ಸಂಕೇಶ್ವರ: ಇಂದಿನ ದಿನಗಳಲ್ಲಿ ಕೆಲ ಯುವ ಕಲಾವಿದರು ಜಾನಪದ ಹಾಡು ಹಾಗೂ ಸಂಭಾಷಣೆಗಳಲ್ಲಿ ಅಶ್ಲೀಲ ಪದ ಬಳಸುತ್ತಿರುವುದರಿಂದ ಕನ್ನಡ ನಾಡಿನ ಸಂಸ್ಕೃತಿ, ಪರಂಪರೆಗೆ ಧಕ್ಕೆಯಾಗುತ್ತಿದೆ ಎಂದು ಸಾಹಿತಿ ಡಾ.ಭಾರತಿ ಮಠದ ವಿಷಾದ ವ್ಯಕ್ತಪಡಿಸಿದರು.
ಇಲ್ಲಿನ ಶಿವನಂದಾ ಕಲಾ, ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದೊಂದಿಗೆ ಶನಿವಾರ ಹಮ್ಮಿಕೊಂಡಿದ್ದ ಚಾಲುಕ್ಯ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜಾನಪದ ಸಾಹಿತ್ಯದ ತಿರುಳನ್ನು ಮಕ್ಕಳಿಗೆ ತಿಳಿಸಬೇಕು ಎಂದರು.
ಕನ್ನಡ ಪ್ರಾಧ್ಯಾಪಕ ದೇಮಣ್ಣ ಸೊಗಲದ ಮಾತನಾಡಿ, ಶಿಕ್ಷಕರು ಹಾಗೂ ಪಾಲಕರು ನಾಡಿನ ಕಲೆ, ಸಾಹಿತ್ಯ ಹಾಗೂ ಸಾಂಸ್ಕೃತಿಕ ಪರಂಪರೆ ಕುರಿತು ಮಕ್ಕಳಿಗೆ ತಿಳಿಸಬೇಕು ಎಂದರು.
ನಂತರ ವಿವಿಧ ಕಲಾ ತಂಡಗಳಿಂದ ಜಾನಪದ ಗೀತೆ, ಸೋಬಾನ ಪದ, ಭಾವಗೀತೆ, ವಚನ ಗಾಯನ, ಭರತ ನಾಟ್ಯ, ಸಾಮೂಹಿಕ ನೃತ್ಯ, ಶಿವ ಭಜನೆ, ನಾಡು ನುಡಿ, ಭಕ್ತಿಗೀತೆ, ಗೀಗಿ ಪದ, ಜಾನಪದ ನೃತ್ಯ ಪದರ್ಶನ ನಡೆದವು.