ಡಾ.ಯತೀಂದ್ರ ಸಿದ್ದರಾಮಯ್ಯ ಮೆಚ್ಚುಗೆ ಶಾಲೆಗೆ ಅಭಿವೃದ್ಧಿ ಕ್ರಮದ ಭರವಸೆ
ವಿಜಯವಾಣಿ ಸುದ್ದಿಜಾಲ ಕಾಗವಾಡ
ಗಡಿ ಭಾಗದ ಅತಿಸಣ್ಣ ಕವಲಗುಡ್ಡ ಗ್ರಾಮದಲ್ಲಿ ಕನ್ನಡ ಮಾಧ್ಯಮ ಶಾಲೆ ಕಟ್ಟಿ, ಬೆಳೆಸುವ ಮೂಲಕ ಅಮರೇಶ್ವರ ಮಹಾರಾಜರು ಶೈಕ್ಷಣಿಕ ಕ್ರಾಂತಿ ಮಾಡುತ್ತಿದ್ದಾರೆ. ಶಾಲೆ ಅಭಿವೃದ್ಧಿಗಾಗಿ ಸರ್ಕಾರದ ವತಿಯಿಂದ 1 ಕೋಟಿ ರೂ. ಅನುದಾನ ಬಿಡುಗಡೆಗೆ ಶ್ರಮಿಸಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದರು.
ತಾಲೂಕಿನ ಕವಲಗುಡ್ಡ ಕರಿಯೋಗಿ ಸಿದ್ದಾಶ್ರಮದ ಆವರಣದಲ್ಲಿ ಕನಕ-ಬಸವ ಭಾವ-ಬೆಳಕು ಕಾರ್ಯಕ್ರಮದ ಅಂಗವಾಗಿ ಭಾನುವಾರ ಹಮ್ಮಿಕೊಂಡಿದ್ದ ಶತಾಯುಷಿ ರೈತರ ಪಾದಪೂಜೆ, ಸಿದ್ಧಶ್ರೀ ಅನುಭವ ಮಂಟಪ ಅಡ್ಡಿಗಲ್ಲು ಸಮಾರಂಭ ಹಾಗೂ ಸಿದ್ಧರತ್ನ ಮದಗೊಂಡೇಶ್ವರ ಮಹಾರಾಜರ ಗುರು ಸ್ಮರಣೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಅಮರೇಶ್ವರ ಮಹಾರಾಜರು ಅನೇಕ ಬಸವೇಶ್ವರರು, ಕನಕದಾಸರು ಹಾಗೂ ವಚನಕಾರರ ಚಿಂತನೆ ಅಳವಡಿಸಿಕೊಂಡು ಪ್ರತಿ ವರ್ಷ ವಿನೂತನ ಕಾರ್ಯಕ್ರಮ ಕೈಗೊಳ್ಳುತ್ತಿದ್ದಾರೆ. ಮಠದ ಅಭಿವೃದ್ಧಿಗೆ ಜತೆಗೆ ಬಡ ಅನಾಥ ಮಕ್ಕಳ ಶಿಕ್ಷಣಕ್ಕೆ ಅನುಕೂಲ ಕಲ್ಪಿಸಿದ್ದಾರೆ. ಅಮರೇಶ್ವರ ಸ್ವಾಮೀಜಿ ಸಮಾಜಮುಖಿ ಕಾರ್ಯಕ್ಕೆ ಅಗತ್ಯ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.
ಶಾಸಕ ಲಕ್ಷ್ಮಣ ಸವದಿ ಮಾತನಾಡಿ, ನಾಡಿನಲ್ಲಿ ಧಾರ್ಮಿಕ ಜಾಗೃತಿಗೆ ಶ್ರಮಿಸುತ್ತಿರುವ ಸ್ವಾಮೀಜಿಗಳ ಸಾಲಿನಲ್ಲಿ ಅಮರೇಶ್ವರ ಮಹಾರಾಜರು ಒಬ್ಬರು. ಶ್ರೀಗಳ ದೂರದೃಷ್ಟಿ ಹಾಗೂ ಉದಾತ್ತ ವಿಚಾರಗಳಿಂದ ಕವಲಗುಡ್ಡದಲ್ಲಿ ಶಿಕ್ಷಣ ಕ್ರಾಂತಿಯಾಗಿದೆ. ಮಠ-ಮಂದಿರಗಳು ಮನುಷ್ಯನ ಮನಸ್ಸು ಶುದ್ಧಿಕರಿಸುವ ಶಕ್ತಿ ಕೇಂದ್ರಗಳಾಗಿವೆ ಎಂದರು.