ಬುದ್ಧ, ಬಸವ, ಅಂಬೇಡ್ಕರ್ ಮಾತ್ರ ನಮಗೆ ಆದರ್ಶವಾಗಬೇಕು

 ಬೆಳಗಾವಿಯಲ್ಲಿ ಸೋಮವಾರ ಏರ್ಪಡಿಸಿದ್ದ ಬಸವ ಜಯಂತಿಯನ್ನು ಸತೀಶ ಜಾರಕಿಹೊಳಿ ಉದ್ಘಾಟಿಸಿದರು. ರತ್ನಪ್ರಭಾ ಬೆಲ್ಲದ, ಹಣುಮಂತ ಕೊಂಗಾಲಿ, ಮೊಹಮ್ಮದ್ ರೋಷನ್, ಕೆ.ರಾಮರಾಜನ್, ಭೂಷಣ ಬೋರಸೆ ಇತರರಿದ್ದರು.
ಬೆಳಗಾವಿಯಲ್ಲಿ ಸೋಮವಾರ ಏರ್ಪಡಿಸಿದ್ದ ಬಸವ ಜಯಂತಿಯನ್ನು ಸತೀಶ ಜಾರಕಿಹೊಳಿ ಉದ್ಘಾಟಿಸಿದರು. ರತ್ನಪ್ರಭಾ ಬೆಲ್ಲದ, ಹಣುಮಂತ ಕೊಂಗಾಲಿ, ಮೊಹಮ್ಮದ್ ರೋಷನ್, ಕೆ.ರಾಮರಾಜನ್, ಭೂಷಣ ಬೋರಸೆ ಇತರರಿದ್ದರು.
Published on
ಬೆಳಗಾವಿ : ನಮಗೆ ಬುದ್ಧ, ಬಸವ ಮತ್ತು ಅಂಬೇಡ್ಕರ್ ಮಾತ್ರ ಆದರ್ಶವಾಗಬೇಕಿತ್ತು. ಆದರೆ ಇವರನ್ನು ಬಿಟ್ಟು ನಮಗಾಗಿ ಏನೂ ಮಾಡದಿದ್ದವರನ್ನು ಇವತ್ತು ಆದರ್ಶವನ್ನಾಗಿಸಿಕೊಂಡಿದ್ದು, ಇದರಿಂದಾಗಿಯೇ ಹೋರಾಟ, ಸಂಘರ್ಷಗಳು ನಿಲ್ಲುತ್ತಿಲ್ಲ ಎಂದು ಸಚಿವ ಸತೀಶ ಜಾರಕಿಹೊಳಿ ಬೇಸರ ವ್ಯಕ್ತಪಡಿಸಿದರು.
ನಗರದ ಬಸವೇಶ್ವರ ವೃತ್ತದಲ್ಲಿನ ಉದ್ಯಾನದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಪಂ, ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಏರ್ಪಡಿಸಿದ್ದ ಜಗಜ್ಯೋತಿ ಬಸವೇಶ್ವರ ಜಯಂತಿ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಬುದ್ಧ, ಬಸವ, ಅಂಬೇಡ್ಕರ್ ಎಲ್ಲಿಯವರೆಗೆ ನಮೆಗ ಆದರ್ಶವಾಗುವುದಿಲ್ಲವೋ ಅಲ್ಲಿಯವರೆಗೂ ನಮ್ಮ ಮಧ್ಯೆ ಸಂಘರ್ಷಗಳು ತಪ್ಪುವುದಿಲ್ಲ. ಇಂದಿಗೂ ನಮಗೆ ನಮ್ಮ ವಿರೋಧಿ ಯಾರು ಎಂಬುದೇ ಗೊತ್ತಿಲ್ಲ. ಹೀಗಾಗಿ, ನಮ್ಮ ಮಧ್ಯೆಯೇ ಹೊಡೆದಾಡಿಕೊಳ್ಳುತ್ತಿದ್ದೇವೆ ಎಂದು ಹೇಳಿದರು.
ಇವತ್ತು ಆದರ್ಶ ವ್ಯಕ್ತಿತ್ವಗಳ ಬಗ್ಗೆ ಒಬ್ಬೊಬ್ಬರು ಒಂದೊಂದು ವಿಚಾರ ಹೇಳುತ್ತ ಬಂದಿದ್ದಾರೆ. ಇದರಿಂದಾಗಿ ಇತಿಹಾಸದಲ್ಲಿ ಅನೇಕ ಗೊಂದಲಗಳು ಸೃಷ್ಟಿಯಾಗಿವೆ. ನಾವು ಏನಾದರೂ ಒಂದು ವಿಚಾರ ಹೇಳಿದಲ್ಲಿ, ಅದಕ್ಕೆ ವಿರುದ್ಧವಾಗಿ ಒಂದಷ್ಟು ಜನ ಅವರ ವಿಚಾರಗಳನ್ನು ಮುಂದಿಡುತ್ತಿದ್ದಾರೆ. ಈ ಗೊಂದಲಗಳು ನಿವಾರಣೆಯಾಗಬೇಕಿದ್ದು, ಬುದ್ಧ, ಬಸವೇಶ್ವರ ಮತ್ತು ಅಂಬೇಡ್ಕರ್ ಅನುಯಾಯಿಗಳು ಒಟ್ಟಾಗಿ ಈ ಮೂವರ ವಿಚಾರಗಳನ್ನು ಒಮ್ಮತಗೊಳಿಸಬೇಕಿದೆ. ಆಗ ಮಾತ್ರ ಗೊಂದಲಗಳು ನಿವಾರಣೆಯಾಗಿ ಸಮಾನತೆ ಬರಲು ಸಾಧ್ಯ. ಆದರೆ ಕೆಲವರಿಗೆ ಕಷ್ಟ ಬಂದಾಗ ಮಾತ್ರ ಈ ಮೂವರು ಮಹಾನ ವ್ಯಕ್ತಿಗಳ ನೆನಪಾಗುವಂತಹ ಸ್ಥಿತಿ ಇದೆ. ಇದೆಲ್ಲವೂ ಸುಧಾರಣೆಯಾಗಬೇಕಿದೆ ಎಂದರು.
ಮಹಾಂತೇಶ ನಗರ ರಹವಾಸಿಗಳ ಸಂಘದ ಶಿಕ್ಷಣ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಡಾ.ಗೀತಾ ದಯಣ್ಣವರ ಉಪನ್ಯಾಸ ನೀಡಿದರು.
ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷೆ ರತ್ನಪ್ರಭಾ ಬೆಲ್ಲದ, ಉಪಮೇಯರ್ ಹಣುಮಂತ ಕೊಂಗಾಲಿ, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಜಿಪಂ ಸಿಇಒ ರಾಹುಲ ಶಿಂಧೆ, ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ, ಎಸ್ಪಿ ಕೆ.ರಾಮರಾಜನ್, ನಗರ ಪೊಲೀಸ್ ಆಯುಕ್ತ ಭೂಷಣ ಬೋರಸೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಡಾ.ಎಚ್.ಬಿ.ರಾಜಶೇಖರ, ಬಸವರಾಜ ರೊಟ್ಟಿ ಇತರರಿದ್ದರು.
----
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net