ಬೆಳಗಾವಿ:ವರದಕ್ಷಿಣೆ ಎಂಬ ಸಾಮಾಜಿಕ ಪಿಡುಗಿನ ವಿರುದ್ಧ ಬಂಜಾರಾ ಸಮಾಜ ದಿಟ್ಟ ಹೆಜ್ಜೆಯಿಟ್ಟಿದ್ದು, ಸಮಾಜದಲ್ಲಿ ಜಾಗೃತಿ ಮೂಡಿಸಿ ಈ ಅನಿಷ್ಠ ಪದ್ಧತಿಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ಉದ್ದೇಶದಿಂದ ಜಿಲ್ಲಾ ಬಂಜಾರಾ ಸಮಾಜದ ಪ್ರಮುಖರು ಆಯೋಜಿಸಿದ್ದ ವರದಕ್ಷಿಣೆ ನಿಷೇಧ ಜಾಗೃತಿ ಸಭೆ ಯಶಸ್ವಿಯಾಗಿ ಸಂಪನ್ನಗೊಂಡಿತು.
ಯರಗಟ್ಟಿ ಪಟ್ಟಣದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಸಭೆಯಲ್ಲಿ ಜಿಲ್ಲೆಯ ವಿವಿಧ ತಾಂಡಾಗಳಿಂದ ಆಗಮಿಸಿದ್ದ ಸಮಾಜದ ನಾಯಕರು, ಕಾರಭಾರಿಗಳು, ಗುರು ಹಿರಿಯರು, ಮುಖಂಡರು ಹಾಗೂ ನೂರಾರು ಸಮಾಜದ ಸದಸ್ಯರು ವರದಕ್ಷಿಣೆ ಪದ್ಧತಿಗೆ ಸಮಾಜದಲ್ಲಿ ಯಾವುದೇ ಅವಕಾಶ ನೀಡಬಾರದು ಎಂಬ ಏಕಮತದ ನಿರ್ಧಾರ ಕೈಗೊಂಡರು.
ವರದಕ್ಷಿಣೆ ಪದ್ಧತಿ ಕುಟುಂಬಗಳ ಆರ್ಥಿಕ ಹಾಗೂ ಸಾಮಾಜಿಕ ನೆಮ್ಮದಿಗೆ ಧಕ್ಕೆ ತರುತ್ತಿದ್ದು, ಯುವಜನರು ಮತ್ತು ಪಾಲಕರು ಈ ಅನಿಷ್ಠ ಪದ್ಧತಿಯನ್ನು ತಿರಸ್ಕರಿಸುವ ಮೂಲಕ ಸಮಾಜಕ್ಕೆ ಮಾದರಿಯಾಗಬೇಕು. ವಿವಾಹವನ್ನು ಹಣದ ವ್ಯವಹಾರವನ್ನಾಗಿ ಪರಿಗಣಿಸದೆ, ಸರಳ ಮತ್ತು ಮೌಲ್ಯಾಧಾರಿತವಾಗಿ ನಡೆಸುವ ಸಂಸ್ಕೃತಿಯನ್ನು ಬೆಳೆಸುವ ಅಗತ್ಯವಿದೆ ಎಂದು ಮುಖಂಡರು ಅಭಿಪ್ರಾಯಪಟ್ಟರು.