ಅಪರಾಧ ತಡೆಗೆ ಕ್ಯಾಮರಾ ನಿಗಾ

ಬೆಳಗಾವಿಯ ಕಂಬಳಿಕೂಟ ವೃತ್ತದಲ್ಲಿ ಗುರುವಾರ ಕ್ಯಾಮರಾ ಅಳವಡಿಸಿದ ಸಿಬ್ಬಂದಿ.
ಬೆಳಗಾವಿಯ ಕಂಬಳಿಕೂಟ ವೃತ್ತದಲ್ಲಿ ಗುರುವಾರ ಕ್ಯಾಮರಾ ಅಳವಡಿಸಿದ ಸಿಬ್ಬಂದಿ.
Published on
ಬೆಳಗಾವಿ: ನಗರದಲ್ಲಿ ಅಪರಾಧ ಚಟುವಟಿಕೆಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆಯ ಮೇಲೆ ಕಣ್ಗಾವಲಿಡುವುದಕ್ಕಾಗಿ ನಗರದ ಉತ್ತರ ಮತ್ತು ದಕ್ಷಿಣ ವಲಯದಲ್ಲಿ ಸೂಕ್ಷ್ಮ ಪ್ರದೇಶಗಳು, ಜನ ಮತ್ತು ವಾಹನ ಹೆಚ್ಚಾಗಿ ಓಡಾಡುವ ಪ್ರದೇಶಗಳನ್ನು ಗುರುತಿಸಿ, ಈಗ ಸಿಸಿಟಿವಿ ಕ್ಯಾಮರಾ ಅಳವಡಿಸಲು ನಗರ ಪೊಲೀಸ್ ಕಮೀಷ್ನರೇಟ್ ಮುಂದಾಗಿದೆ.
ಈಗಾಗಲೇ ಈ ಸಂಬಂಧ ಸಮೀಕ್ಷೆ ಮಾಡಿರುವ ಪೊಲೀಸ್ ಇಲಾಖೆ ಪ್ರಮುಖ ವೃತ್ತಗಳಲ್ಲಿ ಮೊದಲ ಹಂತದಲ್ಲಿ ಒಟ್ಟು 250 ಸಿಸಿಟಿವಿ ಕ್ಯಾಮರಾ ಅಳವಡಿಸಿದ್ದಾರೆ. ಇದರ ಸಾಧಕ ಬಾಧಕ ನೋಡಿಕೊಂಡು, ಮತ್ತಷ್ಟು ಪ್ರದೇಶಗಳಿಗೂ ಕ್ಯಾಮರಾ ಅಳವಡಿಸಲು ಮುಂದಾಗಿದ್ದಾರೆ.
ಕಾನೂನು ಸುವ್ಯವಸ್ಥೆ ಜತೆಗೆ ಸಂಚಾರ ನಿಯಮ ಪಾಲನೆಯ ಮೇಲೂ ಈ ಕ್ಯಾಮರಾಗಳ ಮೂಲಕವೇ ನಿಗಾ ಇಡಲು ಮುಂದಾಗಿದ್ದು, ಹೆಲ್ಮೆಟ್ ಇಲ್ಲದೇ ಸಂಚಾರ ಪೊಲೀಸರಿಂದ ತಪ್ಪಿಸಿಕೊಂಡು ಹೋಗಲು ಬೈಕ್ ಸವಾರರು ಬಳಸುವ ಕೆಲವು ಒಳ ವೃತ್ತ, ರಸ್ತೆಗಳನ್ನು ಗುರುತಿಸಿ ಅಲ್ಲೂ ಕ್ಯಾಮರಾ ಅಳವಡಿಸುತ್ತಿದ್ದಾರೆ. ಇದೆಲ್ಲವನ್ನು ನಗರ ಪೊಲೀಸ್ ಕಮೀಷ್ನರೇಟ್ ಕಚೇರಿಯಲ್ಲಿನ ಕಂಟ್ರೊಲ್ ರೂಮ್ ಮೂಲಕ ನಿರ್ವಹಿಸಲಿದ್ದು, ಕ್ಯಾಮರಾ ಮೂಲಕವೇ ಹೆಲ್ಮೆಟ್ ರಹಿತರನ್ನು ಗುರುತಿಸಿ, ಅವರಿಗೆ ದಂಡ ವಿಧಿಸಲು ಮುಂದಾಗಿದ್ದಾರೆ. ಹೀಗಾಗಿ ಇಷ್ಟು ದಿನ ಪ್ರಮುಖ ವೃತ್ತಗಳಿಂದ ತಪ್ಪಿಸಿಕೊಂದು ಒಳ ರಸ್ತೆಗಳಲ್ಲಿ ಓಡಾಡಿಕೊಂಡಿದ್ದವರಿಗೂ ಇನ್ನು ಮುಂದೆ ಬಿಸಿ ಮುಟ್ಟಲಿದೆ.

ಪಾಲಕರಿಗೆ ಬಿಸಿಈಚೆಗೆ ನಗರದಲ್ಲಿ ಅಪ್ರಾಪ್ತರ ಬೈಕ್ ಸವಾರಿಗೆ ಲಗಾಮು ಇಲ್ಲದಂತಾಗಿದ್ದು, ಪಾಲಕರು ಯಾವುದೇ ಕಾನೂನಿನ ಭಯವಿಲ್ಲದೇ ತಮ್ಮ 18 ವರ್ಷದೊಳಗಿನ ಮಕ್ಕಳಿಗೆ ಬೈಕ್, ಸ್ಕೂಟರ್ ಕೊಡುತ್ತಿದ್ದಾರೆ. 9 ಮತ್ತು 10ನೇ ತರಗತಿ ಮಕ್ಕಳು ಶಾಲೆ ಮತ್ತು ಟ್ಯೂಷನ್ ಕೇಂದ್ರಗಳಿಗೆ ಬೈಕ್ ತೆಗೆದುಕೊಂಡು ಬರುತ್ತಿದ್ದು, ಹೆಲ್ಮೆಟ್ ಸಹ ಹಾಕಿಕೊಳ್ಳುತ್ತಿಲ್ಲ. ಸಂಚಾರ ಪೊಲೀಸರಿಂದ ತಪ್ಪಿಸಿಕೊಂಡು ಓಡಾಡುತ್ತಿದ್ದು, ಈ ಅಪ್ರಾಪ್ತರ ಬೈಕ್ ಸವಾರಿ ಮೇಲೂ ಈ ಕ್ಯಾಮರಾಗಳು ಇನ್ನು ಮುಂದೆ ನಿಗಾ ಇಡಲಿದ್ದು, ತಮ್ಮ ಮಕ್ಕಳಿಗೆ ಬೈಕ್ ಕೊಡುವ ಪಾಲಕರಿಗೆ ಭಾರೀ ಮೊತ್ತದ ದಂಡ ಬೀಳಲಿದೆ.

ನಗರದ ಕಾನೂನು ಸುವ್ಯವಸ್ಥೆಯ ದೃಷ್ಟಿಯಿಂದ ಕೆಲವೊಂದು ಸ್ಥಳಗಳನ್ನು ಗುರುತಿಸಿ ಸಿಸಿಟಿವಿ ಕ್ಯಾಮರಾ ಅಳವಡಿಸುತ್ತಿದ್ದೇವೆ. ಇವುಗಳ ಮೂಲಕವೇ ಸಂಚಾರ ನಿಯಮ ಉಲ್ಲಂಘಿಸುವವರ ಮೇಲೂ ನಿಗಾ ಇಡಲಾಗುವುದು.

-ಭೂಷಣ ಬೋರಸೆ, ನಗರ ಪೊಲೀಸ್ ಆಯುಕ್ತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net