

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಚಾರಣಿಗರ ಸ್ವರ್ಗ ಗಡಾಯಿಕಲ್ಲು ಏರಲು ಹೇರಿದ್ದ ನಿರ್ಬಂಧ ಹಿಂಪಡೆಯಲಾಗಿದ್ದು, ಇದೀಗ ಪ್ರವಾಸಿಗರಿಗೆ ಅವಕಾಶ ಕಲ್ಪಿಸಲಾಗಿದೆ.
ಸಮುದ್ರ ಮಟ್ಟದಿಂದ 1,788 ಅಡಿ ಎತ್ತರದಲ್ಲಿರುವ ಈ ಕೋಟೆ ತುದಿ ತಲುಪಬೇಕಾದರೆ ಸುಮಾರು 2,800ಕ್ಕೂ ಅಧಿಕ ಕಡಿದಾದ ಮೆಟ್ಟಿಲುಗಳನ್ನು ಏರಬೇಕು. ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ ಗಡಾಯಿಕಲ್ಲನ್ನು ಸಂರಕ್ಷಿತ ಸ್ಮಾರಕ ಎಂದು ಘೋಷಿಸಿದೆ. ನಡ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಗಡಾಯಿಕಲ್ಲು ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಸುಪರ್ದಿಯಲ್ಲಿದೆ. ಅನೇಕ ಪಳೆಯುಳಿಕೆ ಹೊಂದಿರುವ ಗಡಾಯಿಕಲ್ಲು ಮುಕ್ಕಾಲು ಭಾಗ ಏರಿದ ಬಳಿಕ ಕಮಾನು ಗೋಚರಿಸುತ್ತದೆ. ಶಿಥಿಲಾವಸ್ಥೆಯಲ್ಲಿರುವ ಅದರ ಅಕ್ಕಪಕ್ಕ ಕೆಲವೊಮ್ಮೆ ತ್ಯಾಜ್ಯ ಕಂಡು ಬರುತ್ತದೆ. ಮುಂದೆ ಸಾಗಿದಾಗ ಫಿರಂಗಿ, ಬಂಡೆಗಳ ನಡುವಿನಿಂದ ಹರಿಯುವ ನೀರು, ಭಾಗಶಃ ಧ್ವಂಸವಾಗಿರುವ ಶಸತ್ತ್ರಾಸ್ತ್ರ ಕೋಠಿ, ಕೆರೆ ಇತ್ಯಾದಿ ಕಾಣಿಸುತ್ತದೆ. ನಿಸರ್ಗ ಸೌಂದರ್ಯ ಆಸ್ವಾದಿಸುತ್ತ ಚಾರಣ ನಡೆಸುವ ಗಡಾಯಿಕಲ್ಲು ಹಲವಾರು ಎಕರೆ ಜಾಗ ಹೊಂದಿದ್ದು, ಪ್ರವಾಸಿಗರ ಮನಸ್ಸಿಗೆ ಮುದ ನೀಡುತ್ತಿದೆ.
ಕಳೆದ ಬೇಸಿಗೆಯಿಂದ ಗಡಾಯಿಕಲ್ಲು ಪ್ರವೇಶಕ್ಕೆ ಸಾರ್ವಜನಿಕರಿಗೆ ನಿಷೇಧ ಹೇರಲಾಗಿದ್ದು, ಸೆ.20ರವರೆಗೆ ಮುಂದುವರಿದಿತ್ತು. ಸುತ್ತಮುತ್ತ ಸಾಕಷ್ಟು ಅರಣ್ಯ ಪ್ರದೇಶವಿದ್ದು, ಬೇಸಿಗೆ ಕಾಲದಲ್ಲಿ ಕಾಡ್ಗಿಚ್ಚಿನ ಭಯ ಇರುವುದರಿಂದ, ಮಳೆಗಾಲದಲ್ಲಿ ಇಲ್ಲಿನ ಜಾರುವ ಬಂಡೆ, ಮೆಟ್ಟಿಲು, ಕಲ್ಲುಗಳಿಂದ ಅಪಾಯ ಉಂಟಾಗಬಾರದು ಎಂಬ ಉದ್ದೇಶದಿಂದ ಸಂಬಂಧಪಟ್ಟ ಇಲಾಖೆ ಪ್ರವೇಶ ನಿಷೇಧ ಹೇರಿತ್ತು. ಇತ್ತೀಚೆಗೆ ಜಲಪಾತ ಪ್ರವೇಶಕ್ಕೆ ಅವಕಾಶ ನೀಡಿದ ಸಮಯ ಮುಂಜಾಗ್ರತಾ ಕ್ರಮವಾಗಿ ಪ್ರವೇಶ ನಿಷೇಧ ಮುಂದುವರಿದಿತ್ತು. ಇದೀಗ ಮಳೆ ಕಡಿಮೆಯಾಗಿ ಬಂಡೆ ಒಣಗಿರುವ ಕಾರಣ ಅವಕಾಶ ಕಲ್ಪಿಸಲಾಗಿದೆ. ಪ್ರಸ್ತುತ ನೀಡಿರುವ ಅವಕಾಶ ಡಿಸೆಂಬರ್ ತನಕ ಮುಂದುವರಿಯುವ ಸಾಧ್ಯತೆ ಇದೆ. ಡಿಸೆಂಬರ್ ಬಳಿಕ ಕಾಡ್ಗಿಚ್ಚಿನ ಮುಂಜಾಗ್ರತೆಗಾಗಿ ಮತ್ತೆ ನಿಷೇಧ ಮುಂದುವರಿಯುವ ಸಾಧ್ಯತೆ ಇದೆ.
ಬೆಳ್ತಂಗಡಿ ತಾಲೂಕು ಕೇಂದ್ರದಿಂದ ಒಂದು ಕಿ.ಮೀ. ದೂರದಲ್ಲಿರುವ ಲಾಯಿಲ ಎಂಬಲ್ಲಿಂದ ಕಿಲ್ಲೂರು ಮಾರ್ಗದಲ್ಲಿ 5 ಕಿ.ಮೀ. ಸಾಗಿದರೆ ಮಂಜೊಟ್ಟಿ ಎನ್ನುವ ಊರು ಸಿಗುತ್ತದೆ. ಅಲ್ಲಿಂದ ಮೂರು ಕಿ.ಮೀ. ಹಾದಿ ಕ್ರಮಿಸಿದರೆ ಗಡಾಯಿಕಲ್ಲಿನ ಬುಡಕ್ಕೆ ತಲುಪಬಹುದು. ಮಂಜೊಟ್ಟಿ ತನಕ ಬಸ್ ವ್ಯವಸ್ಥೆ ಇದೆ. ಸ್ವಂತ ವಾಹನಗಳಿಗೆ ಕೋಟೆ ಸಮೀಪ ಪಾಕಿರ್ಂಗ್ ವ್ಯವಸ್ಥೆ ಇದೆ. ಗೂಗಲ್ ಮ್ಯಾಪ್‌ನಲ್ಲಿ ದಾರಿಯ ಹೆಚ್ಚಿನ ವಿವರಗಳು ಲಭ್ಯವಿದೆ. ಗಡಾಯಿಕಲ್ಲಿಗೆ ಜಮಲಾಬಾದ್ ನರಸಿಂಹ ಘಡ ಎಂಬ ಹೆಸರುಗಳು ಇವೆ
ಟಿಕೆಟ್ ದರ ದೊಡ್ಡವರಿಗೆ 50 ರೂ., ಮಕ್ಕಳಿಗೆ 25 ರೂ., ಪರಿಸರದ ಅರಣ್ಯದಲ್ಲಿರುವ ಪ್ರಾಣಿಗಳಿಗೆ ತೊಂದರೆ ಉಂಟು ಮಾಡುವಂತಹ ಪ್ರಕ್ರಿಯೆ ನಡೆಸಬಾರದು. ಪರಿಸರ ಸ್ವಚ್ಛತೆ ಕಾಪಾಡಲು ಚಾರಣಿಗರು ಆದ್ಯತೆ ನೀಡಬೇಕು. ಇಲಾಖೆ ವಿಧಿಸಿದ ಶರತ್ತುಗಳನ್ನು ಮೀರಿ ವರ್ತಿಸಬಾರದು. ಅನಪೇಕ್ಷಿತ ಚಟುವಟಿಕೆ ನಡೆಸುವುದು ಕಂಡುಬಂದಲ್ಲಿ ಅಂತವರ ವಿರುದ್ಧ ಇಲಾಖೆ ವತಿಯಿಂದ ಕಠಿಣ ಕ್ರಮ ಕೈಗೊಳ್ಳಲಾಗುವುದು.
ಗಡಾಯಿಕಲ್ಲಿಗೆ ಬೆಳಗ್ಗೆ 7ರಿಂದ ಮಧ್ಯಾಹ್ನ 2 ಗಂಟೆವರೆಗೆ ಏರಲು ಅವಕಾಶ ನೀಡಲಾಗಿದೆ. ರಾತ್ರಿ ವಾಸ್ತವ್ಯಕ್ಕೆ ಅವಕಾಶವಿರುವುದಿಲ್ಲ. ಇಲಾಖೆ ನಿಗದಿ ಪಡಿಸಿದ ಬ್‌ಸೈಟ್‌ನಲ್ಲಿ ನೋಂದಾಯಿಸಿದವರಿಗೆ ಮಾತ್ರ ಅವಕಾಶ ನೀಡಲಾಗುತ್ತದೆ. ನೋಂದಾಯಿಸದೆ ಬರುವವರಿಗೆ ಅವಕಾಶ ನೀಡಲಾಗುವುದಿಲ್ಲ. ಇಲ್ಲಿನ ಸ್ಥಳಗಳಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧಿಸಲಾಗಿದೆ. ಶರ್ಮಿಷ್ಟ, ಆರ್‌ಎಫ್‌ಒ ವನ್ಯಜೀವಿ ವಿಭಾಗ, ಬೆಳ್ತಂಗಡಿ