ಸಿವಿಲ್ ಪೊಲೀಸ್ ಕಾನ್‌ಸ್ಟೆಬಲ್ ಪರೀಕ್ಷೆ ಸುಸೂತ್ರ

ಬೆಳಗಾವಿಯಲ್ಲಿ ಭಾನುವಾರ ಪರೀಕ್ಷಾ ಕೇಂದ್ರ ಪ್ರವೇಶಿಸಲು ಸರತಿಯಲ್ಲಿ ನಿಂತಿದ್ದ ಅಭ್ಯರ್ಥಿಗಳು.
ಬೆಳಗಾವಿಯಲ್ಲಿ ಭಾನುವಾರ ಪರೀಕ್ಷಾ ಕೇಂದ್ರ ಪ್ರವೇಶಿಸಲು ಸರತಿಯಲ್ಲಿ ನಿಂತಿದ್ದ ಅಭ್ಯರ್ಥಿಗಳು.
Published on

ಜಿಲ್ಲೆಯಲ್ಲಿ ಭಾನುವಾರ ಸಿವಿಲ್ ಪೊಲೀಸ್ ಕಾನ್‌ಸ್ಟೆಬಲ್ ಲಿಖಿತ ಪರೀಕ್ಷೆಯನ್ನು ಬಿಗಿ ಭದ್ರತೆಯ ಮಧ್ಯೆ ಕೈಗೊಳ್ಳಲಾಯಿತು. ಪ್ರಶ್ನೆ ಪತ್ರಿಕೆ ರವಾನೆಯಿಂದ ಹಿಡಿದು ಪರೀಕ್ಷೆ ಪೂರ್ಣಗೊಂಡು ಉತ್ತರ ಪತ್ರಿಕೆಗಳನ್ನು ಭದ್ರಪಡಿಸುವವರೆಗೂ ಎಲ್ಲವೂ ಖುದ್ದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ನಿಗಾದಲ್ಲಿ ನಡೆದವು.

ಒಟ್ಟು 3,991 ಸಿವಿಲ್ ಪೊಲೀಸ್ ಕಾನ್‌ಸ್ಟೆಬಲ್ ಹುದ್ದೆಗಳ ಭರ್ತಿ ಬಯಸಿ ಜಿಲ್ಲೆಯಲ್ಲಿ 25,156 ಅಭ್ಯರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು. ಬೆಳಗಾವಿ ಶೈಕ್ಷಣಿಕ ಜಿಲ್ಲೆಯ 56 ಹಾಗೂ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ 61 ಕೇಂದ್ರಗಳಲ್ಲಿ ನಡೆದ ಪರೀಕ್ಷೆಯಲ್ಲಿ ಒಟ್ಟು 23,590 ಅಭ್ಯರ್ಥಿಗಳು ಹಾಜರಾಗಿದ್ದರು. ಬೆಳಗಾವಿಯಲ್ಲಿ 19,908 ಅಭ್ಯರ್ಥಿಗಳ ಪೈಕಿ 18,751 ಹಾಜರು ಹಾಗೂ 1,157 ಗೈರು, ಚಿಕ್ಕೋಡಿ ವ್ಯಾಪ್ತಿಯಲ್ಲಿ 5,256 ಅಭ್ಯರ್ಥಿಗಳಲ್ಲಿ 4,839 ಹಾಜರು ಮತ್ತು 417 ಗೈರಾಗಿದ್ದಾರೆ.
ಮುಖ ಚಹರೆ ಪತ್ತೆ ತಂತ್ರಜ್ಞಾನದ ಮೂಲಕ ತಪಾಸಣೆ ಜತೆಗೆ ಕಿವಿಯಲ್ಲಿ ಬ್ಲುಟೂತ್ ಮಾದರಿಯ ಸಾಧನಗಳು ಇಟ್ಟುಕೊಳ್ಳದಂತೆ ಪರಿಶೀಲಿಸಲು ವಿಶೇಷವಾಗಿ 64 ಇಎನ್‌ಟಿ ತಜ್ಞರ ತಂಡಗಳನ್ನು ನಿಯೋಜಿಸಲಾಗಿತ್ತು. 61 ಪರೀಕ್ಷಾ ಕೇಂದ್ರಗಳಿಗೆ ತಲಾ ಒಬ್ಬರಂತೆ ಮುಖ್ಯ ಅಧೀಕ್ಷಕರು, ಪ್ರಶ್ನೆಪತ್ರಿಕಾ ಪಾಲಕರು, ವಿಶೇಷ ಜಾಗೃತ ದಳ ಸದಸ್ಯರು, ಪರೀಕ್ಷಾ ವೀಕ್ಷಕರು, ವಸ್ತ್ರಸಂಹಿತೆ ಅಧಿಕಾರಿಗಳನ್ನು ನಿಯೋಜಿಸಲಾಗಿತ್ತು. ಪ್ರಶ್ನೆಪತ್ರಿಕೆ ಸಾಗಿಸುವ ವಾಹನಗಳಿಗೆ ಒಬ್ಬ ಮಾರ್ಗಾಧಿಕಾರಿ, ಒಬ್ಬ ಗನ್‌ಮ್ಯಾನ್ ಹಾಗೂ 500ಕ್ಕೂ ಅಧಿಕ ಪೊಲೀಸರು ಸೇರಿ 1,200 ಸಿಬ್ಬಂದಿ ನಿಯೋಜನೆಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net