಗಳನ್ನು ಸೇರಿಸಿ ಅದನ್ನು ವಿಳಂಬಗೊಳಿಸಿದೆ ಎಂದು ಟೀಕಿಸಿದರು.
ಮೊದಲ ಮಹಿಳಾ ಪ್ರಧಾನಿ (ಇಂದಿರಾ ಗಾಂಧಿ) , ರಾಷ್ಟ್ರಪತಿ (ಪ್ರತಿಭಾ ಪಾಟೀಲ) ,ಮುಖ್ಯಮಂತ್ರಿ (ಸುಚೇತಾ ಕೃಪಾಲಿನಿ, 1963 ಉತ್ತರ ಪ್ರದೇಶ), ಮಹಿಳಾ ಮಂತ್ರಿ (ರಾಜಕುಮಾರಿ ಅಮೃತ ಕೌರ್, 1947) ಮಾಡಿದ್ದು ಕಾಂಗ್ರೆಸ್ ಹೀಗೆ ರಾಜಕೀಯ ಕ್ಷೇತ್ರದಲ್ಲಿ ಉನ್ನತ ಸ್ಥಾನಮಾನ ಕಲ್ಪಿಸಿರುವ ಕಾಂಗ್ರೆಸ್ ಮಹಿಳಾ ವಿರೋಧಿ ಹೇಗೆ ಆಗುತ್ತದೆ. ನಮ್ಮ ಗ್ಯಾರಂಟ ಯೋಜನೆಗಳು ಸಹ ಮಹಿಳಾ ಸಬಲೀಕರಣದ ಪರವಾಗಿಯೇ ಇವೆ.
ಬಿಜೆಪಿ ಮಾಡುತ್ತಿರುವ ಮಹಿಳಾ ವಿರೋಧಿ ಎಂಬ ಆರೋಪ ಸಂಪೂರ್ಣ ಸುಳ್ಳು ಮತ್ತು ಜನರನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನ. ಇದು ಪೂರ್ವಯೋಜಿತ. ಬಿಜೆಪಿಗೆ ಸೋಲುವುದು ಮೊದಲೇ ಗೊತ್ತಿತ್ತು. ಹಾಗಾಗಿ ಕಾಂಗ್ರೆಸ್‌ಮೇಲೆ ಆರೋಪ ಹೊರಿಸಲು ವ್ಯವಸ್ಥಿತಿ ಕುತಂತ್ರ ಮಾಡಿದೆ.ಮಹಿಳಾ ಮೀಸಲಾತಿ ಬೇರೆ ವಿಷಯ, ಕ್ಷೇತ್ರ ಮರುವಿಂಗಡಣೆ ಬೇರೆ ವಿಷಯ. ಈ ಎರಡನ್ನೂ ಒಟ್ಟಿಗೆ ಕಟ್ಟಿ ಮಸೂದೆ ತಂದು ಗೊಂದಲ ಸೃಷ್ಟಿಸಿರುವುದು ಬಿಜೆಪಿಯ ರಾಜಕೀಯ ಲೆಕ್ಕಾಚಾರ. ಹೀಗಾಗಿ ಮಸೂದೆ ಸೋಲಿಗೆ ಕಾರಣ ಕಾಂಗ್ರೆಸ ಅಲ್ಲ ಎಂದು ಸ್ಪಷ್ಟಪಡಿಸಿದರು.
ಬಿಜೆಪಿಯವರಿಗೆ ನಿಜವಾಗಿ ಕಾಳಜಿ ಇದ್ದಿದ್ದರೆ 2023 ರಲ್ಲಿ ಸಂಸತ ಅಂಗೀಕರಿಸಿದ ಸಂದರ್ಭದಲ್ಲೇ ಜಾರಿಗೊಳಿಸಬೇಕಿತ್ತು. ಆದರೆ ಈಗ ತಮಿಳುನಾಡಿನ, ಪಶ್ಚಿಮ ಬಂಗಾಳದ ಚುನಾವಣೆ ಸಂದರ್ಭದಲ್ಲಿ ತರಾತುರಿಯಲ್ಲಿ ಮಸೂದಗೆ ಮಂಡಿಸುವ ಅಗತ್ಯ ಏನಿತ್ತು? ವಿರೋಧ ಪಕ್ಷದ ಮುಖಂಡರ ಜತೆಗೆ ಚರ್ಚಿಸುವ ಬದಲು, ಮುಖ್ಯಮಂತ್ರಿಗಳನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದೆ, ಸೋಲುವ ಕುರಿತು ಗೊತ್ತಿದ್ದೂ ಹಿಟ್ಲರ ಶಾಹಿಯಂತೆ ವರ್ತನೆ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಭೂತದ ಬಾಯಲ್ಲಿ ಭಗವದ್ಗೀತೆ ಎನ್ನುವಂತೆ ಬಿಜೆಪಿಯವರು ವರ್ತಿಸುತ್ತಿದ್ದಾರೆ. ಹತ್ರಾಸ ಘಟನೆ, ಮಣಿಪುರ ಘಟನೆ ಅವರ ಕಣ್ಣಿಗೆ ಏಕೆ ಕಾಣುತ್ತಿಲ್ಲ? ಈ ಎರಡೂ ಸಂದರ್ಭದಲ್ಲಿ ಅವರು ಹೇಗೆ ನಡೆದುಕೊಂಡರು? ಮಹಿಳಾ ಅಥ್ಲಿಟ್‌ಗಳು ಎಷ್ಟು ಹಿಂಸೆ ಅನುಭವಿಸಿದರು? ಮಹಿಳೆಯನ್ನು ಮನೆಗೆ ಕಟ್ಟಿಹಾಕುವ ಮನುಸ್ಮೃತಿ ಮನೋಭಾವ ಬಿಜೆಪಿಯದ್ದು. ಬಹುಮತವಿಲ್ಲ ಎಂದು ಗೊತ್ತಿದ್ದರೂ ಮಂಡಿಸುವ ಮೂಲಕ ಆಟ ಆಡುತ್ತಿದೆ. ಕಾಂಗ್ರೆಸ ಪಕ್ಷವನ್ನು ಕೆಟ್ಟದಾಗಿ ಬಿಂಬಿಸಲು ಪೂರ್ವಭಾವಿಯಾಗಿ ತಯಾರಿ ಮಾಡಿಕೊಂಡಿದ್ದರು ಎಂದು ದೂರಿದರು.
ಗ್ಯಾರಂಟಿ ಸಮಿತಿ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ, ಕಾಂಗ್ರೆಸ್ ಮಹಿಳಾ ಮೋರ್ಚಾ ರಾಜ್ಯ ಉಪಾಧ್ಯಕ್ಷೆ ದೇವಕಿ, ಜಿಲ್ಲಾಧ್ಯಕ್ಷೆ ಅಶ್ವಿನಿ ಬೆಳವಡಿ, ನಗರ ಅಧ್ಯಕ್ಷೆ ಲತಾ ಮಾನೆ, ಜಯಶ್ರೀ ಮಾಳಗಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net