ಜನ ಸೇವೆಯೇ ಬಿಜೆಪಿಯ ನಿರ್ದಿಷ್ಟ ಗುರಿ

 ಬೆಳಗಾವಿ ಗ್ರಾಮಾಂತರ ಬಿಜೆಪಿ ಜಿಲ್ಲಾ ಮಟ್ಟದ ಪ್ರಶಿಕ್ಷಣ ವರ್ಗದ ಉದ್ಘಾಟನೆಯಲ್ಲಿ ಜಗದೀಶ ಶೆಟ್ಟರ, ಎನ್.ರವಿಕುಮಾರ, ಸುಭಾಸ ಪಾಟೀಲ, ವಿಠ್ಠಲ ಹಲಗೇಕರ, ಮಹಾಂತೇಶ ದೊಡಗೌಡ್ರ, ಜಗದೀಶ ಮೆಟಗುಡ್ಡ, ಡಾ.ವಿಶ್ವನಾಥ ಪಾಟೀಲ ಇತರರು ಪಾಲ್ಗೊಂಡಿದ್ದರು.
ಬೆಳಗಾವಿ ಗ್ರಾಮಾಂತರ ಬಿಜೆಪಿ ಜಿಲ್ಲಾ ಮಟ್ಟದ ಪ್ರಶಿಕ್ಷಣ ವರ್ಗದ ಉದ್ಘಾಟನೆಯಲ್ಲಿ ಜಗದೀಶ ಶೆಟ್ಟರ, ಎನ್.ರವಿಕುಮಾರ, ಸುಭಾಸ ಪಾಟೀಲ, ವಿಠ್ಠಲ ಹಲಗೇಕರ, ಮಹಾಂತೇಶ ದೊಡಗೌಡ್ರ, ಜಗದೀಶ ಮೆಟಗುಡ್ಡ, ಡಾ.ವಿಶ್ವನಾಥ ಪಾಟೀಲ ಇತರರು ಪಾಲ್ಗೊಂಡಿದ್ದರು.
Published on
ಬೆಳಗಾವಿ: ಬಿಜೆಪಿ ಇತರೆ ಪಕ್ಷಗಳಿಗಿಂತ ಭಿನ್ನವಾಗಿದೆ. ಕೇವಲ ಅಧಿಕಾರ ಗಳಿಸುವುದು ಮಾತ್ರ ಉದ್ದೇಶವಲ್ಲ. ಉತ್ತಮ ಸೇವೆ ಸಲ್ಲಿಸಲು ಅಧಿಕಾರ ಒಂದು ಸಾಧನವಷ್ಟೇ. ಆದರೆ, ಜನ ಸೇವೆಯೇ ಪಕ್ಷದ ನಿರ್ದಿಷ್ಟ ಗುರಿ ಎಂದು ಸಂಸದ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಹೇಳಿದರು.
ಖಾನಾಪೂರ ತಾಲೂಕಿನ ಜಾಂಬೋಟಿ ಹತ್ತಿರದ ಕೈವಲ್ಯಂ ಯೋಗಾ ರಿಟ್ರೀಟ್ ಕೇಂದ್ರದಲ್ಲಿ ಆಯೋಜಿಸಲಾಗಿರುವ ಪಂಡಿತ ದೀನ ದಯಾಳ ಉಪಾಧ್ಯಾಯ ಪ್ರಶಿಕ್ಷಣ ಮಹಾಭಿಮಾನ 2026ರ ಬೆಳಗಾವಿ ಗ್ರಾಮಾಂತರ ಜಿಲ್ಲಾ ಮಟ್ಟದ ಪ್ರಶಿಕ್ಷಣ ವರ್ಗವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದ ಅವರು, ಪಕ್ಷದ ಮೂಲ ತತ್ವ ಸಿದ್ಧಾಂತ ಮತ್ತು ಪರಂಪರೆಯನ್ನು ಇಂದಿನ ಆಧುನಿಕ ಕಾಲಘಟ್ಟದ ಕಾರ್ಯಕರ್ತರಿಗೆ ಸ್ಮರಿಸಿ ಪಕ್ಷದೊಳಗೆ ಯಾವ ರೀತಿ ಕಾರ್ಯನಿರ್ವಹಿಸಬೇಕು ಜನರಿಗೆ ಹೇಗೆ ಸೇವೆ ಸಲ್ಲಿಸಬೇಕು ಎಂಬುದನ್ನು ತಿಳಿಸಿಕೊಡಲು ಈ ಪ್ರಶಿಕ್ಷಣವರ್ಗ ಸಹಕಾರಿಯಾಗಲಿದೆ ಎಂದರು.
ವಿಧಾನ ಪರಿಷತ್ತಿನ ಮುಖ್ಯ ಸಚೇತಕ ಎನ್.ರವಿಕುಮಾರ ಮಾತನಾಡಿ, ಪಶ್ವಿಮ ಬಂಗಾಳದಲ್ಲಿ ಬಿಜೆಪಿ ಕಾರ್ಯಕರ್ತರು ನಕಲಿ ಮತದಾರರನ್ನು ಹುಡುಕಿ ಅವರ ಮತದಾನದ ಹಕ್ಕನ್ನು ರದ್ದುಪಡಿಸಿದ ಕಾರಣ ಸ್ವತಂತ್ರ್ಯ ಭಾರತದ ನಂತರ ಮೊದಲ ಬಾರಿಗೆ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರವನ್ನು ಹಿಡಿಯಲು ಸಾಧ್ಯವಾಗಿದೆ. ಕಾರ್ಯಕರ್ತರು ಮನಸ್ಸು ಮಾಡಿದರೆ ಯಾವುದು ಅಸಾಧ್ಯವಿಲ್ಲ ಎಂಬುದಕ್ಕೆ ಪಶ್ಚಿಮ ಬಂಗಾಳದ ಈ ಸಲದ ಚುನಾವಣೆಯೇ ಸಾಕ್ಷಿ ಎಂದು ತಿಳಿಸಿದರು.
ಗ್ರಾಮೀಣ ಜಿಲ್ಲಾ ಅಧ್ಯಕ್ಷ ಸುಭಾಸ ಪಾಟೀಲ ಮಾತನಾಡಿ ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಪ್ರಶಿಕ್ಷಣವರ್ಗವು ಮಂಡಲ ಮಟ್ಟದಲ್ಲಿ ಈಗಾಗಲೇ ಮುಗಿದಿದ್ದು ಜಿಲ್ಲೆ, ರಾಜ್ಯ, ರಾಷ್ಟ್ರ ಮಟ್ಟದ ವರೆಗೂ ಪ್ರಶಿಕ್ಷಣವರ್ಗಗಳು ನಡೆಯಲಿದ್ದು ಕಾರ್ಯಕರ್ತರ ವ್ಯಕ್ತಿತ್ವ ರೂಪಿಸಲು,ಶಿಸ್ತು ಮೂಡಿಸಲು ಸಹಕಾರಿಯಾಗಲಿದೆ ಎಂದರು.
ಶಾಸಕ ವಿಠ್ಠಲ ಹಲಗೇಕರ, ಮಾಜಿ ಶಾಸಕರಾದ ಮಹಾಂತೇಶ ದೊಡಗೌಡ್ರ, ಜಗದೀಶ ಮೆಟಗುಡ್ಡ, ಡಾ.ವಿಶ್ವನಾಥ ಪಾಟೀಲ, ಅರವಿಂದ ಪಾಟೀಲ, ಮಹಾದೇವಪ್ಪ ಯಾದವಾಡ, ಜಿಲ್ಲಾ ಪ್ರಕೋಷ್ಠಗಳ ಸಂಯೋಜಕ ಮಹೇಶ ಮೋಹಿತೆ, ಪ್ರಧಾನ ಕಾರ್ಯದರ್ಶಿಗಳಾದ ಮಲ್ಲಿಕಾರ್ಜುನ ಮಾದಮ್ಮನವರ, ಸಂದೀಪ ದೇಶಪಾಂಡೆ, ಧನಶ್ರೀ ದೇಸಾಯಿ, ಜಿಲ್ಲಾ ಉಪಾಧ್ಯಕ್ಷ ಪ್ರಮೋದ ಕೊಚೇರಿ, ಖಾನಾಪೂರ ಮಂಡಲ ಅಧ್ಯಕ್ಷ ಬಸವರಾಜ ಸಾಣಿಕೊಪ್ಪ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net