ಅಥಣಿ:ಗುರು-ವಿರಕ್ತ ಪರಂಪರೆಯ ಕೊಂಡಿಯಾಗಿರುವ ಅಥಣಿ ಗಚ್ಚಿನಮಠ ಎಲ್ಲ ಸ್ವಾಮೀಜಿಗಳಿಗೆ ಮಾರ್ಗದರ್ಶಿಯಾದ ಶಿವಯೋಗದ ಶಿಖರವಾಗಿದೆ ಎಂದು ಮುರಗೋಡ ದುರುದುಂಡೀಶ್ವರಮಠದ ನೀಲಕಂಠ ಸ್ವಾಮೀಜಿ ಹೇಳಿದರು.
ಇಲ್ಲಿನ ಗಚ್ಚಿನಮಠದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಶರಣ ಸಂಸ್ಕೃತಿ ಉತ್ಸವದ ಸಮಾರೋಪ ಮತ್ತು ಸಿದ್ಧಲಿಂಗ ಅಪ್ಪಗಳ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಮುರಗೋಡ ಮಠಕ್ಕೂ ಅಥಣಿ ಗಚ್ಚಿನಮಠಕ್ಕೂ ಅವಿನಾಭವ ಸಂಬಂಧವಿದೆ. ಮುರುಘೇಂದ್ರ ಶಿವಯೋಗಿಗಳ ದಾರಿಯಲ್ಲಿ ನಾವು ಸಾಗಿ ಅವರಿಗೆ ಗೌರವ ಸಲ್ಲಿಸಬೇಕು. ಉತ್ತಮ ಸಮಾಜಮುಖಿ ಕಾರ್ಯ ಮಾಡಬೇಕು ಎಂದರು.
ಬಸವನಬಾಗೇವಾಡಿ ಹಿರೇಮಠದ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಸಮಾಜ ಸುಧಾರಣೆಯಲ್ಲಿ ಮಠಗಳ ಪಾತ್ರ ಮಹತ್ವದಾಗಿದೆ. ಭಕ್ತಿ, ಸಂಸ್ಕೃತಿ, ಸಂಸ್ಕಾರ, ಆಶ್ರಯ, ಶಿಕ್ಷಣ, ಅನ್ನ, ಅರಿವು, ಆಚಾರ ನೀಡುತ್ತಿರುವ ಗಚ್ಚಿನಮಠವು ಸರ್ವಧರ್ಮಗಳ ಸಮನ್ವಯ ಕೇಂದ್ರವಾಗಿದೆ ಎಂದು ಹೇಳಿದರು.
ರಬಕವಿಯ ಗುರುದೇವ ಆಶ್ರಮದ ಗುರುಸಿದ್ಧೇಶ್ವರ ಸ್ವಾಮೀಜಿ ಮಾತನಾಡಿ, ಸರಳತೆ, ಸಹಜತೆ, ಸಹಕಾರ ಮನೊಭಾವದಿಂದ ಬದುಕು ಸುಂದರಗೊಳಿಸಿಕೊಳ್ಳಬೇಕು ಎಂದರು. ಗಚ್ಚಿನಮಠದ ಶಿವಬಸವ ಸ್ವಾಮೀಜಿ ಮಾತನಾಡಿ, ಶರಣ ಸಂಸ್ಕೃತಿ ಉತ್ಸವ ಯಶಸ್ಸಿಗೆ ಭಕ್ತರೇ ಮೂಲ ಕಾರಣ ಎಂದು ತಿಳಿಸಿದರು. ಪುರಸಭೆ ಸದಸ್ಯ ಸಂತೋಷ ಸಾವಡಕರ, ಪುಣೆ ಉದ್ಯಮಿ ಶಿವಲಿಂಗ ಢವಳೇಶ್ವರ ಮಾತನಾಡಿದರು.