ಸಂಘದ ಅಧ್ಯಕ್ಷ ಜಿ.ಹನುಮಂತಪ್ಪ ಮಾತನಾಡಿ, ಹಳೆಯ ಪಿಂಚಣಿ ಯೋಜನೆ (ಒಪಿಎಸ್) ಹಾಗೂ ಅನುದಾನಿತ ಶಾಲಾ-ಕಾಲೇಜು ನೌಕರರಿಗೆ ಆರೋಗ್ಯ ಸಂಜೀವಿನಿ ಯೋಜನೆ ಜಾರಿಗೊಳಿಸಬೇಕು. ಅನುದಾನಿತ ಶಾಲಾ ಕಾಲೇಜುಗಳಲ್ಲಿ ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡಬೇಕು. ಸರ್ಕಾರಿ ಶಾಲಾ-ಕಾಲೇಜುಗಳ ಮಕ್ಕಳಿಗೆ ನೀಡುತ್ತಿರುವ ಎಲ್ಲ ಸೌಲಭ್ಯಗಳನ್ನು ಅನುದಾನಿತ ಶಾಲಾ-ಕಾಲೇಜುಗಳ ಮಕ್ಕಳಿಗೂ ನೀಡಬೇಕು. ಮಕ್ಕಳ ಸಂಖ್ಯೆ ಕೊರತೆಯಿಂದ ಹೆಚ್ಚುವರಿಯಾದ ಶಿಕ್ಷಕರನ್ನು ಸರ್ಕಾರಿ ಶಾಲಾ-ಕಾಲೇಜುಗಳಿಗೆ ನಿಯೋಜಿಸಬೇಕೆಂದು ಒತ್ತಾಯಿಸಿದರು. ಸಂಘದ ಜಿಲ್ಲಾಧ್ಯಕ್ಷ ಆದಂ ಅಲಿ ಪೀರಜಾದೆ ಮಾತನಾಡಿ, ಬೇಡಿಕೆ ಈಡೇರಿಕೆಗಾಗಿ 15 ವರ್ಷಗಳಿಂದ ಹೋರಾಟ ನಡೆಸುತ್ತಿದ್ದೇವೆ. ನ್ಯಾಯಕ್ಕಾಗಿ ಶಿಕ್ಷಕರೊಬ್ಬರು ಮನನೊಂದು ಬೆಂಗಳೂರಿನಲ್ಲಿ ರೈಲ್ವೆ ಹಳಿಗೆ ತಲೆಯೊಡ್ಡಿ ಮತ್ತು ಇನ್ನಿಬ್ಬರು ಫ್ರೀಡಂ ಪಾರ್ಕ್‌ನಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡರು. ಕೂಡಲೇ ಒಪಿಎಸ್ ಜಾರಿ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ವಿನಂತಿಸಿದರು. ಸಂಘದ ಕಾರ್ಯಾಧ್ಯಕ್ಷ ರಾಮು ಗೂಗವಾಡ, ತಾಲೂಕಾಧ್ಯಕ್ಷ ಸತೀಶ ಅರಭಾವೆ, ಅಶೋಕ ನಾಯಕ, ಎಸ್.ಐ.ಕಳಸನ್ನವರ, ಅಮಿತ ಬಾಳಗೌಡ, ರಾಜು ಪಾಟೀಲ, ಮಹೇಶ ಖೋತ, ರಾಮಚಂದ್ರ ಚೌಹಾಣ, ಸಂದೀಪ ಕಾಂಬಳೆ ಇತರರಿದ್ದರು.