ಮುಖ್ಯಮಂತ್ರಿಗೆ ಅದ್ದೂರಿ ಸ್ವಾಗತ

ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಗುರುವಾರ ಮುಖ್ಯಮಂತ್ರಿ ಡಿಕೆಶಿಗೆ ಸ್ವಾಗತಿಸಿಕೊಂಡ ಎಂಲ್‌ಸಿ ಚನ್ನರಾಜ ಹಟ್ಟಿಹೊಳಿ, ಅಂಜಲಿ ನಿಂಬಾಳಕರ ಇತರರಿದ್ದರು.
ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಗುರುವಾರ ಮುಖ್ಯಮಂತ್ರಿ ಡಿಕೆಶಿಗೆ ಸ್ವಾಗತಿಸಿಕೊಂಡ ಎಂಲ್‌ಸಿ ಚನ್ನರಾಜ ಹಟ್ಟಿಹೊಳಿ, ಅಂಜಲಿ ನಿಂಬಾಳಕರ ಇತರರಿದ್ದರು.
Published on
ಬೆಳಗಾವಿ : ಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿಗೆ ಬೆಳಗಾವಿಗೆ ಆಗಮಿಸಿದ್ದ ಹಿನ್ನೆಲೆಯಲ್ಲಿ ಡಿ.ಕೆ. ಶಿವಕುಮಾರಗೆ ಜಿಲ್ಲಾ ಕಾಂಗ್ರೆಸ್ ನಾಯಕರು, ಶಾಸಕರು ಹಾಗೂ ಕಾರ್ಯಕರ್ತರು ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಅದ್ಧೂರಿ ಸ್ವಾಗತ ಕೋರಿದರು.
ವಿಶೇಷ ವಿಮಾನದ ಮೂಲಕ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಡಿ.ಕೆ.ಶಿವಕುಮಾರ ಹೊರಬರುತ್ತಿದ್ದಂತೆಯೇ ಅವರ ಆಗಮನಕ್ಕಾಗಿ ಕಾದು ನಿಂತಿದ್ದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಡಿಕೆ... ಡಿಕೆ... ಎಂಬ ಜಯಘೋಷ ಮೊಳಗಿಸಿದರು. ಪುಷ್ಪವೃಷ್ಟಿ, ಹೂಗುಚ್ಛಗಳ ಸಮರ್ಪಣೆ ಹಾಗೂ ಸಂಭ್ರಮಾಚರಣೆಯ ಮೂಲಕ ತಮ್ಮ ನೆಚ್ಚಿನ ನಾಯಕನನ್ನು ಬರಮಾಡಿಕೊಂಡರು.
ಸಚಿವರಾದ ಎಂ.ಬಿ.ಪಾಟೀಲ, ಸತೀಶ ಜಾರಕಿಹೊಳಿ, ಶಾಸಕರಾದ ಲಕ್ಷ್ಮೀ ಹೆಬ್ಬಾಳಕರ, ಅಶೋಕ ಪಟ್ಟಣ, ಬಾಬಾಸಾಹೇಬ ಪಾಟೀಲ, ವಿಜಯಾನಂದ ಕಾಶಪ್ಪನವರ, ಮಹೇಂದ್ರ ತಮ್ಮಣ್ಣವರ, ವಿಶ್ವಾಸ ವೈದ್ಯ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಿನಯ ನಾವಲಗಟ್ಟಿ, ಮಹಿಳಾ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷೆ ಅಶ್ವಿನಿ ಬೆಳವಡಿ, ಮಾಜಿ ಶಾಸಕಿ ಅಂಜಲಿ ನಿಂಬಾಳಕರ ಸೇರಿದಂತೆ ಪಕ್ಷದ ಹಲವು ಮುಖಂಡರು ಮುಖ್ಯಮಂತ್ರಿಯನ್ನು ಸ್ವಾಗತಿಸಿದರು.
ವಿಮಾನ ನಿಲ್ದಾಣದಿಂದ ಮುಖ್ಯರಸ್ತೆಗೆ ಬರುತ್ತಿದ್ದಂತೆಯೇ ಜೆಸಿಬಿಗಳ ಮೇಲಿನಿಂದ ಸಿಎಂ ಕಾರಿನ ಮೇಲೆ ಪುಷ್ಪವೃಷ್ಟಿಗೈಯ್ಯಲಾಯಿತು. ಜತೆಗೆ ಬೃಹತ್ ಆ್ಯಪಲ್ ಹಾರದ ಮೂಲಕವೂ ಸ್ವಾಗತಿಸಿಕೊಂಡರು. ಅಭಿಮಾನಿಗಳ ಹರ್ಷೋದ್ಘಾರವನ್ನು ಕಂಡು, ಚಲಿಸುತ್ತಿದ್ದ ಕಾರಿನಲ್ಲೇ ಎದ್ದು ನಿಂತು ಕೈ ಬೀಸಿದರು. ಇದರಿಂದ ಮತ್ತಷ್ಟು ಸಂಭ್ರಮಗೊಂಡ ಕಾರ್ಯಕರ್ತರು ಪಟಾಕಿ ಸಿಡಿಸಿ, ಘೋಷಣೆಗಳನ್ನು ಕೂಗಿದರು.

ಇಷ್ಟು ದಿನ ಮುಂದಿನ ಮುಖ್ಯಮಂತ್ರಿ ಎಂದು ಬ್ಯಾನರ್ ಹಾಕಿ ಸ್ವಾಗತ ಮಾಡಿಕೊಳ್ಳುತ್ತಿದ್ದೇವು. ಈಗ ಅವರನ್ನು ನಮ್ಮ ಮುಖ್ಯಮಂತ್ರಿ ಎಂದು ಹುಮ್ಮಸ್ಸು ಮತ್ತು ಹೆಮ್ಮೆಯಿಂದ ಬ್ಯಾನರ್ ಹಾಕಿ ಸ್ವಾಗತ ಮಾಡಿಕೊಂಡಿದ್ದೇವೆ. ಅಭಿಮಾನಿಗಳು ಎರಡು ದಿನದಿಂದ ತಯಾರಿ ಮಾಡಿಕೊಂಡು, ಇಷ್ಟು ಅದ್ದೂರಿಯಾಗಿ ಸ್ವಾಗತಿಸಿದ್ದಾರೆ. ಡಿಕೆಶಿಯವರ ಸಂಪುಟದಲ್ಲಿ ಹೆಬ್ಬಾಳ್ಕರ್‌ರಿಗೆ ಸಚಿವ ಸ್ಥಾನ ಸಿಗಬೇಕೆಂಬ ಭೇಡಿಕೆ ಅಭಿಮಾನಿಗಳದ್ದಾಗಿದೆ. ಮಹಿಳಾ ನಾಯಕತ್ವ ಬೆಳೆಸಲು ಮಂತ್ರಿ ಸ್ಥಾನ ಕೊಡುವರೆಂಬ ಭರವಸೆ ಇದೆ.

— -ಚನ್ನರಾಜ ಹಟ್ಟಿಹೊಳಿ, ವಿಧಾನ ಪರಿಷತ್ ಸದಸ್ಯ


---
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net