ಅಥಣಿ: ಯುವಜನರಿಗೆ ಗುಣಮಟ್ಟದ ಶಿಕ್ಷಣ ನೀಡಿದಲ್ಲಿ ಭವ್ಯ ಭಾರತ ನಿರ್ಮಾಣ ಸಾಧ್ಯವಾಗಲಿದೆ. ವಿದ್ಯಾರ್ಥಿಗಳ ಸಾಧನೆಗೆ ಶಿಕ್ಷಕರ ಶ್ರಮ ಮುಖ್ಯವಾಗಿದೆ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು.
ವಿದ್ಯಾರ್ಥಿಗಳು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡುತ್ತಿರುವುದು ಹಾಗೂ ಎಸ್ಸೆಸ್ಸೆಲ್ಸಿ ಹಾಗೂ ಯುಪಿಎಸ್‌ಸಿ ಪರೀಕ್ಷೆಗಳಲ್ಲಿ ತಾಲೂಕಿನ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಗಳಿಸಿರುವುದು ಹೆಮ್ಮೆಯ ಸಂಗತಿ. ಅಥಣಿ, ತೆಲಸಂಗ
ಮತ್ತು ಕೊಕಟನೂರಿನಲ್ಲಿ ಮೂರು ಪದವಿ
ಕಾಲೇಜುಗಳನ್ನು ಆರಂಭಿಸಿ ಸಾಮಾನ್ಯ ಜನರಿಗೆ ಶಿಕ್ಷಣ ಸೌಲಭ್ಯ ಒದಗಿಸಲಾಗಿದೆ ಎಂದು ತಿಳಿಸಿದರು.
ತಹಸೀಲ್ದಾರ್ ಸಿದರಾಯಿ ಬೋಸಗಿ ಮಾತನಾಡಿ, ವಿದ್ಯಾರ್ಥಿಗಳು ಲಭ್ಯವಿರುವ ಅವಕಾಶ ಸದ್ಬಳಕೆ ಮಾಡಿಕೊಂಡು ಉತ್ತಮ ಜೀವನ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಜಮಖಂಡಿ ಮಹಿಳಾ ಪ್ರಥಮ ದರ್ಜೆ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಯಶವಂತ ಕೊಕ್ಕನವರ ಮಾತನಾಡಿ, ವಿದ್ಯಾರ್ಥಿಗಳು ಮೊಬೈಲ್‌ನಿಂದ ದೂರವಿದ್ದು ಅಧ್ಯಯನದತ್ತ ಗಮನ ಹರಿಸಬೇಕು ಎಂದರು.
ಜ್ಞಾನ ದೀಪ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಯಿತು. ಪ್ರಾಂಶುಪಾಲ ವಿಲಾಸ ಕಾಂಬಳೆ, ಶೈಕ್ಷಣಿಕ ಅಭಿವೃದ್ಧಿ ಸಮಿತಿ ಅಧ್ಯಕ್ಷ ಶಿವಾನಂದ ದಿವಾನಮಳ, ಡಾ.ಆರ್.ಎ.ಬಡಿಗೇರ, ಜಿನೇಂದ್ರ ಬಣಜವಾಡ, ಡಾ.ಶಾಂತಿನಾಥ ಬಳೋಜ, ಸಂತೋಷ ಉಂಡಾಡಿ, ಡಾ.ಸುರೇಶ ತಕತರಾವ ಇತರರಿದ್ದರು.