ಸಾಂಕ್ರಾಮಿಕ ರೋಗ ಹರಡದಂತೆ ಎಚ್ಚರ ವಹಿಸಿ

 -ಬೆಳಗಾವಿ ತಾಲೂಕಾ ಆರೋಗ್ಯಾಧಿಕಾರಿಗಳ ಕಚೇರಿಯಲ್ಲಿ ಶುಕ್ರವಾರ ಜಾಗೃತಿ ಜಾಥಾಗೆ ಪ್ರೀತಿ ಕಾಮಕರ ಚಾಲನೆ ನೀಡಿದರು. ಡಾ. ಐ.ಪಿ. ಗಡಾದ ಡಾ.ಸಂಜೀವ ನಾಂದ್ರೆ, ಡಾ.ಚಾಂದನಿ ದೆವಡಿ ಇತರರಿದ್ದರು.
-ಬೆಳಗಾವಿ ತಾಲೂಕಾ ಆರೋಗ್ಯಾಧಿಕಾರಿಗಳ ಕಚೇರಿಯಲ್ಲಿ ಶುಕ್ರವಾರ ಜಾಗೃತಿ ಜಾಥಾಗೆ ಪ್ರೀತಿ ಕಾಮಕರ ಚಾಲನೆ ನೀಡಿದರು. ಡಾ. ಐ.ಪಿ. ಗಡಾದ ಡಾ.ಸಂಜೀವ ನಾಂದ್ರೆ, ಡಾ.ಚಾಂದನಿ ದೆವಡಿ ಇತರರಿದ್ದರು.
Published on
ಬೆಳಗಾವಿ: ಮಳೆಗಾಲ ಆರಂಭವಾಗಿರುವ ಹಿನ್ನೆಲೆಯಲ್ಲಿ ಸೊಳ್ಳೆಗಳಿಂದ ಹರಡುವ ರೋಗಗಳು ಹೆಚ್ಚಾಗುವ ಸಾಧ್ಯತೆ ಇದ್ದು, ಮನೆ ಹಾಗೂ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಂಡರೆ ಡೆಂಗ್ಯೂ ಅಂತಹ ರೋಗಗಳನ್ನು ಪರಿಣಾಮಕಾರಿಯಾಗಿ ತಡೆಗಟ್ಟಬಹುದು ಎಂದು ಮಹಾಪೌರರಾದ ಪ್ರೀತಿ ಕಾಮಕರ ಹೇಳಿದರು.
ಬೆಳಗಾವಿ ತಾಲೂಕಾ ಆರೋಗ್ಯಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಕೆಎಲ್‌ಇ ಸಂಸ್ಥೆಯ ಯಳ್ಳೂರು ನಸಿರ್ಂಗ್ ಕಾಲೇಜಿನ ವಿದ್ಯಾರ್ಥಿಗಳ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಡೆಂಗ್ಯೂ ವಿರೋಧಿ ಮಾಸಾಚರಣೆ ಅಂಗವಾಗಿ ಲಾರ್ವಾ ಸಮೀಕ್ಷೆ ಹಾಗೂ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಡೆಂಗ್ಯೂ ರೋಗವು ಈಡಿಸ್ ಸೊಳ್ಳೆ ಕಚ್ಚುವುದರಿಂದ ಹರಡುವುದರಿಂದ ಸೊಳ್ಳೆಗಳ ಉತ್ಪತ್ತಿ ತಾಣಗಳನ್ನು ನಾಶಪಡಿಸುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ. ಸಾರ್ವಜನಿಕರು ಆರೋಗ್ಯ ಇಲಾಖೆಯೊಂದಿಗೆ ಕೈಜೋಡಿಸಿ ಡೆಂಗ್ಯೂ ನಿಯಂತ್ರಣ ಕಾರ್ಯದಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದರು.
ಜಿಲ್ಲಾ ರೋಗವಾಹಕ ರೋಗಗಳ ನಿಯಂತ್ರಣಾಧಿಕಾರಿ ಡಾ. ಜಗದೀಶ್ ಜಿಂಗಿ ಮಾತನಾಡಿ, ಜಿಲ್ಲೆಯಲ್ಲಿ ಪ್ರಸ್ತುತ ಒಂದು ಮಲೇರಿಯಾ, ಆರು ಡೆಂಗ್ಯೂ ಹಾಗೂ ನಾಲ್ಕು ಚಿಕೂನ್ಗುನ್ಯಾ ಪ್ರಕರಣಗಳು ವರದಿಯಾಗಿವೆ ಎಂದು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಐ.ಪಿ. ಗಡಾದ್, ತಾಲೂಕು ಆರೋಗ್ಯಾಧಿಕಾರಿ ಡಾ. ಸಂಜೀವ್ ನಾಂದ್ರೆ, ಕ್ಷಯರೋಗ ನಿಯಂತ್ರಣ ಅಧಿಕಾರಿಗಳಾದ ಡಾ. ಚಾಂದನಿ ದೆವಡಿ, ಬೆಳಗಾವಿ ವಲಯ ಕೀಟಶಾಸ್ತ್ರಜ್ಞ ಗಣಪತಿ ವಾರ್ಕಿ, ಜಿಲ್ಲಾ ಆರೋಗ್ಯ ಮತ್ತು ಕು.ಕ ಅಧಿಕಾರಿಗಳ ಕಚೇರಿಯ ಐ.ಇ.ಸಿ ವಿಭಾಗದ ಅಧಿಕಾರಿ ಪ್ರಕಾಶ ಜಿ. ಮಾನೆ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net