ಭೂಮಿ ಹಸ್ತಾಂತರಕ್ಕೆ ಸಿಇಒ-ಡಿಸಿ ಜಟಾಪಟಿ!

ಜಿಲ್ಲಾಧಿಕಾರಿ ಮೊಹಮ್ಮದ ರೋಷನ್
ಜಿಲ್ಲಾಧಿಕಾರಿ ಮೊಹಮ್ಮದ ರೋಷನ್
Published on
ಬೆಳಗಾವಿ"ನಗರದ ದಂಡು ಮಂಡಳಿ ವ್ಯಾಪ್ತಿಯ ನಾಗರಿಕ ಪ್ರದೇಶವನ್ನು ಮಹಾನಗರ ಪಾಲಿಕೆಗೆ ಹಸ್ತಾಂತರಿಸುವ ವಿಚಾರ ಇದೀಗ ಜಿಲ್ಲಾಡಳಿತ ಹಾಗೂ ದಂಡು ಮಂಡಳಿ ನಡುವೆ ಜಟಾಪಟಿಗೆ ಎಡೆ ಮಾಡಿಕೊಟ್ಟಿದ್ದು, 756 ಎಕರೆ ಪ್ರದೇಶ ಹಸ್ತಾಂತರಕ್ಕೆ ಜಿಲ್ಲಾಡಳಿತ ಒತ್ತಾಯಿಸುತ್ತಿದ್ದರೆ, ಕೇವಲ 112 ಎಕರೆ ಪ್ರದೇಶವನ್ನಷ್ಟೇ ಹಸ್ತಾಂತರಿಸುವ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ದಂಡು ಮಂಡಳಿ ಸಿಇಒ ಪ್ರತಿಪಾದಿಸಿರುವುದು ವಾದವಿವಾದಕ್ಕೆ ಕಾರಣವಾಗಿದೆ.
ಈ ಕುರಿತು ಗುರುವಾರ ಸುದ್ದಿಗಾರರೊಂದಿಗೆ ಜಿಲ್ಲಾಧಿಕಾರಿ ಮೊಹಮ್ಮದ ರೋಷನ್ ಮಾತನಾಡಿ,ದಂ ಮಂಡಳಿ ವ್ಯಾಪ್ತಿಯ ಮಾರುಕಟ್ಟೆ, ಜನವಸತಿ ಪ್ರದೇಶ, ರಸ್ತೆಗಳು, ಸಾರ್ವಜನಿಕ ಸ್ಥಳಗಳು, ಖಾಲಿ ನಿವೇಶನಗಳು ಸೇರಿದಂತೆ ಮನೆಗಳು, ವಾಣಿಜ್ಯ ಕಟ್ಟಡಗಳು, ಬಂಗಲೆಗಳು, ಖಾಲಿ ನಿವೇಶನಗಳು, ಮಾರುಕಟ್ಟೆಗಳು, ರಸ್ತೆಗಳು ಸೇರಿದಂತೆ ನಾಗರಿಕ ಪ್ರದೇಶಕ್ಕೆ ಸಂಬಂಧಿಸಿದ ವಿವಿಧ ಅಂಶಗಳನ್ನು ಒಳಗೊಂಡ ಸುಮಾರು 700 ಪುಟಗಳ ಸಮಗ್ರ ವರದಿ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಈ ವರದಿಯನ್ನು ಆಧರಿಸಿ ಶೀಘ್ರದಲ್ಲೇ ಸಚಿವ ಸಂಪುಟದ ಅನುಮೋದನೆ ದೊರೆಯುವ ನಿರೀಕ್ಷೆಯಿದೆ.
ದಂಡು ಮಂಡಳಿಯಿಂದ ಪ್ರತ್ಯೇಕವಾಗಿ ಯಾವುದೇ ವರದಿಯನ್ನು ಸರ್ಕಾರ ಕೇಳಿಲ್ಲ. ಆದರೂ ದಂಡು ಮಂಡಳಿ ಸಿಇಒ ಅವರು ಸ್ವಯಂಪ್ರೇರಿತವಾಗಿ 112 ಎಕರೆ ಪ್ರದೇಶ ಮಾತ್ರ ಹಸ್ತಾಂತರಿಸುವ ಪ್ರಸ್ತಾವನೆ ಸಲ್ಲಿಸಿದ್ದಾರೆ. ಸೇನಾ ಚಟುವಟಿಕೆಗಳಿಗೆ ಅಗತ್ಯವಿರುವ ಭೂಮಿಯನ್ನು ದಂಡು ಮಂಡಳಿ ತನ್ನ ಬಳಿ ಉಳಿಸಿಕೊಂಡು, ಉಳಿದ ಪ್ರದೇಶದಲ್ಲಿರುವ ಜನವಸತಿ, ಮಾರುಕಟ್ಟೆ, ರಸ್ತೆ ಹಾಗೂ ಖಾಲಿ ಪ್ರದೇಶಗಳನ್ನು ಮಹಾನಗರ ಪಾಲಿಕೆಗೆ ಹಸ್ತಾಂತರಿಸುವ ಉದ್ದೇಶವಾಗಿದೆ.
ಈಗಾಗಲೇ ದಂಡು ಮಂಡಳಿ ವ್ಯಾಪ್ತಿಯ ಹಲವು ಮಾರುಕಟ್ಟೆ ಪ್ರದೇಶಗಳು ಹಾಗೂ ರಸ್ತೆಗಳನ್ನು ಈಗಾಗಲೇ ಮಹಾನಗರ ಪಾಲಿಕೆಯೇ ನಿರ್ವಹಣೆ ಮಾಡುತ್ತಿದೆ. ಹೀಗಾಗಿ ನಾಗರಿಕರಿಗೆ ಸಂಬಂಧಿಸಿದ ಪ್ರದೇಶಗಳನ್ನು ಪಾಲಿಕೆಯ ಆಡಳಿತ ವ್ಯಾಪ್ತಿಗೆ ತರುವ ಮೂಲಕ ಅಭಿವೃದ್ಧಿ ಕಾಮಗಾರಿಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಕೈಗೊಳ್ಳಬಹುದು ಎಂಬುದು ಜಿಲ್ಲಾಡಳಿತದ ವಾದವಾಗಿದೆ.
....
112 ಎಕರೆ ಪ್ರಸ್ತಾವನೆ ಅಂತಿಮವಾಗಿಲ್ಲ
ಇತ್ತ, ದಂಡು ಮಂಡಳಿ ವ್ಯಾಪ್ತಿಯ 112 ಎಕರೆ ಪ್ರದೇಶ ಹಸ್ತಾಂತರಿಸುವ ಪ್ರಸ್ತಾವನೆ ರಾಜ್ಯ ಸರ್ಕಾರಕ್ಕೆ ಕಳುಹಿಸಲಾಗಿದೆ.ಆದರೆ ಈ ಪ್ರಸ್ತಾವನೆಗೆ ರಾಜ್ಯ ಸರ್ಕಾರದಿಂದ ಇನ್ನೂ ಅಂತಿಮ ಅಧಿಕೃತ ಅನುಮೋದನೆ ದೊರೆತಿಲ್ಲ. ಹೀಗಾಗಿ ಮಹಾನಗರ ಪಾಲಿಕೆಗೆ 756 ಎಕರೆ ಪ್ರದೇಶ ಹಸ್ತಾಂತರಿಸುವ ಪ್ರಕ್ರಿಯೆ ಕೂಡ ಅಂತಿಮಗೊಂಡಿಲ್ಲ ಎಂದು ದಂಡು ಮಂಡಳಿ ಸಿಇಒ ಸ್ಪಷ್ಟಪಡಿಸಿದ್ದಾರೆ.ಹೀಗಾಗಿ ಒಂದೆಡೆ ಜಿಲ್ಲಾಡಳಿತ 756 ಎಕರೆ ಪ್ರದೇಶದ ಹಸ್ತಾಂತರಕ್ಕೆ ಪಟ್ಟು ಹಿಡಿದಿದ್ದರೆ, ಮತ್ತೊಂದೆಡೆ ದಂಡು ಮಂಡಳಿ 112 ಎಕರೆಗೆ ಸೀಮಿತವಾಗಿರುವ ಪ್ರಸ್ತಾವನೆ ಮುಂದಿಟ್ಟಿರುವುದು ಇದೀಗ ಕುತೂಹಲಕ್ಕೆ ಕಾರಣವಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net