ಆಟೋ ದರ ಪರಿಷ್ಕರಣೆಗೆ ಆಗ್ರಹ

ಬೆಳಗಾವಿಯಲ್ಲಿ ಬುಧವಾರ ಆಟೋ ಚಾಲಕರು ಮತ್ತು ಮಾಲೀಕರು ಪ್ರತಿಭಟನೆ ನಡೆಸಿ, ಆಟೋ ದರ ಪರಿಷ್ಕರಣೆಗೆ ಆಗ್ರಹಿಸಿದರು.
ಬೆಳಗಾವಿಯಲ್ಲಿ ಬುಧವಾರ ಆಟೋ ಚಾಲಕರು ಮತ್ತು ಮಾಲೀಕರು ಪ್ರತಿಭಟನೆ ನಡೆಸಿ, ಆಟೋ ದರ ಪರಿಷ್ಕರಣೆಗೆ ಆಗ್ರಹಿಸಿದರು.
Published on
ಬೆಳಗಾವಿ: ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ನಿಗದಿಪಡಿಸಿರುವ ಆಟೋ ದರ ಪರಿಷ್ಕರಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಗರದಲ್ಲಿ ಬುಧವಾರ ಆಟೋ ಚಾಲಕರು ಮತ್ತು ಮಾಲೀಕರು ಪ್ರತಿಭಟಿಸಿದರು.
ನಗರದ ಚನ್ನಮ್ಮ ವೃತ್ತದಲ್ಲಿ ಜಮಾಯಿಸಿದ ಮಾಲೀಕರು ಮತ್ತು ಚಾಲಕರು, ರ‌್ಯಾಲಿ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಡಿಸಿ ಮೊಹಮ್ಮದ್ ರೋಷನ್‌ರಿಗೆ ಮನವಿ ಪತ್ರ ಸಲ್ಲಿಸಿದರು.
ಈಚೆಗೆ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆಸಿದ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಬಾಡಿಗೆ ದರವನ್ನು ಕನಿಷ್ಠ 1.5ಕಿಮೀವರೆಗೆ 30ರೂ. ಹಾಗೂ ನಂತರ ಪ್ರತಿ ಕಿಮೀ ಪ್ರಯಾಣಕ್ಕೆ 15ರೂ. ಎಂದು ನಿಗದಿಪಡಿಸಲಾಗಿದೆ. ವಾಸ್ತವದಲ್ಲಿ ಈಗಾಗಲೇ ಡಿಸೇಲ್ ಬೆಲೆ ಏರಿಕೆಯಾಗಿದ್ದು, ಆಟೋದವರ ಜೀವನ ನಿರ್ವಹಣೆ ಕಷ್ಟಕರವಾಗಿದೆ. ಹೀಗಾಗಿ ಈ ದರವನ್ನು ಪರಿಷ್ಕರಣೆ ಮಾಡಿ ಕನಿಷ್ಠ ದರ 50ರೂ. ಹಾಗೂ ನಂತರದ ದರವನ್ನು 30ರೂ.ಗೆ ಏರಿಸಬೇಕು. ಇಲ್ಲದಿದ್ದಲ್ಲಿ ಅನಿರ್ದಿಷ್ಟ ಅವಧಿಯವರೆಗೆ ಮುಷ್ಕರ ನಡೆಸಲಾಗುವುದು ಎಂದರು.
ನಗರದಲ್ಲಿ ಖಾಸಗಿ ಆನ್‌ಲೈನ್ ಬುಕ್ಕಿಂಗ್ ಆಧಾರಿತ ಕಂಪನಿಗಳ ಬೈಕ್ ಓಡಾಡಿಸಲು ಪರವಾನಿಗೆ ರದ್ದು ಮಾಡಿದ್ದರೂ ಅನೇಕ ಬೈಕ್ ನವರು ಪ್ರಯಾಣಿಕರ ಸೇವೆ ನೀಡುತ್ತಿದ್ದಾರೆ. ಇಂತಹ ಅನಧಿಕೃತ ಬಾಡಿಗೆ ಓಡಾಟಕ್ಕೆ ಕಡಿವಾಣ ಹಾಕಬೇಕು. ಇಲೆಕ್ಟ್ರಿಕ್ ಆಟೋಗಳು ಪರ್ಮಿಟ್ ಇಲ್ಲದೇ ಓಡಾಡುತ್ತಿದ್ದು, ಇವುಗಳ ಓಡಾಟ ಸ್ಥಗಿತಗೊಳಿಸಬೇಕು. ಸದ್ಯ ನಗರದಿಂದ ಕೇವ 16ಕಿಮೀ ಮಾತ್ರ ಆಟೋಗಳ ಓಡಾಟಕ್ಕೆ ಮೀತಿ ಹಾಕಿದ್ದು, ಇದನ್ನು 30ಕಿಮೀಗೆ ಏರಿಸಬೇಕು ಎಂದು ಮನವಿ ಮಾಡಿಕೊಂಡರು.
ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ, ಆಟೊರಿಕ್ಷಾ ಚಾಲಕರು ಮತ್ತು ಗ್ರಾಹಕ ಇಬ್ಬರಿಗೂ ಹೊರೆಯಾಗದಂತೆ, ಪ್ರಯಾಣ ದರ ನಿಗದಿಪಡಿಸಿ ಎರಡು ದಿನಗಳಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಮನಸೂರ ಹೊನಗೇರಕ, ಗೌತಮ ಕಾಂಬಳೆ, ಬಿ.ಕೆ.ಅವರೊಳ್ಳಿ, ಅಬ್ದುಲ್ ಮೇಸ್ತ್ರಿ, ರಫಿಕ್ ದೇವಲಾಪುರ, ಅಕ್ತರ್ ಪಟೇಲ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net