ನೆಹರು ನಗರ, ಶಿವಬಸವ ನಗರ, ಮಹಾಂತೇಶ ನಗರ, ಮಹಾದ್ವಾರ ರಸ್ತೆ, ವಡಗಾವಿ, ಅನಗೋಳ, ಟಿಳಕವಾಡಿ, ಶಹಾಪುರ, ಶಾಸಿ ನಗರಗಳಲ್ಲಿ ಮನೆ ನಿರ್ಮಾಣ ಜೋರಾಗಿ ನಡೆದಿವೆ. ನಗರದ ಹಳೇ ಬಡಾವಣೆಗಳಲ್ಲಿ ಹಳೇ ಮನೆ ಕೆಡವಿ ಹೊಸ ಕಟ್ಟಡ ನಿರ್ಮಿಸುತ್ತಿದ್ದಾರೆ. ಹೊರವಲಯದಲ್ಲಿರುವ ಬಡಾವಣೆಗಳಲ್ಲಿ ಹೊಸ ಕಟ್ಟಡಗಳನ್ನು ಕಟ್ಟುತ್ತಿದ್ದಾರೆ. ಹಳೆಯದನ್ನು ತೆರವು ಮಾಡುವಾಗ ಅದರ ಅವಶೇಷಗಳು ಚರಂಡಿಗಳಿಗೆ ಸೇರುತ್ತಿವೆ. ಹೊಸ ಕಟ್ಟಡ ನಿರ್ಮಾಣಕ್ಕೆ ಜಲ್ಲಿಕಲ್ಲು, ಮರಳು ಹಾಗೂ ಮತ್ತಿತರ ಸಾಮಗ್ರಿಗಳನ್ನು ಗಟಾರಿನ ಮೇಲೆಯೇ ಸಂಗ್ರಹ ಮಾಡುತ್ತಿದ್ದಾರೆ. ಇದು ಕೂಡ ಚರಂಡಿಗಳನ್ನು ಸೇರುತ್ತಿದ್ದು, ಮಳೆ ಬಂದಾಗ ಇಲ್ಲವೇ ಮೇಲ್ಭಾಗದಿಂದ ಹೆಚ್ಚಿನ ನೀರು ಹರಿದು ಬಂದಾಗ, ಕೆಳಭಾಗಕ್ಕೆ ಹೋಗಿ ನಿಂತು ಅಲ್ಲಲ್ಲಿ ಅಡೆತಡೆ ಸೃಷ್ಟಿಸುತ್ತಿವೆ.