ಬೆಳಗಾವಿಯಲ್ಲಿ ಭಾನುವಾರ ಸಂತ ಸೇವಾಲಾಲ ಜಯಂತಿ ಪ್ರಯುಕ್ತ ಆಯೋಜಿಸಿದ್ದ ಮೆರವಣಿಗೆಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಚಾಲನೆ ನೀಡಿದರು. ಮೊಹಮ್ಮದ್‌ರೋಷನ್, ಸರ್ದಾರ ಸೇವಾಲಾಲ ಸ್ವಾಮೀಜಿ ಇತರರಿದ್ದರು.
ಬೆಳಗಾವಿ: ಬಂಜಾರ ಸಮುದಾಯ ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಅಭಿವೃದ್ದಿ ಹೊಂದುತ್ತಿರುವ ಸಮಾಜವಾಗಿದ್ದು, ಸಂತ ಸೇವಾಲಾಲರು ಸೀಕೋ ಸಿಕಾವೋ(ಕಲಿತು-ಕಲಿಸಿ) ಎಂಬ ಸಂದೇಶ ನೀಡಿದ್ದಾರೆ. ಇದರಂತೆ ಸಮುದಾಯದವರು ತಮ್ಮ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ನೀಡಬೇಕು ಎಂದು ನಿವೃತ್ತ ಮುಖ್ಯೋಪಾಧ್ಯಾಯ ಪಿ.ಬಿ.ಲಮಾಣಿ ಹೇಳಿದರು.
ಜಿಲ್ಲಾಡಳಿತ. ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ ವತಿಯಿಂದ ನಗರದ ಕುಮಾರ ಗಂಧರ್ವ ಕಲಾ ಮಂದಿರದಲ್ಲಿ ಭಾನುವಾರ ಏರ್ಪಡಿಸಿದ್ದ ಸಂತ ಸೇವಾಲಾಲರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಂಜಾರ ಸಮುದಾಯವು ಎಲ್ಲ ಕ್ಷೇತ್ರದಲ್ಲಿ ಸಾಧನೆ ಮಾಡಿ, ಸಮಾಜದ ಮುಖ್ಯ ವಾಹಿನಿಗೆ ಬರಬೇಕು ಎಂದರು.
ಬಂಜಾರರು ರಾಣಾ ಪ್ರತಾಪನ ಸಾಮ್ರಾಜ್ಯದ ನಿವಾಸಿಗಳಾಗಿದ್ದರು. ಜೀವನದುದ್ದಕ್ಕೂ ಸಮಾಜದ ಅಭಿವೃದ್ಧಿಗೆ ಶ್ರಮಿಸಿದವರು. ಎಷ್ಟೋ ಜನ ಸೇವಲಾಲರ ಹೇಸರಿನಲ್ಲಿ ಮಾಲೆ ಧರಿಸಿ ಸನ್ಯಾಸತ್ವ ಸ್ವಿಕರಿಸಿ ದುಶ್ಚಟದಿಂದ ದೂರ ಇರುತ್ತಾರೆ. ಬಂಜಾರರು ಹೃದಯವಂತತಿಕೆಯ ಸಮುದಾಯದವರಾಗಿದ್ದು, ಇನ್ನಷ್ಟು ಬೆಳವಣಿಗೆ ಹೊಂದಬೇಕಿದೆ. ಅದಕ್ಕೆ ಪೂರಕವಾಗಿ ಶೈಕ್ಷಣಿಕ ಪ್ರಗತಿ ಸಾಧಿಸಬೇಕು ಎಂದು ಸಲಹೆ ನೀಡಿದರು.
ಮಾಜಿ ಶಾಸಕ ಪಿ.ರಾಜೀವ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಚಿತ್ರದುರ್ಗ ಬಂಜಾರ ಪೀಠದ ಸರ್ದಾರ ಸೇವಾಲಾಲ ಸ್ವಾಮೀಜಿ ಇತತರಿದ್ದರು.
ಅದ್ದೂರಿ ಮೆರವಣಿಗೆ:
ಸಮಾರಂಭಕ್ಕೂ ಮುಂಚೆ ಕೋಟೆ ಕೆರೆ ಬಳಿ ಅಶೋಕ ವೃತ್ತದಿಂದ ಆರಂಭಗೊಂಡ ಸಂತ ಸೇವಾಲಾಲರ ಭಾವಚಿತ್ರದ ಮೆರವಣಿಗೆಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಚಾಲನೆ ನೀಡಿದರು. ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಇತರರಿದ್ದರು.
ಸಂಗೊಳ್ಳಿ ರಾಯಣ್ಣ ವೃತ್ತ, ಚನ್ನಮ್ಮ ವೃತ್ತ, ಜಿಲ್ಲಾಸ್ಪತ್ರೆ ರಸ್ತೆ, ಕೃಷ್ಣದೇವರಾಯ ವೃತ್ತದ ಮಾರ್ಗವಾಗಿ ಕುಮಾರ ಗಂಧರ್ವ ಕಲಾ ಮಂದಿರದವರೆಗೂ ಮೆರವಣಿಗೆ ಸಾಗಿತು. ತಮ್ಮ ಸಮುದಾಯದ ಸಾಂಪ್ರದಾಯಿಕ ಉಡುಗೆ ತೊಡುಗೆ, ಸಾಂಪ್ರದಾಯಿಕ ನೃತ್ಯ, ವಾದ್ಯಮೇಳಗಳ ಮೂಲಕ ಮೂಲಕ ಗಮನ ಸೆಳೆದರು.