ಮಾದಕ ವ್ಯಸನ ಮುಕ್ತ ಬೆಳಗಾವಿಗೆ ಸಂಕಲ್ಪ

 ಭೂಷಣ ಬೋರಸೆ
ಭೂಷಣ ಬೋರಸೆ
Published on
ಬೆಳಗಾವಿ: ನಗರವನ್ನು ಮಾದಕ ವ್ಯಸನ ಮುಕ್ತವನ್ನಾಗಿ ಮಾಡಲು ಸಂಕಲ್ಪ ಮಾಡಿದ್ದು, ಈ ನಿಟ್ಟಿನಲ್ಲಿ ಮಾದಕ ವಸ್ತುಗಳ ಮಾರಾಟಗಾರರು ಮತ್ತು ವ್ಯಸನಿಗಳ ವಿರುದ್ಧವೂ ನಿರ್ದಾಕ್ಷಿಣ್ಯವಾಗಿ ಕೇಸ್ ದಾಖಲಿಸುತ್ತಿದ್ದೇವೆ ಎಂದು ಪೊಲೀಸ್ ಆಯುಕ್ತ ಭೂಷಣ ಬೋರಸೆ ಹೇಳಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ವರ್ಷ ಎನ್‌ಡಿಪಿಎಸ್ ಕಾಯ್ದೆಯಡಿ 200ಕ್ಕೂ ಹೆಚ್ಚು ಕೇಸ್ ಮಾಡಿದ್ದೇವೆ. ಕಳೆದ ವರ್ಷ ಕೇವಲ 50 ಮಾತ್ರ ಇದ್ದವು. ಈ ಕೇಸ್‌ಗಳ ಪೈಕಿ 48 ಪ್ರಕರಣ ಮಾರಾಟಗಾರರ ವಿರುದ್ಧ, ಉಳಿದೆಲ್ಲವೂ ಖರೀದಿಸಿವರು ಮತ್ತು ಸೇವಿಸಿದವರ ವಿರುದ್ಧ ಇವೆ. ಗಾಂಜಾ ಸೇವಿಸುವರಲ್ಲೂ ಕಾನೂನು ಭಯ ಹುಟ್ಟಿಸಲು ಅವರ ಮೇಲೂ ಕೇಸ್ ಹಾಕುತ್ತಿದ್ದೇವೆ ಎಂದರು.
ಈ ವರ್ಷ ಸುಮಾರು ರೂ. 35 ಲಕ್ಷಕ್ಕೂ ಹೆಚ್ಚು ಮೌಲ್ಯದ ಗಾಂಜಾ ಮತ್ತಿತರೆ ಮಾದಕ ವಸ್ತುಗಳನ್ನು ಜಪ್ತಿ ಮಾಡಿಕೊಂಡಿದ್ದೇವೆ. 276 ಜನರನ್ನು ದಸ್ತಗಿರ ಮಾಡಿದ್ದೇವೆ. ಶಾಲಾ-ಕಾಲೇಜ್‌ಗಳಲ್ಲಿ ನಾರ್ಕೊಟಿಕ್ ಟೆಸ್ಟ್ ಮಾಡುವ ಸಂಬಂಧ ಈಗಾಗಲೇ ಪ್ರಾಚಾರ್ಯರುಗಳಿಗೆ ಪತ್ರ ಬರೆದಿದ್ದೇವೆ. ಜಿಲ್ಲಾಧಿಕಾರಿಗಳಲ್ಲಿ ಅನುಮತಿ ಸಹ ಕೇಳಿದ್ದು, ಶೀಘ್ರವೇ ಅಭಿಯಾನ ಆರಂಭಿಸಿ, ವಿದ್ಯಾರ್ಥಿಗಳ ಮೂತ್ರ ಮತ್ತು ರಕ್ತ ತಪಾಸಣೆ ಮಾಡುತ್ತೇವೆ. ಗಾಂಜಾ ಅಥವಾ ಬೇರೆ ಮಾದಕ ವಸ್ತು ಸೇವಿಸಿದ್ದಲ್ಲಿ ಇದರಿಂದ ಪತ್ತೆಯಾಗುತ್ತದೆ. ಅಪ್ರಾಪ್ತ ವಿದ್ಯಾರ್ಥಿಗಳ ತಪಾಸಣೆಯನ್ನು ಪಾಲಕರ ಅನುಮತಿ ಪಡೆದುಕೊಂಡೇ ಮಾಡಲಿದ್ದೇವೆ. ಪಾಲಕರೂ ಇದಕ್ಕೆ ಸಹಕರಿಸಬೇಕು ಎಂದು ಕೇಳಿಕೊಂಡರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net