ಬೆಳಗಾವಿ : ಬಾಗಲಕೋಟೆಯಲ್ಲಿ ಶಿವಾಜಿ ಭಾವಚಿತ್ರದ ಮೆರವಣಿಗೆ ಮೇಲೆ ಕಲ್ಲು ತೂರಿದ ಪ್ರಕರಣವನ್ನು ಖಂಡಿಸಿ ನಗರದಲ್ಲಿ ಶನಿವಾರ ಶ್ರೀರಾಮ ಸೇನೆಯಿಂದ ಪ್ರತಿಭಟನೆ ನಡೆಸಲಾಯಿತು.
ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟಿಸಿದ ಕಾರ್ಯಕರ್ತರು ಕಲ್ಲೆಸೆದ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಶಿವಾಜಿ ಜಯಂತಿ ಪ್ರಯುಕ್ತ ಶಾಂತಿಯುತವಾಗಿ ಮೆರವಣಿಗೆ ಸಾಗುತ್ತಿದ್ದಾಗ, ಕಾರಣವೇ ಇಲ್ಲದೇ ಕಲ್ಲು ತೂರಾಟ ಮಾಡಿದ್ದು ಖಂಡನೀಯ. ಈ ಮೂಲಕ ಶಿವಾಜಿ ಮಹಾರಾಜರಿಗೆ ಅವಮಾನ ಮಾಡುವ ಜತೆಗೆ ಕಾನೂನು ಸುವ್ಯವಸ್ಥೆಗೂ ಧಕ್ಕೆ ತಂದಿದ್ದಾರೆ. ಸರ್ಕಾರ ಈ ಘಟನೆ ಗಂಭೀರವಾಗಿ ಪರಿಗಣಿಸಬೇಕು. ಈಗಾಗಲೇ ಕೆಲವರನ್ನು ಬಂಧಿಸಿದ್ದರೂ, ಇನ್ನೂ ತುಂಬಾ ಜನರ ಬಂಧನವಾಗಬೇಕಿದೆ. ಈ ಬಗ್ಗೆ ಸೂಕ್ತ ತನಿಖೆ ಮಾಡಿ ಹಿಂದರ ಹಿಂದೆ ಯಾರ ಕೈವಾಡ ಇದೆ ಎಂಬುದನ್ನು ಬಯಲಿಗೆಳೆದು ಅಂತವರ ಮೇಲೂ ಕಠಿಣ ಕ್ರಮ ಕೈಗೊಳ್ಳಬೇಕು. ಕಲ್ಲೆಸೆದ ಕಿಡಿಗೇಡಿಗಳ ಮೇಲೆ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದರು.
ಸೇನೆಯ ಉತ್ತರ ಕರ್ನಾಟಕ ಅಧ್ಯಕ್ಷ ರವಿಕುಮಾರ ಕೋಕಿತ್ಕರ, ಉಪಾಧ್ಯಕ್ಷ ವಿನಯ ಅಂಗೊಳ್ಳಿ, ಓಂಕಾರ ಘೋಡಸೆ, ಸಂತೋಷ ಜಾಧವ, ಕುಷಲ್ ಅಂಬೋಳಕರ, ಕಲ್ಲಪ್ಪ ಶಹಾಪುರಕರ ಇತರರಿದ್ದರು.