30 ಸಾವಿರ ವೆಂಟಿಲೇಟರ್ ತಯಾರಿಸಲಿದೆ ಬಿಇಎಲ್: ಪ್ರಧಾನಿ ಕರೆಗೆ ಓಗೊಟ್ಟ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್

ventletar april
Published on

ಬೆಂಗಳೂರು: ಕರೊನಾ ವ್ಯಾಪಕವಾಗಿ ವ್ಯಾಪಿಸುವ ಮೂಲಕ ಆತಂಕ ಸೃಷ್ಟಿ ಮಾಡುತ್ತಿದ್ದರೂ ವೈದ್ಯಕೀಯ ಕ್ಷೇತ್ರ ನಿರೀಕ್ಷೆ ಮಾಡುತ್ತಿರುವ ವೆಂಟಿಲೇಟರ್​ಗಳು (ಕೃತಕ ಉಸಿರಾಟ ವ್ಯವಸ್ಥೆ) ಮಾತ್ರ ಇನ್ನೂ ಸಿದ್ಧವಾಗಿಲ್ಲ. ತುರ್ತಾಗಿ ಲಭ್ಯವಾಗುವ ಸ್ಥಿತಿಯೂ ಸದ್ಯದಲ್ಲಿಲ್ಲ.

ಜೀವರಕ್ಷಕ ಸಾಧನವಾಗಿರುವ ವೆಂಟಿಲೇಟರ್​ಗೆ ಹೀಗೆ ದಿಢೀರ್ ಬೇಡಿಕೆ ಬರುತ್ತದೆ ಎಂದು ಯಾರೂ ನಿರೀಕ್ಷೆ ಮಾಡಿರಲಿಲ್ಲ. ಕರೊನಾ ಅಟ್ಟಹಾಸ ಹೆಚ್ಚಾದ ಬಳಿಕವಷ್ಟೇ ವೆಂಟಿಲೇಟರ್​ಗಳ ಬಗ್ಗೆ ಗಮನ ನೀಡಲಾಗಿದೆ.

ದಕ್ಷಿಣ ಭಾರತದಲ್ಲಿ ವೆಂಟಿಲೇಟರ್ ತಯಾರಿಸಲು ಹೆಸರುವಾಸಿಯಾಗಿರುವ ಮೈಸೂರಿನ ‘ಸ್ಕಾ್ಯನ್ ರೇ’ ಕಂಪನಿ ಕಂಪನಿ ಹಗಲೂರಾತ್ರಿ ಕಾರ್ಯ ನಿರ್ವಹಿ ಸುತ್ತಿದೆ. ಆದರೂ, ಬೇಡಿಕೆಗೆ ಅನುಗುಣ ವಾಗಿ ವೆಂಟಿಲೇಟರ್ ಪೂರೈಸಲು ಮಾಡಲು ಸಾಧ್ಯವಾಗುತ್ತಿಲ್ಲ.

ಪ್ರಧಾನಿ ಕರೆಗೆ ಓಗೊಟ್ಟ ಬಿಇಎಲ್: ದೇಶದಲ್ಲಿ ಕರೊನಾ ಸೋಂಕಿತರ ಸಂಖ್ಯೆ ಹೆಚ್ಚುವ ಅಂದಾಜು ಅರಿತ ಪ್ರಧಾನಿ ನರೇಂದ್ರ ಮೋದಿ, ತಜ್ಞರ ಅಭಿಪ್ರಾಯ ಪರಿಗಣಿಸಿ ಮೊದಲ ಹಂತದಲ್ಲಿ 1 ಲಕ್ಷ ವೆಂಟಿಲೇಟರ್​ಗಳನ್ನು ಸಜ್ಜು ಮಾಡಲು ನಿರ್ಧರಿಸಿದರು. ಅಷ್ಟು ವೆಂಟಿಲೇಟರ್ ಕೂಡಲೇ ಸರಬರಾಜು ಮಾಡುವುದು ಕಷ್ಟವಾಗಿರುವುದರಿಂದ ಬಿಇಎಲ್​ಗೆ ಈ ಜವಾಬ್ದಾರಿ ವಹಿಸಲು ನಿರ್ಧರಿಸಲಾಯಿತು. ಪ್ರಧಾನಿ ಕರೆಗೆ ಓಗೊಟ್ಟ ಭಾರತ ಎಲೆಕ್ಟ್ರಾನಿಕ್ಸ್ ಲಿ.(ಬಿಇಎಲ್) ದೇಶ ಸೇವೆಗೆ ಸಿದ್ಧವಾಯಿತು.

ವೆಂಟಿಲೇಟರ್ ತಯಾರಿಕೆಗೆ ಸಿದ್ಧತೆ: ಪ್ರಸಕ್ತ ಸನ್ನಿವೇಶವನ್ನು ಸವಾಲು ಎಂದು ಪರಿಗಣಿಸಿದ ಬಿಇಎಲ್, ಲಾಕ್​ಡೌನ್ ಸಮಯದಲ್ಲಿ ವೆಂಟಿಲೇಟರ್ ತಯಾರಿಸಲು ನಿರ್ಧರಿಸಿತು. ಮೊದಲಿಗೆ ಈ ತಂತ್ರಜ್ಞಾನವನ್ನು ಪಡೆದುಕೊಳ್ಳಲು ಸ್ಕಾ್ಯನ್​ರೇ ಕಂಪನಿ ಜೊತೆಗೆ ಒಡಂಬಡಿಕೆ ಮಾಡಿಕೊಳ್ಳಲಾಯಿತು. ತರಬೇತಿ ಪಡೆದುಕೊಳ್ಳಲು ಅಲ್ಲಿಗೆ ನುರಿತ ತಜ್ಞರ ತಂಡವನ್ನು ಕಳುಹಿಸಲಾಯಿತು. ಇಡೀ ಬಿಇಎಲ್ ಹಗಲಿರುಳು ವೆಂಟಿಲೇಟರ್ ತಯಾರಿಕೆಗೆ ಮೀಸಲಿಟ್ಟಿತು.

ಆಮದು ಮಾಡಿಕೊಳ್ಳುವ ಸವಾಲು: ವೆಂಟಿಲೇಟರ್ ಉಪಕರಣ ಸಿದ್ಧವಾಗಬೇಕಾದರೆ, ಅದಕ್ಕೆ ಶೇ. 50 ಬಿಡಿಭಾಗಗಳಿಗೆ ವಿದೇಶಗಳ ಮೊರೆ ಹೋಗಲೇಬೇಕಾದುದು ಅನಿವಾರ್ಯ. ಅದಕ್ಕಾಗಿ ಬೇಕಾಗುವ ಉತ್ಪನ್ನಗಳನ್ನು ಪಟ್ಟಿ ಮಾಡಿ ಕೇಂದ್ರ ಸರ್ಕಾರಕ್ಕೆ ನೀಡಿದ ಬಿಇಎಲ್, ಅವೆಲ್ಲವನ್ನು ಚೀನಾ, ಅಮೆರಿಕ ಸೇರಿ ಹಲವು ದೇಶಗಳಿಂದ ಆಮದು ಮಾಡಿಕೊಳ್ಳಲು ಕೂಡಲೇ ಕ್ರಮ ಕೈಗೊಂಡಿತು. ಬಹುತೇಕ ಬಿಡಿಭಾಗಗಳು ಬಿಇಎಲ್​ಗೆ ಬಂದಿಳಿದಿವೆ, ಇನ್ನೂ ಹಲವು ಬರಬೇಕಿದೆ.

ಮಹೀಂದ್ರ, ಮಾರುತಿಗಳಿಗೂ ಹೊಣೆ

ಕೇಂದ್ರ ಸರ್ಕಾರ ಬಿಇಎಲ್​ಗೆ 30 ಸಾವಿರ ವೆಂಟಿಲೇಟರ್ ಉತ್ಪಾದನೆ ಮಾಡಿಕೊಡುವಂತೆ ಆದೇಶ ನೀಡಿದೆ. ಮಹೀಂದ್ರ ಕಂಪನಿ ಮತ್ತು ಮಾರುತಿ ಕಂಪನಿಗಳಿಗೂ ತಲಾ 10 ಸಾವಿರ ವೆಂಟಿಲೇಟರ್ ಉತ್ಪಾದನೆಗೆ ಆದೇಶ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಮಹೀಂದ್ರ ಕಂಪನಿ ಪುಣೆಯಲ್ಲಿ, ಮಾರುತಿ ಕಂಪನಿ ನೊಯಿಡಾದಲ್ಲಿ ಉತ್ಪಾದನಾ ಘಟಕಗಳನ್ನು ಹೊಂದಿದೆ.

ಐಎಎಸ್ ಅಧಿಕಾರಿ ಉಸ್ತುವಾರಿ

ವೆಂಟಿಲೇಟರ್ ತಯಾರಿಕೆಗೆ ಯಾವುದೇ ಅಡೆತಡೆ ಆಗಬಾರದು ಮತ್ತು ಶರವೇಗದಲ್ಲಿ ಎಲ್ಲವೂ ಆಗಬೇಕು ಎನ್ನುವ ಕಾರಣಕ್ಕೆ ಕೇಂದ್ರ ಸರ್ಕಾರ ಒಬ್ಬ ಐಎಎಸ್ ಅಧಿಕಾರಿಯನ್ನು ಇದಕ್ಕೆ ಉಸ್ತುವಾರಿ ಅಧಿಕಾರಿಯನ್ನಾಗಿ ನೇಮಕ ಮಾಡಿದೆ.

ಮೇ ತಿಂಗಳಲ್ಲಿ 15 ಸಾವಿರ ಉತ್ಪಾದನೆ

ಬಿಇಎಲ್ ಯೋಜನೆ ಪ್ರಕಾರ, ಏಪ್ರಿಲ್ ತಿಂಗಳ ಅಂತ್ಯದೊಳಗೆ 5 ಸಾವಿರ ವೆಂಟಿಲೇಟರ್ ಉತ್ಪಾದನೆ ಮಾಡುವ ಗುರಿ ಹೊಂದಲಾಗಿದೆ. ಆದರೆ, ಬಿಡಿ ಭಾಗಗಳ ಆಮದು ಮಾಡಿಕೊಳ್ಳುವಲ್ಲಿ ಸ್ವಲ್ಪ ವಿಳಂಬವಾಗುತ್ತಿರುವ ಕಾರಣ, ಉತ್ಪಾದನೆ ನಿಧಾನವಾಗಿದೆ. ಇನ್ನೊಂದು ವಾರದಲ್ಲಿ ಉತ್ಪಾದನೆ ಪ್ರಾರಂಭವಾಗುವ ನಿರೀಕ್ಷೆ ಇದೆ. ಮೇ ತಿಂಗಳಲ್ಲಿ 15 ಸಾವಿರ, ಜೂನ್​ನಲ್ಲಿ 5 ಸಾವಿರ ವೆಂಟಿಲೇಟರ್​ಗಳನ್ನು ಉತ್ಪಾದಿಸುವ ಗುರಿ ಇದೆ ಎಂದು ಬಿಇಎಲ್ ಮೂಲಗಳು ತಿಳಿಸಿವೆ.

8ರಿಂದ 15 ಲಕ್ಷ ರೂ. ಬೆಲೆಯ ವೆಂಟಿಲೇಟರ್​ಗಳಿವೆ. ತುರ್ತಾಗಿ ಬೇಕೆಂದರೆ ಸಿಗುವುದು ಕಷ್ಟ. ಕರೊನಾ ಚಿಕಿತ್ಸೆಗೆ ಈಗಲೂ ಮುಂದೆಯೂ ಹೆಚ್ಚು ಅವಶ್ಯಕ. ಈ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಸೂಕ್ತ ಕ್ರಮ ಕೈಗೊಂಡಿವೆ. | ಡಾ.ಸಿ.ಎನ್. ಮಂಜುನಾಥ್ ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ

ಶಿವಾನಂದ ತಗಡೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net