ಬೆಳಗಾವಿ: ಡಿಐಜಿ ರಾಮಚಂದ್ರರಾವರನ್ನು ವಜಾ ಮಾಡಬೇಕು ಹಾಗೂ ಶಿಡ್ಲಘಟ್ಟದ ಕಾಂಗ್ರೆಸ್ ಮುಖಂಡ ರಾಜೀವ ಗೌಡರನ್ನು ಶೀಘ್ರ ಬಂಧಿಸಬೇಕು ಎಂದು ಆಗ್ರಹಿಸಿ ನಗರದಲ್ಲಿ ಗುರುವಾರ ಬಿಜೆಪಿ ಮಹಿಳಾ ಮೋರ್ಚಾದಿಂದ ಪ್ರತಿಭಟಿಸಲಾಯಿತು.
ಜಿಲ್ಲಾ ಮಹಿಳಾ ಮೋರ್ಚಾದ ವಿವಿಧ ಘಟಕಗಳ ನೇತೃತ್ವದಲ್ಲಿ ಪ್ರತಿಭಟಿಸಿದ ಕಾರ್ಯಕರ್ತೆಯರು ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.
ನೊಂದ ಅಮಾಯಕ ಮಹಿಳೆಯರು ದೂರು ನೀಡಲು ಕಚೇರಿಗೆ ಬಂದರೆ ಅವರಿಗೆ ಬೆದರಿಕೆ ಹಾಕಿ ರಾಮಚಂದ್ರರಾವ್ ಅಸಭ್ಯವಾಗಿ ವರ್ತಿಸಿದ್ದಾರೆ. ಅವವರನ್ನು ಸರ್ಕಾರ ಈಗ ಅಮಾನತ್ತು ಮಾಡಿರುವುದು ಸರಿಯಲ್ಲ, ಕರ್ತವ್ಯದಿಂದಲೇ ವಜಾ ಮಾಡಬೇಕು. ಹಾಗೆಯೇ ಶಿಡ್ಲಘಟ್ಟ ನಗರಸಭೆ ಆಯುಕ್ತೆ ಅಮೃತಾಗೌಡರವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಕೊಲೆ ಬೆದರಿಕೆ ಹಾಕಿರುವ ರಾಜೀವಗೌಡ ವಿರುದ್ಧ ದೂರು ದಾಖಲಾಗಿ ವಾರ ಕಳೆದರೂ ಬಂಧಿಸಿಲ್ಲ. ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಮಹಿಳಾ ಮಹಿಳಾ ಮೋರ್ಚಾ ರಾಜ್ಯ ಕಾರ್ಯದರ್ಶಿ ಸೋನಾಲಿ ಸರ್ನೋಬತ, ಜಿಲ್ಲಾಧ್ಯಕ್ಷೆ ಡಾ.ನಯನಾ ಭಸ್ಮೆ, ಶೀಲಾ ಗಡ್ಕರಿ, ಉಜ್ವಲಾ ಬಡವನಾಚೆ, ಶ್ವೇತಾ ಜಗದಾಳೆ, ಶಾಲಿನಿ ಇಳಿಗೇರ, ಲೀನಾ ಟೋಪಣ್ಣವರ, ಆರ್.ಆರ್.ಪಾಯಣ್ಣವರ, ಕಲ್ಪನಾ ಇಟಗಿ ಇತರರಿದ್ರು. ಸ್ಮಿತಾ ಪೂಜಾರ ಇತರರಿದ್ದರು.