ಯಲ್ಲಮ್ಮಗುಡ್ಡದಲ್ಲಿ ಭಾರತ ಹುಣ್ಣಿಮೆ ಜಾತ್ರೆ ಅದ್ದೂರಿ

ಸುಕ್ಷೇತ್ರ ಯಲ್ಲಮ್ಮನಗುಡ್ಡದಲ್ಲಿ ಭಾನುವಾರ ಜರುಗಿದ ಭಾರತ ಹುಣ್ಣಿಮೆ ಜಾತ್ರೆಯಲ್ಲಿ ಸೇರಿದ್ದ ಭಕ್ತಸಮೂಹ.
ಸುಕ್ಷೇತ್ರ ಯಲ್ಲಮ್ಮನಗುಡ್ಡದಲ್ಲಿ ಭಾನುವಾರ ಜರುಗಿದ ಭಾರತ ಹುಣ್ಣಿಮೆ ಜಾತ್ರೆಯಲ್ಲಿ ಸೇರಿದ್ದ ಭಕ್ತಸಮೂಹ.
Published on

ಪ್ರಮುಖ ಮುಖ್ಯಾಂಶಗಳು

  • ರಾಜ್ಯ ಸೇರಿ ವಿವಿಧೆಡೆಯಿಂದ ಹರಿದು ಬಂದ ಭಕ್ತಗಣ
  • ಪಡ್ಡಲಗಿ ತುಂಬಿ ಭಕ್ತಿಸೇವೆ ಸಮರ್ಪಣೆ
ಉಗರಗೋಳ: ಸಮೀಪದ ಯಲ್ಲಮ್ಮನಗುಡ್ಡದಲ್ಲಿ ಭಾರತ ಹುಣ್ಣಿಮೆಯಂದು ರೇಣುಕಾ ಯಲ್ಲಮ್ಮದೇವಿ ಜಾತ್ರೆ ಭಾನುವಾರ ಅದ್ದೂರಿಯಾಗಿ ಜರುಗಿತು.
ರಾಜ್ಯದ ವಿವಿಧೆಡೆಯಿಂದ ಬಂದಿದ್ದ 20 ಲಕ್ಷಕ್ಕೂ ಅಧಿಕ ಭಕ್ತರು ಗುಡ್ಡದ ವಿಶಾಲ ಪರಿಸರದ ಅಲ್ಲಲ್ಲಿ ಒಲೆ ಹೂಡಿ, ಅನ್ನ-ಸಾರು, ಪಲ್ಯೆ, ಹೋಳಿಗೆ, ವಡೆ, ಭಜ್ಜಿ ಮೊದಲಾದ ಖಾದ್ಯ ತಯಾರಿಸಿ ಪರಡಿ ತುಂಬಿದರು. ಯಲ್ಲಮ್ಮ ದೇವಿ ದೇವಸ್ಥಾನ ಬಳಿಯ ಎಣ್ಣೆ ಹೊಂಡದಲ್ಲಿ ಭಕ್ತರು ಸ್ನಾನ ಮಾಡಿ ಶ್ರದ್ಧಾ, ಭಕ್ತಿಯಿಂದ ರೇಣುಕಾ ಯಲ್ಲಮ್ಮದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ದರ್ಶನ, ಆಶೀರ್ವಾದ ಪಡೆಯುವ ಮೂಲಕ ಇಷ್ಟಾರ್ಥ ಸಿದ್ಧಿ, ಒಳಿತಿಗಾಗಿ ಪ್ರಾರ್ಥಿಸಿದರು. ಕುಟುಂಬಸ್ಥರು, ಹಿತೈಷಿಗಳೆಲ್ಲ ಸೇರಿ ಭೋಜನ ಸವಿದರು.
ಸಂಭ್ರಮ ಹೆಚ್ಚಿಸಿದ ಹಸಿರುಬಳೆ: ಈ ಹುಣ್ಣಿಮೆಯಲ್ಲಿ ದೇವಿ ಮುತ್ತೈದೆಯಾಗುತ್ತಾಳೆ ಎಂಬ ಪ್ರತೀತಿ ಇದೆ. ಹೀಗಾಗಿ, ಇಲ್ಲಿಗೆ ಬರುವ ಮಹಿಳೆಯರು ಕನಿಷ್ಠ 11 ಹಸಿರು ಬಳೆ ಧರಿಸಬೇಕೆಂಬ ನಂಬಿಕೆ ಇದೆ. ಗುಡ್ಡಕ್ಕೆ ಬಂದ ಮಹಿಳೆಯರು ಮುತ್ತೈದೆತನದ ಸಂಕೇತವಾಗಿರುವ ಹಸಿರುಬಳೆ ಧರಿಸಿ ಸಂಭ್ರಮಿಸಿದರು.
ಶಾಸಕ ವಿಶ್ವಾಸ ವೈದ್ಯ, ಜಿಲ್ಲಾಡಳಿತ, ದೇವಸ್ಥಾನ ಅಧಿಕಾರಿಗಳು ಮತ್ತು ವ್ಯವಸ್ಥಾಪನಾ ಸಮಿತಿ ಭಕ್ತರಿಗೆ ಅಗತ್ಯ ಮೂಲ ಸೌಕರ್ಯ ಒದಗಿಸಿದ್ದರು. ಜಾತ್ರೆಯಲ್ಲಿ ಕಳೆದುಕೊಂಡ ಮಕ್ಕಳು, ಹಿರಿಯರನ್ನು ಪೊಲೀಸ್ ಇಲಾಖೆಯ ಸಹಾಯವಾಣಿ ಕೇಂದ್ರದ ಮೂಲಕ ಮರಳಿ ತಮ್ಮವರನ್ನು ಸೇರಿ ನಿರಾಳವಾದರು.
"

ಭಾರತ ಹುಣ್ಣಿಮೆಯಂದು ಆರಂಭಗೊಂಡ ಜಾತ್ರೆ ಮಹಾ ಶಿವರಾತ್ರಿವರೆಗೂ ನಡೆಯಲಿದೆ. ಗುಡ್ಡಕ್ಕೆ ಬರುವ ಭಕ್ತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಅಗತ್ಯ ಸೌಕರ್ಯ ಕಲ್ಪಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net