ಭೀಮಣ್ಣ ಖಂಡ್ರೆ ಕೊಡುಗೆ ಅನನ್ಯ

ಬೆಳಗಾವಿಯ ಲಿಂಗಾಯತ ಭವನದಲ್ಲಿ ಭಾನುವಾರ ಜರುಗಿದ ಭೀಮಣ್ಣ ಖಂಡ್ರೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಬೆಳಗಾವಿಯ ಲಿಂಗಾಯತ ಭವನದಲ್ಲಿ ಭಾನುವಾರ ಜರುಗಿದ ಭೀಮಣ್ಣ ಖಂಡ್ರೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
Published on
ಬೆಳಗಾವಿ: ಶರಣ ಚಿಂತನೆಗಳಂತೆ ಬಾಳಿದ ಧೀಮಂತ ನಾಯಕ ಭೀಮಣ್ಣ ಖಂಡ್ರೆ, ವೀರಶೈವ ಲಿಂಗಾಯತ ಮಹಾಸಭೆ ಅಧ್ಯಕ್ಷರಾಗಿ ಸಮುದಾಯವನ್ನು ತಳಮಟ್ಟದಲ್ಲಿ ಕಟ್ಟಿ ಬೆಳೆಸಿದವರು. ಮಹಾಸಭೆಗೆ ಅವರ ಕೊಡುಗೆ ಅನನ್ಯ ಹಾಗೂ ಚಿರಸ್ಮರಣೀಯ ಎಂದು ಕಾರಂಜಿಮಠದ ಗುರುಸಿದ್ಧ ಸ್ವಾಮೀಜಿ ಹೇಳಿದರು.
ಶಿವಬಸವ ನಗರದ ಲಿಂಗಾಯತ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಭೀಮಣ್ಣ ಖಂಡ್ರೆಯವರ ಶ್ರದ್ಧಾಂಜಲಿ ನುಡಿನಮನ ಹಾಗೂ ಮಾಸಿಕ ಅನುಭಾವ ಗೋಷ್ಠಿಯ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಗಾಂಧಿಯವರ ನಾಯಕತ್ವದಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದ ಖಂಡ್ರೆ, ಬಳಿಕ ಕರ್ನಾಟಕ ಏಕೀಕರಣ ಚಳವಳಿಯಲ್ಲೂಮುಂಚೂಣಿಯಲ್ಲಿದ್ದರು. ಏಕೀಕರಣಕ್ಕಾಗಿ ಹೋರಾಡಿದ ಕನ್ನಡ ಸೇನಾನಿಯಾಗಿದ್ದ ಅವರು, ಸಮುದಾಯದ ವಿರುದ್ಧ ಯಾರೇ ಮಾತನಾಡಿದರೂ ಅದನ್ನು ತೀವ್ರವಾಗಿ ಖಂಡಿಸುತ್ತಿದ್ದರು. ಸಮುದಾಯ ಇಬ್ಬಾಗುವುದನ್ನು ಸಾಕಷ್ಟು ವಿರೋಧಿಸಿದ್ದರು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಮಹಾಸಭಾ ಜಿಲ್ಲಾ ಅಧ್ಯಕ್ಷೆ ರತ್ನಪ್ರಭಾ ಬೆಲ್ಲದ ಮಾತನಾಡಿ, ಸಮಾಜಸೇವೆ, ಸರಳತೆ ಮತ್ತು ಶರಣ ಮೌಲ್ಯಗಳ ಪ್ರತೀಕವಾಗಿದ್ದ ಖಂಡ್ರೆಯವರ ಅಗಲಿಕೆಯಿಂದ ವೀರಶೈವ ಲಿಂಗಾಯತ ಸಮುದಾಯ ಹಾಗೂ ನಾಡಿನ ಅಪಾರ ಅಭಿಮಾನಿಗಳಿಗೆ ತೀವ್ರ ದುಃಖವನ್ನುಂಟು ಮಾಡಿದೆ. ತಮ್ಮ ಜೀವನವನ್ನು ಗುರು ಲಿಂಗ ಜಂಗಮ ಸೇವೆಗೆ ಅರ್ಪಿಸಿದ್ದ ಅವರು, ಜನರ ಹೃದಯಗಳಲ್ಲಿ ಅಚ್ಚಳಿಯದ ಸ್ಥಾನ ಗಳಿಸಿದ್ದರು. ಬಸವಾದಿ ಶಿವಶರಣರ ತತ್ವವನ್ನು ಬದುಕಿನಲ್ಲಿ ಅಳವಡಿಸಿಕೊಂಡಿದ್ದ ಅವರು, ಲಿಂಗಾಯತ ಸಮುದಾಯದ ಶಕ್ತಿ ಮತ್ತು ಗಟ್ಟಿ ಧ್ವನಿಯಾಗಿದ್ದರು. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯನ್ನು ವ್ಯಕ್ತಿ ಆಧಾರಿತ ಸಂಸ್ಥೆಯಿಂದ ಸಾಂಸ್ಥಿಕ ನೆಲಗಟ್ಟಿನ ಮೇಲೆ ಬಲಿಷ್ಠ ಸಂಘಟನೆಯಾಗಿ ರೂಪಿಸಿದ್ದುದು ಅವರ ಬಹುದೊಡ್ಡ ಕೊಡುಗೆ ಎಂದು ಸ್ಮರಿಸಿದರು.
ಸಾಹಿತಿ ಜಲತ್ಕುಮಾರ ಭೀಮರಾವ್ ಪುಣಜಗೌಡ ‘ಶರಣರು ಚಿಂತನೆಗೈದ ಜೀವನ ಮೌಲ್ಯಗಳು’ ಕುರಿತು ಉಪನ್ಯಾಸ ನೀಡಿದರು. ಎಸ್‌ಎಸ್‌ಎಲ್‌ಸಿ, ಪಿಯುಸಿ, ಪದವಿ, ಸ್ನಾತಕೋತ್ತರ ವಿಭಾಗದಲ್ಲಿ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ನೀಡಲಾಯಿತು.
ಡಾ.ಎಚ್.ಬಿ.ರಾಜಶೇಖರ, ಡಾ.ಗುರುದೇವಿ ಹುಲೆಪ್ಪನವರಮಠ, ಜ್ಯೋತಿ ಬದಾಮಿ, ಚಂದ್ರಶೇಖರ ಬೆಂಬಳಗಿ, ಆರ್.ಪಿ.ಪಾಟೀಲ, ಪ್ರಸಾದ ಹಿರೇಮಠ, ಶಂಕರ ಪಟ್ಟೇದ, ವೀರಭದ್ರ ಅಂಗಡಿ ಇತರರಿದ್ದರು.
ಮಂಗಲ ಕಾಕತಿಕರ ಪ್ರಾರ್ಥಿಸಿದರು. ಸೋಮಲಿಂಗ ಮಾವಿನಕಟ್ಟಿ ಸ್ವಾಗತಿಸಿದರು. ಶಾರದಾ ಪ್ರಸಾದ ಹಿರೇಮಠ ವಚನ ವಿಶ್ಲೇಷಣೆ ಮಾಡಿದರು. ಶೈಲಾ ಸಂಸುದ್ದಿ ಅತಿಥಿಗಳನ್ನು ಪರಿಚಯಿಸಿದರು. ಶ್ವೇತಾ ಹೆದ್ದೂರ ಶೆಟ್ಟಿ ನಿರೂಪಿಸಿದರು. ವಿ.ಕೆ.ಪಾಟೀಲ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net