ಮೋದಿ ಮನಗೆದ್ದ ಬೆಳಗಾವಿ ಮೀನು ಕೃಷಿಕ

ಹೊಂಡದಲ್ಲಿ ಮರಲ್ ಮೀನು ಸಂಗ್ರಹಿಸುತ್ತಿರುವುದು.
ಹೊಂಡದಲ್ಲಿ ಮರಲ್ ಮೀನು ಸಂಗ್ರಹಿಸುತ್ತಿರುವುದು.
Published on
ℹ️

ಮೀನು ಕೃಷಿಕರ ದಿನ ವಿಶೇಷ


ಡಿ.ವಿ.ಕಮ್ಮಾರ ಬೆಳಗಾವಿ
ಮೀನು ಸಾಕಣೆಯಲ್ಲಿ ಜಿಲ್ಲೆ ತನ್ನದೆ ಸ್ಥಾನಮಾನ ಕಾಯ್ದುಕೊಂಡಿದೆ. ನದಿ, ಜಲಾಶಯ, ಕೆರೆ ಹಾಗೂ ಕೃಷಿ ಹೊಂಡಗಳಲ್ಲೂ ರೈತರು ಮೀನು ಸಾಕಣೆ ಮಾಡುತ್ತಿದ್ದು, ಮೀನು ಕೃಷಿ ಪ್ರಧಾನಮಂತ್ರಿ ನರೇಂದ್ರ ಮೋದಿ ಮನಗೆದ್ದಿರುವ ಯಶೋಗಾಥೆಯೂ ಜಿಲ್ಲೆಗಿದೆ.
ಬೆಳಗಾವಿ ತಾಲೂಕಿನ ಬೋಡಕ್ಯಾನಟ್ಟಿಯ 27 ವರ್ಷದ ರಾಜು ಶಿವಲಿಂಗಪ್ಪ ಹುದ್ದಾರ, ಮರಲ್ (ಕುಚ್ಚು) ಮೀನು ಸಾಕಣೆಯಲ್ಲಿ ಯಶಸ್ವಿಯಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಮನಸ್ಸು ಗೆದ್ದಿದ್ದಾರೆ. ಮನ್ ಕಿ ಬಾತ್‌ನಲ್ಲೂ ಮೀನು ಕೃಷಿ ಸಾಧನೆಯನ್ನು ಮೋದಿ ಪ್ರಶಂಸಿಸಿದ್ದರು. ಇದರಿಂದ ವಿವಿಧಡೆಯ ರೈತರು ವೀಕ್ಷಣೆಗೆ ಬರುತ್ತಿದ್ದಾರೆ. ಒಂದು ಎಕರೆಯಲ್ಲಿ 4 ಕೃಷಿ ಹೊಂಡ ಬಯೋಪಾಕ್ ತಂತ್ರಜ್ಞಾನದಲ್ಲಿ ನಿರ್ಮಿಸಿ ಮರಲ್ ಮೀನು ಸಾಕಣೆ ಮಾಡಿದ್ದಾರೆ. ಮೊದಲ ಬ್ಯಾಚ್‌ನಲ್ಲಿ 26 ಲಕ್ಷ ರೂ., ಎರಡನೇ ಹಂತ 22 ಲಕ್ಷ ರೂ. ಆದಾಯ ಬಂದಿದೆ. ಮೂರನೇ ಬ್ಯಾಚ್ ಕೈಗೆ ಬಂದಿದ್ದು 25 ಲಕ್ಷ ರೂ. ಆದಾಯದ ನಿರೀಕ್ಷೆ ಇದೆ. ಒಂದು ಸಲಕ್ಕೆ 15 ಸಾವಿರ ಮರಿ ಬಿಡುತ್ತಾರೆ. 8 ತಿಂಗಳಿನಲ್ಲಿ ಕನಿಷ್ಠ 13 ಟನ್ ಉತ್ಪಾದನೆ ಬರುತ್ತದೆ.
ಮಳೆ ವಿಳಂಬದಿಂದ ಹಿನ್ನಡೆ
ಕಳೆದ ಸಾಲಿನಲ್ಲಿ ಮಲಪ್ರಭಾ ಮತ್ತು ಹಿಡಕಲ್ಲ ಜಲಾಶಯದಲ್ಲಿ ಒಟ್ಟು 45 ಲಕ್ಷ ಮೀನಿನ ಮರಿ ಬಿಡುಗಡೆ ಮಾಡಲಾಗಿತ್ತು. ಈ ವರ್ಷ ಮೀನಿನ ಮರಿ ಪ್ರಕ್ರಿಯೆಯನ್ನು ಬಜೆಟ್ ಮತ್ತು ಅನುದಾನದ ಲಭ್ಯತೆ ಆಧಾರದ ಮೇಲೆ ನಿರ್ಧಾರವಾಗಲಿದೆ. ಜಿಲ್ಲೆಯ ಹಿಡಕಲ್ ಮತ್ತು ಮಲಪ್ರಭಾ (ಸವದತ್ತಿ) ಮೀನು ಮರಿ ಪಾಲನಾ ಕೇಂದ್ರಗಳಲ್ಲಿ ಮರಿಗಳ ಉತ್ಪಾದನೆ ನಡೆಯುತ್ತದೆ. ಹಿಡಕಲ್ಲ ಡ್ಯಾಂ ಕೇಂದ್ರದಲ್ಲಿ ಈ ವರ್ಷ 50 ಲಕ್ಷ ಮೀನು ಮರಿಗಳ (ಫಿಂಗರ್ಲಿಂಗ್ಸ್) ಹಾಗೂ 3 ಕೋಟಿ ಸ್ಪಾನ್ (ಮೊಟ್ಟೆ) ಉತ್ಪಾದನೆ ಗುರಿ ಇದೆ. ಮಲಪ್ರಭಾ ಕೇಂದ್ರವು 15 ಲಕ್ಷ ಮೀನು ಮರಿಗಳ ಸಾಮರ್ಥ್ಯ ಹೊಂದಿದೆ. ಆದರೆ, ನೀರಿನ ಕೊರತೆ ಮತ್ತು ದುರಸ್ತಿ ಕಾರ್ಯಗಳ ಹಿನ್ನೆಲೆಯಲ್ಲಿ ಈವರೆಗೂ ಗುರಿ ನಿಗದಿಪಡಿಸಿಲ್ಲ.
ಘಟಪ್ರಭಾ ಮೀನುಮರಿ ಪಾಲನಾ ಕೇಂದ್ರಕ್ಕೆ ಈಚೆಗೆ ಭೇಟಿ ನೀಡಿದ್ದ ಮೀನುಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಕುಮಾರ ಎಲ್. ಉಪನಿರ್ದೇಶಕ ಸಂತೋಷ ಕೊಪ್ಪದ ಪರಿಶೀಲಿಸಿದರು.

ವಿಫುಲ ಅವಕಾಶ

ಜಿಲ್ಲೆಯಲ್ಲಿ ಕೃಷಿಯಷ್ಟೇ ಮೀನುಗಾರಿಕೆಗೂ ವಿಪುಲ ಅವಕಾಶಗಳಿದ್ದರೂ ಮುಂಗಾರು ಮಳೆ ವಿಳಂಬವಾಗಿದ್ದರಿಂದ ಚಟುವಟಿಕೆಗಳೂ ವಿಳಂಬವಾಗಿವೆ. ಎಂಟು ನದಿ, ಐದು ಜಲಾಶಯಗಳು ವಾಣಿಜ್ಯ ಮಟ್ಟದ ಮೀನುಗಾರಿಕೆಗೆ ಅವಕಾಶ ಕಲ್ಪಿಸಿವೆ. 300 ಸಣ್ಣ ನೀರಾವರಿ ಕೆರೆ ಹಾಗೂ ಗ್ರಾಪಂ ವ್ಯಾಪ್ತಿಯ 746 ಕೆರೆಗಳಲ್ಲಿ ಮೀನುಗಾರಿಕೆ ಇಲಾಖೆ ಅಧೀನದಲ್ಲಿ ಸಾಕಣೆ ನಡೆಯುತ್ತಿದೆ. 28 ಮೀನುಗಾರಿಕಾ ಸಹಕಾರ ಸಂಘಗಳಿವೆ.


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net