

ಕರಾಚಿ: ಕರೊನಾ ವೈರಸ್ ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ಖರ್ಚು ನಿಭಾಯಿಸಲು ಹಣ ಹೊಂದಿಸುವ ಸಲುವಾಗಿ ಭಾರತ ಮತ್ತು ಪಾಕಿಸ್ತಾನ ನಡುವೆ ಮೂರು ಪಂದ್ಯಗಳುಳ್ಳ ಒನ್ ಡೇ ಮ್ಯಾಚ್ ನಡೆಸಬೇಕು. ದುಬೈನ ಮುಚ್ಚಿದ ಕ್ರೀಡಾಂಗಣದಲ್ಲಿ ಈ ವ್ಯವಸ್ಥೆ ಮಾಡಬೇಕು ಎಂದು ಪಾಕಿಸ್ತಾನ ಮಾಜಿ ಬೌಲರ್ ಶೋಯೆಬ್ ಅಖ್ತರ್ ಹೇಳಿದ್ದರು.
ಈ ಪಂದ್ಯದಿಂದ ಸಂಗ್ರಹವಾದ ದೇಣಿಗೆಯ ಹಣವನ್ನು ಭಾರತ ಮತ್ತು ಪಾಕಿಸ್ತಾನ ಸರ್ಕಾರಗಳು ಸಮಾನವಾಗಿ ಹಂಚಿಕೊಳ್ಳಬೇಕು ಎಂದೂ ಸಲಹೆ ನೀಡಿದ್ದರು.
ಆದರೆ ಶೋಯೆಬ್ ಸಲಹೆಗೆ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಕಪಿಲ್ ದೇವ್ ಆಕ್ಷೇಪ ವ್ಯಕ್ತಪಡಿಸಿದ್ದರು. ಶೋಯೆಬ್ ಅಕ್ತರ್ ತಮ್ಮ ಅಭಿಪ್ರಾಯ ಹೇಳಿದ್ದಾರೆ. ಆದರೆ ಭಾರತಕ್ಕೆ ಹಣದ ಅಗತ್ಯ ಇಲ್ಲ. ಪರಿಸ್ಥಿತಿ ಸದ್ಯಕ್ಕಂತೂ ಸುಧಾರಿಸುವ ಹಾಗೆ ಕಾಣುತ್ತಿಲ್ಲ. ಇಂತ ಸಂದರ್ಭದಲ್ಲಿ ಕ್ರಿಕೆಟ್ ಆಯೋಜಿಸುವುದು, ಆಟಗಾರರ ಜೀವವನ್ನೇ ಅಪಾಯಕ್ಕೆ ಒಡ್ಡಿದಂತೆ ಎಂದಿದ್ದರು. ಅಲ್ಲದೆ, ಇನ್ನೂ ಆರು-ಏಳು ತಿಂಗಳು ಕ್ರಿಕೆಟ್ ಬಗ್ಗೆ ಯೋಚನೆ ಮಾಡುವುದೂ ಬೇಡ ಎಂದು ಖಡಕ್ ಆಗಿ ಪ್ರತಿಕ್ರಿಯೆ ನೀಡಿದ್ದರು.
ಈಗ ಕಪಿಲ್ ದೇವ್ ಹೇಳಿಕೆ ಬಗ್ಗೆ ಶೋಯೆಬ್ ಅಖ್ತರ್ ಮತ್ತೆ ಪ್ರತಿಕ್ರಿಯೆ ನೀಡಿದ್ದಾರೆ. ನನಗೆ ಕಪಿಲ್ ದೇವ್ ಬಗ್ಗೆ ತುಂಬ ಗೌರವ ಇದೆ. ಆದರೆ ಅವರು ನಾನು ಏನು ಹೇಳುತ್ತಿದ್ದೇನೆ ಎಂಬುದನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ. ಇಡೀ ಜಗತ್ತಿನ ಆರ್ಥಿಕತೆ ಕುಸಿದಿದೆ. ಈಗ ನಾವೆಲ್ಲರೂ ಒಟ್ಟಾಗಿ ಆದಾಯವನ್ನು ಹೆಚ್ಚಿಸಬೇಕು. ಕಪಿಲ್ ದೇವ್ ಅವರಿಗೆ ಹಣದ ಅಗತ್ಯ ಇಲ್ಲದೆ ಇರಬಹುದು. ಆದರೆ ಬೇರೆಯವರೆಲ್ಲರೂ ಅವರಂತೆ ಇಲ್ಲ ಎಂದು ಹೇಳಿದರು.
ನನಗೆ ಭಾರತದ ಬಗ್ಗೆ ತುಂಬ ಚೆನ್ನಾಗಿ ಗೊತ್ತು. ಪ್ರಧಾನಮಂತ್ರಿ ಇಮ್ರಾನ್ ಖಾನ್ಗಿಂತಲೂ ಹೆಚ್ಚಾಗಿ ನಾನು ಭಾರತವನ್ನು ಅರ್ಥ ಮಾಡಿಕೊಂಡಿದ್ದೇನೆ. ಅಲ್ಲಿನ ಹಲವು ಪ್ರದೇಶಗಳಿಗೆ ಭೇಟಿ ಕೊಟ್ಟಿದ್ದೇನೆ. ಅನೇಕರೊಂದಿಗೆ ಮಾತನಾಡಿದ್ದೇನೆ. ನಮ್ಮ ದೇಶಗಳಲ್ಲಿ ಬಡತನ ಅಧಿಕವಾಗಿದೆ. ನಾನೊಬ್ಬ ಮನುಷ್ಯನಾಗಿ, ಮುಸ್ಲಿಂ ಆಗಿ ಅಂಥವರಿಗೆ ನನ್ನ ಕೈಲಾದಷ್ಟು ಸಹಾಯ ಮಾಡಬೇಕು ಎಂಬುದು ನನ್ನ ಇಂಗಿತ ಎಂದು ಶೋಯೆಬ್ ಹೇಳಿದ್ದಾರೆ.
ಪಾಕಿಸ್ತಾನ ಬಿಟ್ಟರೆ ನನಗೆ ಹೆಚ್ಚು ಪ್ರೀತಿ ಸಿಕ್ಕಿದ್ದು ಭಾರತದಿಂದ. ಅಲ್ಲಿನ ಜನರ ಪ್ರೀತಿ, ವಿಶ್ವಾಸಕ್ಕೆ ನಾನು ಎಂದಿಗೂ ಋಣಿಯಾಗಿರುತ್ತೇನೆ ಎಂದರು.
ಮುಂದಿನ ಆರು ತಿಂಗಳು ಕ್ರಿಕೆಟ್ ನಡೆಯದೆ ಇದ್ದರೆ ಅದನ್ನೇ ನಂಬಿಕೊಂಡವರ ಬದುಕು ಹೇಗೆ ನಡೆಯಬೇಕು? ಅನೇಕ ಜನರ ಜೀವನ ಕ್ರಿಕೆಟ್ ಮೇಲೆಯೇ ಅವಲಂಬಿತವಾಗಿದೆ. ಅವರೆಲ್ಲ ಏನು ಮಾಡಬೇಕು ಎಂಬುದು ನನ್ನ ಪ್ರಶ್ನೆ. ಭಾರತ-ಪಾಕ್ ನಡುವಿನ ಕ್ರಿಕೆಟ್ ಪಂದ್ಯ ನಡೆಸಿ ದೇಣಿಗೆ ಸಂಗ್ರಹಿಸಲು ನಾನು ನೀಡಿದ ಸಲಹೆ ಖಂಡಿತ ಶೀಘ್ರದಲ್ಲೇ ಪರಿಗಣಿಸಲ್ಪಡುತ್ತದೆ ಎಂಬ ನಂಬಿಕೆ ನನಗೆ ಇದೆ ಎಂದು ಶೋಯೆಬ್ ಹೇಳಿದ್ದಾರೆ. (ಏಜೆನ್ಸೀಸ್)