ಸಿಎಸ್‌ಆರ್ ನಿಧಿಯಲ್ಲಿ 2 ಸಾವಿರ ಸರ್ಕಾರಿ ಶಾಲೆ ನಿರ್ಮಾಣ

ಸುವರ್ಣ ವಿಧಾನಸೌಧದಲ್ಲಿ  ಜರುಗಿದ ಬೆಳಗಾವಿ ವಿಭಾಗ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ  ಮಾತನಾಡಿದ
ಸುವರ್ಣ ವಿಧಾನಸೌಧದಲ್ಲಿ ಜರುಗಿದ ಬೆಳಗಾವಿ ವಿಭಾಗ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಮಾತನಾಡಿದ
Published on
ಬೆಳಗಾವಿ:ರಾಜ್ಯದಲ್ಲಿ ಸರ್ಕಾರಿ ಶಾಲೆಗಳ ಅಭಿವೃದ್ಧಿ ಮತ್ತು ಮೂಲಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಕಂಪನಿಗಳ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್) ನಿಧಿ ಅಡಿಯಲ್ಲಿ 8,000 ಕೋಟಿ ರೂ. ವೆಚ್ಚದಲ್ಲಿ ಎರಡು ಸಾವಿರ ಸರ್ಕಾರಿ ಶಾಲೆ ನಿರ್ಮಾಣ ಗುರಿ ಹೊಂದಲಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಘೋಷಿಸಿದರು.
ಸುವರ್ಣ ವಿಧಾನಸೌಧದಲ್ಲಿ ಜರುಗಿದ ಬೆಳಗಾವಿ ವಿಭಾಗ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಜನರು ಮಕ್ಕಳ ವಿದ್ಯಾಭ್ಯಾಸ ಹಾಗೂ ಉದ್ಯೋಗ ಅರಸಿ ಟ್ಟಣಗಳಿಗೆ ಬರುತ್ತಾರೆ. ಇದನ್ನು ತಡೆಯಲು ಸಿ.ಎಸ್.ಆರ್. ನೀತಿಯಡಿ ಮೂರು ಗ್ರಾಪಂ ಸೇರಿಸಿ 10-15 ಕೋಟಿ ರೂ. ವೆಚ್ಚದಲ್ಲಿ ಒಂದು ಸರ್ಕಾರಿ ಶಾಲೆ ನಿರ್ಮಾಣ ಮಾಡಲಾಗುವುದು. ಈ ರೀತಿ ಕನಿಷ್ಠ 2,000 ಶಾಲೆಗಳನ್ನು ನಿರ್ಮಿಸುವ ಗುರಿ ಹೊಂದಲಾಗಿದೆ. ಆಯಾ ಜಿಲ್ಲೆಯ ದೊಡ್ಡ ಶಿಕ್ಷಣ ಸಂಸ್ಥೆಗಳು ಮೂರು ಸರ್ಕಾರಿ ಶಾಲೆಗಳನ್ನು ದತ್ತು ಪಡೆದುಕೊಳ್ಳಬೇಕು. ಎಲ್ಲರಿಗೂ ಗುಣಮಟ್ಟದ ಪ್ರಾಥಮಿಕ ಶಿಕ್ಷಣ ಒದಗಿಸಬೇಕು ಎಂಬುದು ನಮ್ಮ ಆಶಯವಾಗಿದೆ ಎಂದು ತಿಳಿಸಿದರು.
ಎಲ್ಲ ಇಲಾಖೆಗಳ ಜಿಲ್ಲಾ, ತಾಲ್ಲೂಕು ಮಟ್ಟದ ಪ್ರತಿ ಅಧಿಕಾರಿಯೂ ಕೇಂದ್ರಸ್ಥಾನದಲ್ಲಿರುವ ಬಗ್ಗೆ ಡಿಸಿ, ಸಿಇಒಗಳು ಖಚಿತಪಡಿಸಿಕೊಳ್ಳಬೇಕು. ಚಲನವಲನ ವಹಿ ಮೇಲೆ ನಿರಂತರ ನಿಗಾ ವಹಿಸಬೇಕು. ಸರ್ಕಾರವನ್ನು ಜನರು ಹುಡುಕಬಾರದು. ಜನರ ಬಳಿ ಸರಕಾರ ಇರಬೇಕು ಎಂಬುದು ನನ್ನ ಮೊದಲ ಆದ್ಯತೆ. ಜನರನ್ನು ಕಚೇರಿಗೆ ಅಲೆದಾಡಿಸುವುದು ನಿಲ್ಲಬೇಕು. ಅಧಿಕಾರಿಗಳು ಘನತೆಯಿಂದ ಇರಬೇಕು ಎಂದು ಸೂಚಿಸಿದರು.
ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ, ವಿಧಾನಸಭೆಯ ಹಂಗಾಮಿ ಸಭಾಧ್ಯಕ್ಷ ರುದ್ರಪ್ಪ ಲಮಾಣಿ, ಸಚಿವರಾದ ಎಂ.ಬಿ.ಪಾಟೀಲ, ಸತೀಶ ಜಾರಕಿಹೊಳಿ, ಯು.ಟಿ.ಖಾದರ, ಈಶ್ಚರ ಖಂಡ್ರೆ, ಶಾಸಕರಾದ ಲಕ್ಷ್ಮೀ ಹೆಬ್ಬಾಳ್ಕರ, ಲಕ್ಷ್ಮಣ ಸವದಿ, ವಿಶ್ವಾಸ ವೈದ್ಯ, ಮಹಾಂತೇಶ ಕೌಜಲಗಿ, ಜಿ.ಟಿ. ಪಾಟೀಲ, ಎಚ್. ಕೆ. ಪಾಟೀಲ, ಬಾಬಾಸಾಹೇಬ ಪಾಟೀಲ, ಅಶೋಕ ಪಟ್ಟಣ, ಎಂಎಲ್ ಸಿ ಚನ್ನರಾಜ ಹಟ್ಟಿಹೊಳಿ, ಸರಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net