ಭಾರತವನ್ನು ವಿಶ್ವಗುರುವನ್ನಾಗಿಸುವ ಬಜೆಟ್

ಬೆಳಗಾವಿಯಲ್ಲಿ ಭಾನುವಾರು ಕೇಂದ್ರ ಬಜೆಟ್ ಕುರಿತ ಮಹಾಂತೇಶ ಕವಟಗಿಮಠ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಬೆಳಗಾವಿಯಲ್ಲಿ ಭಾನುವಾರು ಕೇಂದ್ರ ಬಜೆಟ್ ಕುರಿತ ಮಹಾಂತೇಶ ಕವಟಗಿಮಠ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
Published on
ಬೆಳಗಾವಿ: ಇಂದಿನ ಕೇಂದ್ರ ಸರ್ಕಾರದ ಬಜೆಟ್ ಭಾರತವನ್ನು ವಿಶ್ವದ ಅತೀ ದೊಡ್ಡ ಆರ್ಥಿಕ ಶಕ್ತಿಯ ರಾಷ್ಟ್ರವನ್ನಾಗಿಸುವ ಜತೆಗೆ 2047ಕ್ಕೆ ವಿಕಸಿತ ಭಾರತವನ್ನು ವಿಶ್ವಗುರು ಮಾಡುವ ನಿಟ್ಟಿನಲ್ಲಿ ಭದ್ರ ಅಡಿಪಾಯ ಹಾಕುವ ಸುಭದ್ರ ಹೆಜ್ಜೆಯಾಗಿದೆ ಎಂದು ರಾಜ್ಯ ಸರ್ಕಾರದ ಮಾಜಿ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಶ್ಲಾಘಿಸಿದರು.
ಬಜೆಟ್ ವೀಕ್ಷಣೆ ಬಳಿಕ ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿಕ್ಷಣ ಕ್ಷೇತ್ರದಲ್ಲಿ ಐದು ವಿಶ್ವವಿದ್ಯಾಲಯಗಳನ್ನು ಸ್ಥಾಪನೆ ಮಾಡುವ ಮೂಲಕ ಕೌಶಲಾಧಾರಿತದ ಶಿಕ್ಷಣಕ್ಕೆ ಒತ್ತು ಕೊಟ್ಟು, ಇಂದು ಉದ್ಯಮ ಬೆಳವಣಿಗೆಗೆ ಬೇಕಾಗುವ ಕುಶಲತೆ ಜತೆಗೆ ಉದ್ಯೋಗವನ್ನೂ ಸೃಷ್ಟಿಸುವ ಮಹತ್ವಾಕಾಂಕ್ಷೆಯೊಂದಿಗೆ ಶಿಕ್ಷಣದ ಮೂಲಕವೇ ಔದ್ಯೋಗಿಕ ಕ್ರಾಂತಿ ಮಾಡಲು ಹೊರಟಿರುವುದು ಸ್ವತಂತ್ರೃ ಭಾರತದಲ್ಲಿಯೇ ಇದು ಪ್ರಥಮ ಎಂದು ಬಣ್ಣಿಸಿದರು.
ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಒತ್ತು ನೀಡಿರುವ ಸರ್ಕಾರ, ಬಡವರನ್ನು ಬಲಪಡಿಸಲು, ಅವರಿಗೆ ಶಕ್ತಿ ತುಂಬಲು ಸನ್ನದ್ಧವಾಗಿದೆ ಎಂಬುದನ್ನು ಈ ಮೂಲಕ ಘೋಷಿಸಿದ್ದು, ಪ್ರತಿ ಕುಟುಂಬಕ್ಕೂ ಸೂಕ್ತ ಸಂಪನ್ಮೂಲ ಮತ್ತು ಅವಕಾಶ ಕೊಡುವ ಯೋಜನೆಗಳನ್ನು ತರುತ್ತಿದೆ. ವಿಶೇಷವಾಗಿ ಮೂಲಭೂತ ಸೌಕರ್ಯದ ಜತೆಗೆ ಸಂಪರ್ಕ ವೃದ್ಧಿ ಪರಿಕಲ್ಪನೆಯಲ್ಲಿ ದೊಡ್ಡ ನಗರಗಳನ್ನು ಸಂಪರ್ಕಿಸುವ ಹೈಸ್ಪೀಡ್ ರೈಲ್ವೆ ಯೋಜನೆ, ರಸ್ತೆಗಳ ಅಭಿವೃದ್ಧಿ, ವಿಮಾನಯಾನ ಅಭಿವೃದ್ಧಿ ಮೂಲಕ ದೇಶದ ಆರ್ಥಿಕತೆಯನ್ನು ಅಳೆಯಲು ಬೇಕಾಗುವ ಎಲ್ಲ ಮಾಪನ ಶಕ್ತಿಗಳನ್ನು ಗಟ್ಟಿಗೊಳಿಸು ಮುಂದಾಗಿದೆ ಮಹತ್ವದ ಕಾರ್ಯ ಎಂದರು.
ಯುರೋಪ ರಾಷ್ಟ್ರಗಳನ್ನು ಇವತ್ತು ನಾವು ರಸ್ತೆ, ರೈಲ್ವೆ ಮತ್ತು ಉತ್ತಮ ವಿಮಾನಯಾನ ಸೇವೆ ಆಧಾರಿತವಾದ ಅಭಿವೃದ್ಧಿಯಿಂದಲೇ ಅಳೆಯುತ್ತಿವೆ. ಆ ಮೂಲಕವೇ ಅಲ್ಲಿನ ರಾಷ್ಟ್ರಗಳು ಆರ್ಥಿಕವಾಗಿ ಮುಂದೆ ಬಂದಿವೆ. ಇಂತಹ ಒಂದು ಚಿಂತನೆಯನ್ನು ದೇಶದಲ್ಲೇ ಮೊದಲ ಬಾರಿಗೆ ಮಾಡಿದ್ದು ನರೇಂದ್ರ ಮೋದಿ ನೇತೃತ್ವದ ಸರ್ಕಾರ. ಮುಂಬೈ, ಬೆಂಗಳೂರು, ಹೈದರಾಬಾದ, ಮದ್ರಾಸ, ದೆಹಲಿಗಳನ್ನು ಒಂದಕ್ಕೊಂದು ಸಂಪರ್ಕಿಸುವ ನಿಟ್ಟಿನಲ್ಲಿ ಸಂಪರ್ಕ ಸಂವಹನ ಕಲಿಸುತ್ತಿರುವುದರಿಂದ ವೈಯಕ್ತಿಕವಾಗಿ ಜನರ ಪ್ರಯಾಣ ಮಾಡಲು ಮಾತ್ರವಲ್ಲ ಸರಕು ಸಾಗಣೆಗೂ ಹೆಚ್ಚಿನ ಅನುಕೂಲವಾಗಲಿದೆ. ವಿಕಸಿತ ಭಾರತ 2047ಕ್ಕೆ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಬೇಕು, ವಿಶ್ವಗುರುವಾಗಬೇಕು ಎಂಬ ಮೋದಿಯವರ ಕಲ್ಪನೆಯನ್ನು ಸಾಕಾರಗೊಳಿಸುವತ್ತ ಹೆಜ್ಜೆ ಇಡುವ ಕೆಲಸವನ್ನು ನಿರ್ಮಲಾ ಸೀತಾರಾಮನ್ ಅವರು ಮಾಡಿದ್ದಾರೆ. ಇದಕ್ಕಾಗಿ ಕರ್ನಾಟಕದ ಜನತೆಯ ಪರವಾಗಿ ಮೋದಿ ಸರ್ಕಾರಕ್ಕೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದರು.
ಮಾಜಿ ಶಾಸಕ ಅನಿಲ ಬೆನಕೆ, ಪಾಲಿಕೆ ಸದಸ್ಯ ಹನಮಂತ ಕೊಂಗಾಲಿ, ಗೀತಾ ಸುತಾರ, ಉಜ್ವಲಾ ಬಡವನಾಚೆ ಇದ್ದರು.

ಸಮಗ್ರತೆಯ ಬಜೆಟ್ ದೇಶದಲ್ಲಿ ಮೊದಲ ಸಲ ದೊಡ್ಡಮಟ್ಟದ ಆರ್ಥಿಕ ಕ್ರಾಂತಿಯಾಗುತ್ತಿದೆ. ಅದಕ್ಕೆ ಪೂರಕವಾಗಿ ಮೊದಲ ಹೆಜ್ಜೆಯಂತೆ ಇವತ್ತಿನ ಬಜೆಟ್ ಮಂಡಿಸಿದ್ದಾರೆ. ಪ್ರತಿ ಜಿಲ್ಲೆಗೂ ಮೆರಿಟ್ ಆಧಾರದಲ್ಲಿ ಮಹಿಳಾ ವಸತಿ ನಿಲಯ ಕೊಟ್ಟಿರುವುದು, ಸಣ್ಣ ಉದ್ಯಮಗಳ ಬೆಳವಣಿಗೆಗೆ ಒತ್ತುಮ, ಕೃಷಿ ಮತ್ತು ಗ್ರಾಮೀಣಾಭಿವದ್ಧಿಗೂ ಒತ್ತು ಕೊಟ್ಟಿದ್ದಾರೆ. ಇಂದಿನ ಡಿಜಿಟಲ್ ಯುಗದಲ್ಲೂ ತಂತ್ರಜ್ಞಾನ, ಎಐಗಳ ಮೂಲಕ ಹಳ್ಳಿಹಳ್ಳಿಯಲ್ಲೂ ಉದ್ಯೋಗ ಸೃಷ್ಟಿ ಮಾಡಬಹುದು ಎನ್ನುವುದನ್ನು ಈ ಬಜೆಟ್‌ನಲ್ಲಿ ಸಾದರಪಡಿಸಿದ್ದಾರೆ ಎಂದು ಹಿರಿಯ ವಕೀಲ ಎಂ.ಬಿ.ಝಿರಲಿ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net