ಅಪರಾಧ ಕೃತ್ಯ ತಡೆಗೆ ಎಐ ಅಸ್ತ್ರ ಪ್ರಯೋಗ!

ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಸ್ಥಾಪನೆಯಾಗಿರುವ ಎಐ ಆಧಾರಿತ ಕಮಾಂಡ್ ಕಂಟ್ರೋಲ್ ಸೆಂಟರ್.
ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಸ್ಥಾಪನೆಯಾಗಿರುವ ಎಐ ಆಧಾರಿತ ಕಮಾಂಡ್ ಕಂಟ್ರೋಲ್ ಸೆಂಟರ್.
Published on

ಪ್ರಮುಖ ಮುಖ್ಯಾಂಶಗಳು

  • ಮೂರು ವರ್ಷದ ಅವಧಿಯಲ್ಲಿ 1.43 ಲಕ್ಷ ರಸ್ತೆ ಅಪಘಾತಗಳು
ಬೆಳಗಾವಿ :ಗ್ರಾಮೀಣ, ನಗರ ಪ್ರದೇಶಗಳಲ್ಲಿ ಕಳ್ಳತನ, ಸಂಚಾರ ನಿಯಮ ಉಲ್ಲಂಘನೆ, ರಸ್ತೆ ಅಪಘಾತ ತಡೆ ಹೀಗೆ ವಿವಿಧ ಕೃತ್ಯಗಳ ನಿಯಂತ್ರಣಕ್ಕೆ ಹರಸಾಹಸ ಪಡುತ್ತಿರುವ ಬೆಳಗಾವಿ ಜಿಲ್ಲಾ ಪೊಲೀಸರು ಕೃತಕ ಬುದ್ಧಿಮತ್ತೆ (ಎಐ) ಅಸ್ತ್ರ ಪ್ರಯೋಗಿಸಲು ಮುಂದಾಗಿದ್ದಾರೆ!
ಹೌದು. ರಾಜ್ಯದಲ್ಲಿಯೇ ಪ್ರಪ್ರಥಮ ಬಾರಿಗೆ ಬೆಳಗಾವಿ ಜಿಲ್ಲೆಯ್ಯದ್ಯಂತ ನಗರಗಳಷ್ಟೇ ಅಲ್ಲದೆ, ಗ್ರಾಮೀಣ ರಸ್ತೆ, ಹೆದ್ದಾರಿ, ಪ್ರಮುಖ ವೃತ್ತಗಳು, ಸಾರ್ವಜನಿಕ ಸ್ಥಳಗಳು ಮತ್ತು ಜನಸಂದಣಿ ಪ್ರದೇಶಗಳು ಜಿಲ್ಲಾ, ರಾಜ್ಯ, ರಾಷ್ಟ್ರೀಯ ಹೆದ್ದಾರಿ ಜಂಕ್ಷನ್‌ಗಳಲ್ಲಿ ಪ್ರಾಯೋಗಿಕವಾಗಿ 260 ಎಐ ತಂತ್ರಜ್ಞಾನ ಆಧಾರಿತ ಸಿಸಿ ಕ್ಯಾಮೆರಾ ಅಳವಡಿಸುತ್ತಿದೆ. ಇದೊಂದು ಅಪರಾಧ ನಿಯಂತ್ರಣಕ್ಕೆ ಪೊಲೀಸ್ ವ್ಯವಸ್ಥೆಯಲ್ಲಿ ತಂತ್ರಜ್ಞಾನ ಆಧಾರಿತ ನಿಗಾ ವ್ಯವಸ್ಥೆಯ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿದೆ.
ಕರ್ನಾಟಕ, ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳ ಕೇಂದ್ರ ಸ್ಥಾನವಾಗಿರುವ ಬೆಳಗಾವಿ ನಗರ, ಗ್ರಾಮೀಣ ಭಾಗದಲ್ಲಿ ಅಪರಾಧ ಸಂಖ್ಯೆಗಳು ಮತ್ತು ಪ್ರಮುಖ ಸಂಚಾರ ನಿಯಮ ಉಲ್ಲಂಘನೆಗೆ ಪ್ರಕರಣ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಕೇವಳ ಮೂರು ವರ್ಷದ ಅವಧಿಯಲ್ಲಿ 1.43 ಲಕ್ಷ ರಸ್ತೆ ಅಪಘಾತಗಳು, 200ಕ್ಕೂ ಅಧಿಕ ಮನೆಗಳ್ಳತನ, ದರೋಡೆ, ಡಕಾಯಿತ ಪ್ರಕರಣಗಳು ದಾಖಲಾಗುತ್ತಿವೆ. ವಾಹನಗಳ ಸಂಚಾರ ದಟ್ಟಣೆ ಸೇರಿ ವಿವಿಧ ಅಪರಾಧ ಪ್ರಕರಣ ನಿಯಂತ್ರಣ ಮಾಡುವುದು ದೊಡ್ಡ ಸವಾಲಿನ ಕೆಲಸವಾಗಿದೆ.
ರಾಜ್ಯದಲ್ಲಿ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಜಂಕ್ಷಣ ಹೊರತು ಪಡಿಸಿದರೆ ಬೆಳಗಾವಿ ಜಿಲ್ಲೆಯ ರಾಜ್ಯ, ರಾಷ್ಟ್ರೀಯ ಹೆದ್ದಾರಿಗಳ ಜಂಕ್ಷನ್‌ಗಳಲ್ಲಿ , ಜನಸಂದಣಿ ಜಂಕ್ಷಣ್‌ಗಳಲ್ಲಿ ಎಐ ಸಿಸಿ ಕ್ಯಾಮೆರಾ ಅಳವಡಿಸುತ್ತಿರುವುದರಿಂದ ವಿವಿಧ ಅಪರಾಧ ಪ್ರಕರಣಗಳು ನಿಯಂತ್ರಣಕ್ಕೆ ಬರಲಿದೆ. ಒಟ್ಟಾರೆ, ಎಐ ಆಧಾರಿತ ಸಿಸಿ ಕ್ಯಾಮರಾ ಯೋಜನೆ ಸಂಚಾರ ಶಿಸ್ತು, ಅಪರಾಧ ತಡೆ ಮತ್ತು ಸಾರ್ವಜನಿಕ ಸುರಕ್ಷತೆಯಲ್ಲಿ ಮೈಲಿಗಲ್ಲಾಗಲಿದೆ. ತಂತ್ರಜ್ಞಾನ ಮತ್ತು ಕಾನೂನು ವ್ಯವಸ್ಥೆಯ ಸಮನ್ವಯದಿಂದ ಸುರಕ್ಷಿತ ನಗರ, ಗ್ರಾಮ ಎಂಬ ಗುರಿಯನ್ನು ಸಾಧಿಸುವತ್ತ ಜಿಲ್ಲೆ ಮುನ್ನುಗ್ಗುತ್ತಿದೆ ಎಂದು ಪೊಲೀಸರು ಅಭಿಪ್ರಾಯ ಪಟ್ಟಿದ್ದಾರೆ.
.....................
ಬಾಕ್ಸ್
ಎಐ ತಂತ್ರಜ್ಞಾನಕ್ಕೆ 7.50 ಕೋಟಿ ರೂ. ವೆಚ್ಚ
ಜಿಲ್ಲೆಯಲ್ಲಿ ಎಐ ತಂತ್ರಜ್ಞಾನ ಆಧಾರಿತ ಸಿಸಿ ಕ್ಯಾಮೆರಾಗಳ ಅಳವಡಿಕೆ, ಕಮಾಂಡ್ ಕಂಟ್ರೋಲ್ ಕೇಂದ್ರ ಸ್ಥಾಪನೆ ಸೇರಿ ವಿವಿಧ ಅಳವಡಿಕೆಗೆ ಲೋಕೋಪಯೋಗಿ ಇಲಾಖೆ 7.50 ಕೋಟಿ ರೂ. ಬಿಡುಗಡೆ ಮಾಡಿರುವುದು ರಾಜ್ಯದಲ್ಲಿಯೇ ಬೆಳಗಾವಿ ಜಿಲ್ಲೆ ಮೊದಲನೆಯದು. 200ಕ್ಕೂ ಅಧಿಕ ಕಡೆ ಸಿಸಿ ಕ್ಯಾಮೆರಗಳ ಅಳವಡಿಕೆ ಕಾರ್ಯ ಶೇ.90ರಷ್ಟು ಪೂರ್ಣಗೊಂಡಿದೆ. ಒಂದು ತಿಂಗಳ ಒಳಗಾಗಿ ಕಾರ್ಯರಂಭ ಮಾಡಲಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ತಿಳಿಸಿದ್ದಾರೆ.
.............................
ಬಾಕ್ಸ್
ಎಐ ತಂತ್ರಜ್ಞಾನ ಸಿಸಿ ಕ್ಯಾಮೆರಗಳ ವಿಶೇಷತೆ!
* ಜಂಕ್ಷಗಳಲ್ಲಿ ದಿನದ 24 ಗಂಟೆ ಕಾರ್ಯನಿರ್ವಹಣೆ.
* ತ್ವರಿತ ಮಾಹಿತಿ ಸಂಗ್ರಹ ಮತ್ತು ತಕ್ಷಣದ ಕ್ರಮಕ್ಕೆ ಇದು ಸಹಕಾರಿ.
* ವಾಹನ ಮಾಲೀಕರ ಮನೆಗೆ ಸ್ವಯಂ ಚಾಲಿತ ದಂಡ ರಶೀದಿ ರವಾನೆ
* ಹೆಲ್ಮೆಟ್, ತ್ರಿಬಲ್ ರೈಡ್, ಸೀಟ್ ಬೆಲ್ಟ್ ಇಲ್ಲದ ಚಾಲನೆ ಪತ್ತೆ.
* ಅತಿವೇಗ ಮತ್ತು ತಪ್ಪು ದಿಕ್ಕಿನ ಸಂಚಾರ ಪತ್ತೆ
* ಸ್ವಯಂಚಾಲಿತವಾಗಿ ಗುರುತಿಸಿ ದಾಖಲಿಸುವ ಸಾಮರ್ಥ್ಯ ಈ ಕ್ಯಾಮರಾಗಳಿಗೆ ಇದೆ.
*ಮಾನವ ದೋಷಗಳಿಗೆ ಅವಕಾಶ ಕಡಿಮೆಯಾಗಲಿದೆ.
*ಪೊಲೀಸರ ಮೇಲಿನ ಒತ್ತಡ ಕಡಿತ, ಕಾರ್ಯಕ್ಷಮತೆ ಹೆಚ್ಚಳ
..................................
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net