ಕಳೆದ ನಾಲ್ಕೈದು ತಿಂಗಳಿಂದ ಸಾರ್ವಜನಿಕರು ತಮ್ಮ ಆಸ್ತಿಗೆ ಇ-ಸ್ವತ್ತು ಮಾಡಿಸಿಕೊಳ್ಳಲು ಅರ್ಜಿ ಸಲ್ಲಿಸುತ್ತಿದ್ದಾರೆ. ಆದರೆ, ದಾಖಲೆಗಳ ಸಮಸ್ಯೆ, ಹೆಸರು ನೋಂದಣಿ ಆಗದಿರುವ, ಮಹತ್ವ ದಾಖಲೆಗಳು ಸಿಗದಿರುವ ಹಿನ್ನೆಲೆ ಆಸ್ತಿಗಳಿಗೆ ಇ-ಸ್ವತ್ತು ಆಗುತ್ತಿಲ್ಲ. ಕಂದಾಯ ವಿಭಾಗದ ಕಚೇರಿಗಳಲ್ಲಿ ಅಂದಾಜು 250ಕ್ಕೂ ಅಧಿಕ ಆಸ್ತಿಗಳ ದಾಖಲೆಗಳಿಲ್ಲ ಎಂಬ ಒಂದೇ ಉತ್ತರ ಕೇಳಿಬರುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಸ್ಪಷ್ಟ ಮಾಹಿತಿ ನೀಡದೆ ಕೈಕಟ್ಟಿ ಕುಳಿತಿದ್ದಾರೆ.ಹಲವು ವರ್ಷಗಳ ಹಿಂದಿನ ಆಸ್ತಿ ದಾಖಲೆಗಳು, ಫೈಲ್‌ಗಳು ಹಾಗೂ ರಿಜಿಸ್ಟರ್‌ಗಳು ನಾಪತ್ತೆಯಾಗಿರುವುದರಿಂದ ಆಸ್ತಿ ಸಂಬಂಧಿತ ವ್ಯವಹಾರಗಳು ಸಂಪೂರ್ಣ ಸ್ಥಗಿತಗೊಂಡಿವೆ.ಈ ಸಮಸ್ಯೆಯಿಂದಾಗಿ ಮನೆ ನಿರ್ಮಾಣ ಅನುಮತಿ, ಖಾತೆ ಪ್ರಮಾಣಪತ್ರ, ಆಸ್ತಿ ತೆರಿಗೆ ಪಾವತಿ, ಸಾಲಕ್ಕೆ ಅಗತ್ಯ ದಾಖಲೆಗಳನ್ನು ಪಡೆಯಲು ಜನರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಕೆಲವರು ಕಚೇರಿಗಳಿಗೆ ಅಲೆದಾಡುತ್ತಿದ್ದರೂ ಯಾವುದೇ ಫಲಿತಾಂಶ ಸಿಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.