

ಮದ್ದೂರು: ವಿದ್ಯಾರ್ಥಿಗಳು ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಜೀವನ ರೂಪಿಸಿಕೊಳ್ಳುವುದೇ ಶಿಕ್ಷಕರಿಗೆ ನೀಡುವ ಅತಿ ದೊಡ್ಡ ಗೌರವ ಎಂದು ಹಿರಿಯ ಶಿಕ್ಷಕ ಕೆ.ಜೆ.ಸಿದ್ದರಾಜು ಸಲಹೆ ನೀಡಿದರು.
ತಾಲೂಕಿನ ಡಿ.ಹೊಸಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಳೆಯ ವಿದ್ಯಾರ್ಥಿಗಳು ಭಾನುವಾರ ಆಯೋಜಿಸಿದ್ದ ಗುರುವಂದನಾ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ವ್ಯಾಸಂಗ ಮಾಡಿ ಉನ್ನತ ಹುದ್ದೆ ಅಲಂಕರಿಸಿ ಜನ ಸಾಮಾನ್ಯರಿಗೆ ಒಳ್ಳೆಯದನ್ನು ಮಾಡಿ ಉತ್ತಮ ಹೆಸರು ಗಳಿಸಿದರೆ ಅದೇ ಶಿಕ್ಷಕರಿಗೆ, ಪಾಲಕರಿಗೆ ಮತ್ತು ಶಾಲೆಗೆ ನೀಡುವ ನೀಡುವ ದೊಡ್ಡ ಉಡುಗೊರೆ ಎಂದು ಅಭಿಪ್ರಾಯಪಟ್ಟರು.
ಡಿ.ಹೊಸಹಳ್ಳಿ ಗ್ರಾಮದಿಂದಲೇ ನಾನು ಸೇವೆಯನ್ನು ಆರಂಭ ಮಾಡಿದೆ. ಗ್ರಾಮದ ಜನರು ದೈವ ಸ್ವರೂಪಿಗಳಾಗಿದ್ದು ಶಾಲೆಯ ಅಭಿವೃದ್ಧಿಗೆ ತನು, ಮನ, ಧನ ಅರ್ಪಿಸಿದ್ದಾರೆ. ವಿದ್ಯಾರ್ಥಿಗಳು ಎತ್ತರಕ್ಕೆ ಬೆಳೆದ ಸಂದರ್ಭದಲ್ಲಿ ತಾವು ವಿದ್ಯಾಭ್ಯಾಸ ಮಾಡಿದ ಶಾಲೆ, ಅಕ್ಷರ ಕಲಿಸಿಕೊಟ್ಟ ಗುರುಗಳನ್ನು ಸ್ಮರಿಸುತ್ತಿರುವುದು ಶ್ಲಾಘನೀಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮುಖ್ಯ ಶಿಕ್ಷಕ ಬಿ.ಪಿ.ಲಿಂಗರಾಜು ಅವರು ಅಭಿನಂದನೆ ಸ್ವೀಕರಿಸಿ ಮಾತನಾಡಿ, ಮಕ್ಕಳಿಗೆ ವಿದ್ಯೆ ಕಲಿಸುವುದರ ಜತೆಗೆ ನಾನೂ ಉನ್ನತ ಮಟ್ಟದ ಪದವಿಗಳಿಸಲು ಡಿ.ಹೊಸಹಳ್ಳಿ ಗ್ರಾಮದ ಶಾಲೆ ಮತ್ತು ಇಲ್ಲಿನ ಜನರು ನನಗೆ ಪ್ರೇರಣೆಯಾದರು. ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿದವರು ಉನ್ನತ ಸಾಧನೆ ಮಾಡಿ ಪ್ರಸ್ತುತದಲ್ಲಿ ಉತ್ತಮ ಸ್ಥಾನದಲಿದ್ದಾರೆ. ಖಾಸಗಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದರೆ ಮಾತ್ರ ಮಕ್ಕಳ ಬದುಕು ಹಸನಾಗುತ್ತದೆ ಎಂಬ ಕಲ್ಪನೆಯನ್ನು ಪಾಲಕರು ಬಿಡಬೇಕು ಎಂದರು.
ಡಿ.ಹೊಸಹಳ್ಳಿ ಗ್ರಾಮದೇವತೆ ಪಟ್ಟಲದಮ್ಮ ದೇಗುಲದ ಆವರಣದಿಂದ ಶಾಲಾ ಆವರಣದವರೆಗೆ ಶಿಕ್ಷಕರನ್ನು ತೆರೆದ ಟ್ರಾೃಕ್ಟರ್ ಮೂಲಕ ಪೂರ್ಣಕುಂಭ, ಡೊಳ್ಳುಕುಣಿತ, ನಗಾರಿ, ಮಂಗಳವಾದ್ಯ, ಪೂಜಾ ಕುಣಿತದೊಂದಿಗೆ ಸಂಭ್ರಮದ ಮೆರವಣಿಗೆ ಮಾಡಲಾಯಿತು.
ಶಾಲೆ ಉಳಿಸಲು ಶಿಕ್ಷಕರ ಒಕ್ಕೊರಲ ಮನವಿ:
ಮದ್ದೂರು: ಅನ್ನ ಮತ್ತು ಅಕ್ಷರ ನೀಡಿದ ಡಿ.ಹೊಸಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳ ಕೊರತೆಯಿಂದ ಮುಚ್ಚಲ್ಪಟ್ಟಿದೆ. ಶಾಲೆಯ ಕಟ್ಟಡ ಸುಸ್ಥಿತಿಯಲ್ಲಿರುವುದರಿಂದ ಹಿರಿಯ ವಿದ್ಯಾರ್ಥಿಗಳು ಮತ್ತು ಪಾಲಕರು ಶಾಲೆಯನ್ನು ಮತ್ತೆ ಆರಂಭಿಸಲು ಚಿಂತನೆ ನಡೆಸಬೇಕು. ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಶಾಲೆಯನ್ನು ಮತ್ತೆ ಆರಂಭಿಸಲು ನಾವು ಸಹಕಾರ ನೀಡುತ್ತೇವೆ. ಒಂದು ಕಾಲದಲ್ಲಿ ಅತ್ಯುತ್ತಮವಾಗಿ ನಡೆಯುತ್ತಿದ್ದ ಶಾಲೆ ಇಂದು ಮುಚ್ಚಿದೆ. ಹೀಗೆ ಮುಂದುವರಿದರೆ ಕನ್ನಡ ಶಾಲೆಗಳು ಅವನತಿಯ ಅಂಚು ತಲುತ್ತವೆ. ಡಿ.ಹೊಸಹಳ್ಳಿ ಶಾಲೆಯ ಪ್ರಗತಿಗೆ ನಾವು ಆರ್ಥಿಕ ಸಹಾಯ ಮಾಡುತ್ತೇವೆ ಎಂದು ಶಿಕ್ಷಕರು ಘೋಷಿಸಿ ಶಾಲೆ ಪ್ರಾರಂಭ ಮಾಡುವಂತೆ ಕಾರ್ಯಕ್ರಮದಲ್ಲಿ ಮನವಿ ಮಾಡಿದರು.
ನಿವೃತ ಶಿಕ್ಷಕರಾದ ವೆಂಕಟೇಗೌಡ, ಮುರಳೀಗೌಡ, ಪುಟ್ಟಸ್ವಾಮಿಗೌಡ, ನಾಗರಾಜು, ಅಶ್ವಥಾಚಾರ್, ಶಿಕ್ಷಕರಾದ ಕೆ.ಜೆ.ಸಿದ್ದರಾಜು, ವಿಜಯಮ್ಮ, ನವೀನ್ ಸಮಿವುಲ್ಲಾ, ಪ್ರಕಾಶ್, ಯೋಗಾನಂದ, ರಮೇಶ್, ಶಿವಯ್ಯ, ಮಮತಾ, ಭಾಗ್ಯಮ್ಮ, ಯುವ ಮುಖಂಡರಾದ ಬೋರೇಗೌಡ, ಆನಂದ್, ಪ್ರಕಾಶ್, ಶಿವಣ್ಣ, ನವೀನ್, ಮಧು, ಗಿರಿಸ್ವಾಮಿ, ಭೋರಪ್ಪ, ರವಿಕುಮಾರ್, ಉಮೇಶ್, ಅರವಿಂದ್, ರಮೇಶ್, ಹರೀಶ್, ನಂಜುಂಡಸ್ವಾಮಿ, ನಂದೀಶ್, ಸ್ವಾಮಿ, ಅರ್ಜುನ್, ಅಶೋಕ್, ಕೃಷ್ಣ, ಕಾವೇರಿ, ಮಲ್ಲೇಶ್, ಸುರೇಶ್, ಪ್ರದೀಪ್, ಸಂಜಯ್ ಮತ್ತಿತರರಿದ್ದರು.