ಬೆಳಗಾವಿ: ಮಹಾನಗರ ಪಾಲಿಕೆಯಲ್ಲಿ ಕರ್ನಾಟಕ ಪರವಾದ ಗೊತ್ತುವಳಿ ಅಂಗೀಕರಿಸಲು ಆಗ್ರಹಿಸಿ ಕಳೆದ ನೂರು ದಿನಗಳಿಂದ ಹೋರಾಟ ನಡೆಸಿರುವ ಕನ್ನಡಪರ ಸಂಘಟನೆಗಳವರು ಶುಕ್ರವಾರ ವಿಘ್ನೇಶರ ದೇವರ ಮೊರೆ ಹೋದರು.
ಕಳೆದ ಮಾ. 26ರಿಂದ ಆರಂಭವಾದ ಈ ಹೋರಾಟಕ್ಕೆ ಶುಕ್ರವಾರ ನೂರು ದಿನ
ಪೂರ್ಣಗೊಳಿಸಿದ ಸಂದರ್ಭದಲ್ಲಿ ಕನ್ನಡ ಸಂಘಟನೆಗಳ ಮುಖಂಡರು , ಕಿತ್ತೂರು ರಾಣಿ ಚನ್ನಮ್ಮ ವೃತ್ತದಲ್ಲಿನ ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ 101 ಈಡುಗಾಯಿಗಳನ್ನು ಒಡೆದರು.
ಜತೆಗೆ ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂದು ಗೊತ್ತುವಳಿಗಳಿ ಮಂಡಿಸಲು
ಪಾಲಿಕೆಯ ಮಹಾಪೌರ ಮತ್ತು ಉಪ ಮಹಾಪೌರರಿಗೆ ಸದ್ಬುದ್ಧಿ ಕೊಡುವಂತೆ ಪ್ರಾರ್ಥನೆ ಸಲ್ಲಿಸಿದರು.
ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಮಾತನಾಡಿ, ಪಾಲಿಕೆಯಲ್ಲಿ ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ,ಗಡಿವಿವಾದ ಪರಿಹಾರಕ್ಕೆ ಮಹಾಜನ ವರದಿಯೇ ಅಂತಿಮ ಎಂಬ ಗೊತ್ತುವಳಿ ಅಂಗೀಕರಿಸುವವರೆಗೆ ಕನ್ನಡ ಸಂಘಟನೆಗಳ ಹೋರಾಟ ನಿಲ್ಲುವುದಿಲ್ಲ. ಈಗಲಾದರೂ ಬಿಜೆಪಿ ನಾಯಕರು ಗಡಿಭಾಗದ ಹಾಗೂ ನಾಡಿನ ಕನ್ನಡಿಗರ ಭಾವನೆಗಳನ್ನು ಅರ್ಥ ಮಾಡಿಕೊಂಡು ಗೊತ್ತುವಳಿ ಅಂಗೀಕರಿಸಬೇಕೆಂದು ಆಗ್ರಹಿಸಿದರು.