ಸೊಪ್ಪಡ್ಲ ಗ್ರಾಮದ ಜಮೀನಿನಲ್ಲಿ ರಾಜ್ಯ ಬಿಜೆಪಿ ತಂಡ ಬರ ಪರಿಶೀಲನೆ ನಡೆಸಿತು. ಎನ್.ರವಿಕುಮಾರ, ಶಶಿಕಲಾ ಜೊಲ್ಲೆ, ದುರ್ಯೋಧನ ಐಹೊಳೆ, ವಿಠ್ಠಲ ಹಲಗೇಕರ, ಬಿ.ಎಸ್.ನಡಹಳ್ಳಿ, ಸಂಜಯ ಪಾಟೀಲ, ಸುಭಾಸ ಪಾಟೀಲ ಇತರರು ಇದ್ದರು.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಬರ ವೀಕ್ಷಣೆ ಮಾಡುವುದನ್ನು ಬಿಟ್ಟು ಬಿತ್ತನೆ ಕಾರ್ಯ ಕೈಗೊಳ್ಳಬೇಡಿ ಎಂದು ಹೇಳುತ್ತಿರುವ ನಾಚಿಕೆಗೇಡಿನ ಸಂಗತಿ. ಸರ್ಕಾರ ಹಾಗೂ ಅಧಿಕಾರಿಗಳು ರೈತರ ನೆರವಿಗೆ ಧಾವಿಸಲಿ ಎಂದು ವಿಧಾನ ಪರಿಷತ್ ಸದಸ್ಯ
ಎನ್.ರವಿಕುಮಾರ ಆಗ್ರಹಿಸಿದರು.
ಬಿಜೆಪಿ ಬರ ಅಧ್ಯಯನ ತಂಡದ ನೇತೃತ್ವ ವಹಿಸಿ ರಾಮದುರ್ಗ ತಾಲೂಕಿನ ಕೆ.ಚಂದರಗಿ ಹಾಗೂ ಕಟಕೋಳ ಗ್ರಾಮಕ್ಕೆ ಭೇಟಿ ನೀಡಿ ವಿವಿಧ ಬೆಳೆ ಹಾಗೂ ಕೆರೆ ವೀಕ್ಷಿಸಿ ಮಾತನಾಡಿದರು. ಜಿಲ್ಲೆಯಲ್ಲೇ ಅತಿ ಹಿಂದುಳಿದ ರಾಮದುರ್ಗ ತಾಲೂಕಿನಲ್ಲಿ ಮಳೆ ಇಲ್ಲದೆ ಸಾಕಷ್ಟು ಬೆಳೆ ನಾಶವಾಗಿದೆ. ಈ ವರ್ಷದ ಬೆಳೆ ವಿಮೆ ಹಣವನ್ನೂ ಸರ್ಕಾರವೇ ಭರಿಸಬೇಕು ಎಂದರು.
ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಎ.ಎಸ್.ಪಾಟೀಲನಡಹಳ್ಳಿ ಮಾತನಾಡಿ, ಕಾಂಗ್ರೆಸ್ ಸರ್ಕಾರ ಉತ್ತರ ಕರ್ನಾಟಕದ ನೀರಾವರಿ ಯೋಜನೆಗಳಿಗೆ ಹಣ ಬಿಡುಗಡೆ ಮಾಡಿಲ್ಲ. ಬರ ವೀಕ್ಷಣೆ ಮಾಡಲು ಬಿಜೆಪಿ 6 ತಂಡ ರಾಜ್ಯಾದ್ಯಂತ ಸಂಚರಿಸುತ್ತಿದೆ. ಸಂಪೂರ್ಣ ಮಾಹಿತಿ ಕಲೆ ಹಾಕಿ, ವರದಿಯನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿ ಪರಿಹಾರಕ್ಕೆ ಆಗ್ರಹಿಸಲಾಗುವುದು ಎಂದು ತಿಳಿಸಿದರು.
ಮುಖಂಡ ಸಿ.ಬಿ.ಪಾಟೀಲ ಮಾತನಾಡಿ, ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಹಾನಿಗೊಳಗಾದ ಬೆಳೆಗಳ ಸಮರ್ಪಕ ಸಮೀಕ್ಷೆ ನಡೆಸಿ ಅರ್ಹ ರೈತರಿಗೆ ಸರ್ಕಾರದಿಂದ ಪರಿಹಾರ ದೊರಕಿಸಿಕೊಡಬೇಕು ಎಂದರು.
ಗೊಡಚಿ ರಸ್ತೆಯಲ್ಲಿರುವ ಸಿ.ಬಿ.ಪಾಟೀಲ ತೋಟದ ಮನೆಯಲ್ಲಿ ರೈತರ ಜತೆಗೆ ಬಿಜೆಪಿ ತಂಡ ಸಂವಾದ ನಡೆಸಿತು. ಶಾಶ್ವತ ನೀರಾವರಿ ಹಾಗೂ ಈಗಾಗಲೇ ಆರಂಭಿಸಲಾಗಿರುವ ಏತ ನೀರಾವರಿ ಯೋಜನೆ ತ್ವರಿತವಾಗಿ ಮುಗಿಸುವ ಕೆಲಸ ಮಾಡಬೇಕು. ಬರಪೀಡಿತ ಹಿನ್ನೆಲೆಯಲ್ಲಿ ಸರ್ಕಾರ ಪರಿಹಾರ ನೀಡಬೇಕು ಎಂದು ರೈತರು ಒತ್ತಾಯಿಸಿದರು.