ದೇಶದ ಗೌರವ ವಿಶ್ವಾದ್ಯಂತ ರಾರಾಜಿಸಲಿ

9ನೇ ಬಾರಿ ಸಮಗ್ರ ವೀರಾಗ್ರಣಿ ಪ್ರಶಸ್ತಿ
9ನೇ ಬಾರಿ ಸಮಗ್ರ ವೀರಾಗ್ರಣಿ ಪ್ರಶಸ್ತಿ
Published on
ಬೆಳಗಾವಿ: ನಮ್ಮ ವಿದ್ಯಾರ್ಥಿಗಳು ಏಷ್ಯನ್ ಗೇಮ್ಸ್, ಕಾಮನ್‌ವೆಲ್ತ್, ಒಲಿಂಪಿಕ್ಸ್ ಕ್ರೀಡಾಕೂಟ ವರೆಗೂ ತಲುಪಿ ದೇಶದ ಗೌರವವನ್ನು ವಿಶ್ವಾದ್ಯಂತ ರಾರಾಜಿಸುವಂತೆ ಮಾಡಬೇಕು ಎಂದು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಹೇಳಿದರು.
ನಗರದ ಕೆಎಲ್‌ಇ ಲಿಂಗರಾಜ್ ಮಹಾವಿದ್ಯಾಲಯದ ಆವರಣದಲ್ಲಿ ಬುಧವಾರ ರಾಣಿ ಚನ್ನಮ್ಮ ವಿವಿ ಆಯೋಜಿಸಿದ್ದ 9ನೇ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಸತತ 9ನೇ ಬಾರಿ ಸಮಗ್ರ ವೀರಾಗ್ರಣಿ ಪ್ರಶಸ್ತಿ ಪಡೆದಿರುವ ಕಾಲೇಜಿನ ವಿದ್ಯಾರ್ಥಿಗಳನ್ನು ಅಭಿನಂದಿಸಿ ಮಾತನಾಡಿದ ಅವರು, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಕೆಎಲ್‌ಇ ಸಂಸ್ಥೆಯು ಎಲ್ಲ ರೀತಿಯ ಸಹಾಯ ಮತ್ತು ಪ್ರೋತ್ಸಾಹ ನೀಡುತ್ತದೆ ಎಂದರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಈಚೆಗೆ ರಾಣಿ ಚನ್ನಮ್ಮ ವಿವಿ ಆಯೋಜಿಸಿದ್ದ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಕೆಎಲ್‌ಇ ಲಿಂಗರಾಜ್ ಮಹಾವಿದ್ಯಾಲಯ ವಿದ್ಯಾರ್ಥಿಗಳು 14 ಚಿನ್ನ, 8 ಬೆಳ್ಳಿ, 2 ಕಂಚಿನೊಂದಿಗೆ ಪುರುಷರ ವಿಭಾಗದ ಸಮಗ್ರ ವೀರಾಗ್ರಣಿ ಪ್ರಶಸ್ತಿ ಪಡೆದಿದೆ. ವಿದ್ಯಾರ್ಥಿನಿಯರು 8 ಚಿನ್ನ, 5 ಬೆಳ್ಳಿ, 3 ಕಂಚಿನ ಪದಕದೊಂದಿಗೆ ಸಮಗ್ರ ವೀರಾಗ್ರಣಿ ಪ್ರಶಸ್ತಿ ಪಡೆದರು. ಪುರುಷ ವಿಭಾಗದ ವೈಯಕ್ತಿಕ ವೀರಾಗ್ರಣಿ ಪ್ರಶಸ್ತಿಯನ್ನು ಭೂಷಣ ಪಾಟೀಲ ಮತ್ತು ಮಹಿಳೆಯರ ವಿಭಾಗದ ವೈಯಕ್ತಿಕ ವೀರಾಗ್ರಣಿ ಪ್ರಶಸ್ತಿಯನ್ನು ವೈಭವಿ ಬುದ್ರೂಕ್ ಸ್ವೀಕರಿಸಿದರು.
ವಿದ್ಯಾರ್ಥಿಗಳು 17 ಹೊಸ ದಾಖಲೆ ಸೃಷ್ಟಿಸಿದ್ದಾರೆ. 100 ಮೀ. ಪುರುಷರ ಓಟದಲ್ಲಿ ಭೂಷನ್ ಪಾಟೀಲ, 100 ಮೀ. ಮಹಿಳೆಯರ ಓಟದಲ್ಲಿ ವೈಭವಿ ಬುದ್ರೂಕ್, 100, 200 ಮೀ. ಮಹಿಳೆಯರ ಅಡೆತಡೆ ಓಟದಲ್ಲಿ ಅಪೂರ್ವಾ ನಾಯಕ, 110 ಮೀ. ಅಡೆತಡೆ ಓಟದಲ್ಲಿ ಸಂಜಯ ನಾಯ್ಕ, 200, 400 ಮೀ. ಪುರುಷರ ಓಟದಲ್ಲಿ ಶ್ರೀನಾಥ ದಳವಿ, 5,000 ಮೀ. ಪುರುಷರ ಓಟದಲ್ಲಿ ವಿಜಯ ಸಾವತಕರ, ಪುರುಷರ ಸರಪಳಿ ಗುಂಡು ಎಸೆತದಲ್ಲಿ ಚನ್ನವೀರೇಶ ಹಿಕ್ಕಿಮಠ, ಮಹಿಳೆಯರ ಸರಪಳಿ ಗುಂಡು ಎಸೆತದಲ್ಲಿ ಸ್ಪೃಹ ನಾಯಿಕ್, ಪುರುಷರ ಭರ್ಚಿ ಎಸೆತದಲ್ಲಿ ಶಶಾಂಕ ಪಾಟೀಲ, ರೀಲೆ ಓಟದಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಡಾ.ಕೋರೆ ಅಭಿನಂದಿಸಿದ್ದಾರೆ.
ಕೆಎಲ್‌ಇ ಸಂಸ್ಥೆಯ ಆಡಳಿತ ಮಂಡಳಿ ನಿರ್ದೇಶಕರು, ಕಾರ್ಯದರ್ಶಿಗಳು, ಪ್ರಾಚಾರ್ಯ ಡಾ.ಹನುಮಂತ ಮೇಲಿನಮನಿ, ಕ್ರೀಡಾ ಹಾಗೂ ದೈಹಿಕ ಶಿಕ್ಷಣ ನಿರ್ದೇಶಕ ಡಾ.ಸಿ.ರಾಮಾರಾವ, ಜಿಮಖಾನಾ ಉಪಾಧ್ಯಕ್ಷ ವಿನಾಯಕ ವರುಟೆ ಅಭಿನಂದಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net