ಬೇಕಲ ಕೋಟೆ ಸೌಂದರ್ಯ ಮಸುಕು : ಟಿಕೆಟ್ ಪಡೆದು ಆಗಮಿಸುವ ಪ್ರವಾಸಿಗರಿಗೆ ಹುಲ್ಲು, ಕುರುಚಲು ಕಾಡಿನ ಸ್ವಾಗತ

bekal fort
Published on

ಪುರುಷೋತ್ತಮ ಪೆರ್ಲ ಕಾಸರಗೋಡು

ಕೇರಳ ಪ್ರವಾಸೋದ್ಯಮ ನಕ್ಷೆಯಲ್ಲಿ ಹೆಸರು ದಾಖಲಿಸಿಕೊಂಡಿರುವ ಕಾಸರಗೋಡಿನ ಅತ್ಯಂತ ಪ್ರೇಕ್ಷಣೀಯ ಸ್ಥಳವೆಂದೇ ಗುರುತಿಸಲ್ಪಟ್ಟಿರುವ ಬೇಕಲ ಕೋಟೆ ಕಾಡು ಬೆಳೆದು ಪ್ರವಾಸಿಗರ ಪಾಲಿಗೆ ನರಕಯಾತನೆಗೆ ಕಾರಣವಾಗುತ್ತಿದೆ.

ಪ್ರಾಚ್ಯವಸ್ತು ಇಲಾಖೆಯ ಅಧೀನದಲ್ಲಿರುವ ಬೇಕಲಕೋಟೆಗೆ ಆಗಮಿಸುವ ಪ್ರವಾಸಿಗರು ಅರಬ್ಬಿ ಸಮುದ್ರದ ಅಲೆಗಳ ಭೋರ್ಗರೆತ, ಸುಂದರ ಆಕಾಶದ ವೀಕ್ಷಣೆ, ಕೋಟೆ ಸೌಂದರ್ಯ ಆಸ್ವಾದಿಸಲು ಬೆಳೆದು ನಿಂತಿರುವ ಹುಲ್ಲಿನ ಮೆಳೆ ಅಡಚಣೆ ತಂದೊಡ್ಡುತ್ತಿದೆ. ಇದರಿಂದ ಎತ್ತರದ ಬುರುಜು ಅಥವಾ ಕೋಟೆಯನ್ನೇರಿ ಬೇಕಲ ಕೋಟೆಯ ಪ್ರಕೃತಿ ಸೌಂದರ್ಯ ಅಥವಾ ಸಮುದ್ರ ವೀಕ್ಷಣೆ ನಡೆಸಬೇಕಾಗುತ್ತಿದೆ.

ಟಿಕೆಟ್ ಪಡೆದು ಒಳಗೆ ತೆರಳುವ ಪ್ರವಾಸಿಗರನ್ನು ಆಳೆತ್ತರಕ್ಕೆ ಬೆಳೆದುನಿಂತ ಹುಲ್ಲು ಹಾಗೂ ಬಳ್ಳಿಗಳು ಸ್ವಾಗತಿಸುತ್ತವೆ. ಬೇಕಲಕೋಟೆಯ ಪ್ರಕೃತಿ ಸೌಂದರ್ಯವನ್ನು ದಟ್ಟವಾಗಿ ಬೆಳೆದು ನಿಂತ ಹುಲ್ಲುಗಾವಲು ನುಂಗಿಹಾಕಿದೆ. ಹುಲ್ಲನ್ನು ಸ್ವಚ್ಛವಾಗಿ ಕತ್ತರಿಸಿ, ಪ್ರಯಾಣಿಕರ ಕಾಲ್ನಡಿಗೆಗೆ ಅವಕಾಶಮಾಡಿಕೊಡಬೇಕಾದ ಸಂಬಂಧಪಟ್ಟ ಇಲಾಖೆಯವರು ಟಿಕೆಟ್ ಹಣ ಪಡೆದು ಪ್ರವಾಸಿಗರಿಗೆ ಪಂಗನಾಮ ಹಾಕುತ್ತಿದ್ದಾರೆ ಎಂದು ಪ್ರವಾಸಿಗರು ದೂರುತ್ತಿದ್ದಾರೆ.

ಇತ್ತೀಚೆಗೆ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದಿಂದ ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್ ನೇತೃತ್ವದಲ್ಲಿ ಕಾಸರಗೋಡಿನಲ್ಲಿ ಆಯೋಜಿಸಲಾಗಿದ್ದ ಪತ್ರಕರ್ತರೊಂದಿಗೆ ಮುಖಾಮುಖಿ ಕಾರ್ಯಕ್ರಮದಲ್ಲಿ ಬೇಕಲಕೋಟೆ ಅಭಿವೃದ್ಧಿ ವಿಚಾರದಲ್ಲಿ ಹೆಚ್ಚಿನ ಗಮನ ಹರಿಸಲಾಗುತ್ತಿಲ್ಲ ಎಂಬ ಅಭಿಪ್ರಾಯಗಳು ಕೇಳಿ ಬಂದಿತ್ತು. ಜಿಲ್ಲೆಯಲ್ಲಿ 14 ಕೋಟೆಗಳಿದ್ದು, ಇವುಗಳಲ್ಲಿ ಬೇಕಲ ಕೋಟೆ ಮಾತ್ರ ಕೇಂದ್ರ ಪ್ರಾಚ್ಯವಸ್ತು ಇಲಾಖೆ ಅಧೀನದಲ್ಲಿ ಕಾರ್ಯಚರಿಸುತ್ತಿದೆ. ಉಳಿದಂತೆ ರಾಜ್ಯ ಸರ್ಕಾರದ ಅಧೀನದಲ್ಲಿರುವ ಕೋಟೆಗಳ ಸ್ಥಿತಿಯೂ ಅತ್ಯಂತ ಕಳಪೆಯಾಗಿದೆ. ಜಿಲ್ಲೆಯಲ್ಲಿನ ಕೋಟೆ ಕೊತ್ತಲ, ಸಮುದ್ರ ಕರಾವಳಿಯನ್ನು ಸ್ವಚ್ಛಗೊಳಿಸಿ ಅಭಿವೃದ್ಧಿಗೊಳಿಸಿದಲ್ಲಿ ಪ್ರವಾಸೋದ್ಯಮ ನಕ್ಷೆಯಲ್ಲಿ ಜಿಲ್ಲೆಯನ್ನು ರಾಜ್ಯದಲ್ಲಿ ಒಂದನೇ ಸ್ಥಾನಕ್ಕೇರಿಸಲು ಸಾಧ್ಯ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು.

ಬೇಕಲ ಕೋಟೆಯ ಅಭಿವೃದ್ಧಿಯೊಂದಿಗೆ ಪ್ರವಾಸಿಗರನ್ನು ಹೆಚ್ಚಾಗಿ ಆಕರ್ಷಿಸಲು ಅವಕಾಶಗಳಿದ್ದರೂ, ಸಂಬಂಧಪಟ್ಟವರು ಇತ್ತ ಗಮನ ಹರಿಸುತ್ತಿಲ್ಲ. ಓಣಂ ಸೇರಿದಂತೆ ವಿವಿಧ ಹಬ್ಬಗಳ ಸಂದರ್ಭ ಕೇರಳದ ನಾನಾ ಕಡೆಯಿಂದ ಬೇಕಲ ಕೋಟೆ ವೀಕ್ಷಣೆಗೆ ಆಗಮಿಸಿದ್ದ ಪ್ರವಾಸಿಗರು ಕೋಟೆ ದುರವಸ್ಥೆಯಿಂದ ಆನಂದಕ್ಕಿಂತ ಹೆಚ್ಚು ಸಂಕಷ್ಟ ಅನುಭವಿಸಿ ತೆರಳಿರುವುದಾಗಿ ಸ್ಥಳೀಯರು ತಿಳಿಸುತ್ತಾರೆ.

ಸೂರ್ಯಾಸ್ತ ವೀಕ್ಷಿಸಲು ಇಲ್ಲ ಅವಕಾಶ

ಭಾರತೀಯ ಪ್ರಾಚ್ಯವಸ್ತು ಇಲಾಖೆ ಅಧೀನದಲ್ಲಿರುವ ಬೇಕಲ ಕೋಟೆಯಲ್ಲಿರುವ ಕೆಲವೊಂದು ನಿಬಂಧನೆಗಳಿಂದಾಗಿ ಪ್ರವಾಸಿಗರಿಗೆ ಇಲ್ಲಿನ ಪ್ರಕೃತಿಯ ಸೌಂದರ್ಯ ಅನುಭವಿಸಲು ಸಾಧ್ಯವಾಗುತ್ತಿಲ್ಲ ಎಂಬ ದೂರು ವ್ಯಾಪಕಗೊಂಡಿದೆ. ಸಂಜೆ 6ರ ನಂತರ ಕೋಟೆಯೊಳಗೆ ಪ್ರವೇಶ ನಿಷೇಧಿಸಲಾಗಿದೆ. ಇದರಿಂದ ಸಂಜೆಯ ಸೂರ್ಯಾಸ್ತದ ಸೊಬಗು ಸವಿಯಲೂ ಪ್ರವಾಸಿಗರಿಗೆ ಸಾಧ್ಯವಾಗುತ್ತಿಲ್ಲ. ವಿಶ್ವ ವಿಖ್ಯಾತ ಬೇಕಲ ಕೋಟೆ ವೀಕ್ಷಣೆಗೆಂದು ಬರುವ ಪ್ರವಾಸಿಗರು, ಪಳ್ಳಿಕೆರೆಯಲ್ಲಿರುವ ರೆಸಾರ್ಟ್‌ನಲ್ಲಿ ಕಾಲ ಕಳೆದು ತೆರಳಬೇಕಾದ ಪರಿಸ್ಥಿತಿಯಿದೆ.

ಒಂದು ತಿಂಗಳ ಕಾಲ ಸುರಿದ ನಿರಂತರ ಮಳೆ ಸ್ವಚ್ಛತೆ ಕಾರ್ಯಗಳಿಗೆ ಅಡಚಣೆಯುಂಟಾಗಿತ್ತು. ಕೋಟೆಯೊಳಗಿನ ಹುಲ್ಲು, ಪೊದೆ ಸ್ವಚ್ಛಗೊಳಿಸುವ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಒಂದೆರಡು ವಾರದಲ್ಲಿ ಸ್ವಚ್ಛತೆ ಕಾರ್ಯ ಪೂರ್ತಿಯಾಗುತ್ತದೆ. ಕೋಟೆ ನವೀಕರಣದ ಕೆಲವೊಂದು ಯೋಜನೆಗಳು ಜಾರಿಗೊಳ್ಳಲಿದ್ದು, ಮುಂದೆ ಸಂಗೀತದ ಬೆಳಕಿನ ವ್ಯವಸ್ಥೆಯೊಂದಿಗೆ ಬೇಕಲ ಕೋಟೆ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸಲು ಸಾಧ್ಯವಾಗಲಿದೆ. - ಶಾಜು ಪಿ., ಬೇಕಲ ಕೋಟೆ ಮೇಲ್ವಿಚಾರಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net