

ಕೊರ‌್ಲಕುಂಟೆ ತಿಪ್ಪೇಸ್ವಾಮಿ ಚಳ್ಳಕೆರೆ
ತಾಲೂಕಿನ ಸಿದ್ದಾಪುರ ಗ್ರಾಮದ ಗದ್ದಿಗೆ ತಿಪ್ಪೇಸ್ವಾಮಿ ತನ್ನ 20 ಎಕರೆ ಜಮೀನಿನಲ್ಲಿ ಅಡಕೆ, ಜೋಳ, ಶೇಂಗಾ ಮತ್ತು ವೀಳ್ಯದೆಲೆ ತೋಟ ಬೆಳೆಸಿಕೊಂಡು ಸಮಗ್ರ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಕಳೆದ 20 ವರ್ಷಗಳಿಂದ ಎಲೆ ಬಳ್ಳಿ ತೋಟವನ್ನು ಪೋಷಿಸುತ್ತಿದ್ದು, ಬರುವ ಲಾಭದಲ್ಲಿ ಇತರ ಬೆಳೆಗಳ ನಷ್ಟದ ಪರಿಸ್ಥಿತಿಯನ್ನು ಸಮತೋಲನ ಮಾಡಿಕೊಳ್ಳುವ ಜಾಣ್ಮೆ ಕಂಡುಕೊಂಡಿದ್ದಾರೆ.
ಒಂದು ಕಾಲದಲ್ಲಿ ಎಲ್ಲರೂ ವೀಳ್ಯದ ಎಲೆ ತೋಟ ಮಾಡಲು ಬರುವುದಿಲ್ಲ ಎನ್ನುವ ಮಾತುಗಳಿದ್ದವು. ಇದನ್ನು ಎಲ್ಲ ಕೃಷಿ ಚಟುವಟಿಕೆಯಂತೆ ಕಾಣಲಾಗದು. ಇದೊಂದು ಭಕ್ತಿ ಧ್ಯಾನದಂತೆ ಪೋಷಣೆ ಮಾಡಿಕೊಳ್ಳಬೇಕು. ತೋಟದ ಒಳಗೆ ಚಪ್ಪಲಿ ಹಾಕಿಕೊಂಡು ಹೋಗಬಾರದು ಎನ್ನಲಾಗುತ್ತಿತ್ತು.
ತೋಟದ ಬಾಗಿಲಿಗೆ ಸದಾ ಪೂಜೆ ಮಾಡಬೇಕು. ಶುಭಕಾರ್ಯದಿಂದ ಅಮಂಗಲ ಕಾರ್ಯಕ್ಕೂ ಬೇಕಾಗುವ ವೀಳ್ಯದ ಎಲೆಯನ್ನು ಪೂಜ್ಯನೀಯವಾಗಿ ಕಾಣಬೇಕು. ಈ ತೋಟ ಎಲ್ಲರಿಗೂ ಒದಗುವುದಿಲ್ಲ ಎನ್ನುವ ಮಡಿವಂತಿಕೆ ಮಾತುಗಳ ನಡುವೆ ತೋಟ ಕಟ್ಟಿಕೊಂಡಿರುವ ತಿಪ್ಪೇಸ್ವಾಮಿ, ದಿನಕ್ಕೆ 20 ಕಾರ್ಮಿಕರಿಗೆ ಕೆಲಸ ಕೊಟ್ಟು ಪ್ರತಿದಿನ ಆರು ಪೆಂಡಿ ಎಲೆಯನ್ನು ಮಾರುಕಟ್ಟೆಗೆ ಕಳುಹಿಸುವ ವಹಿವಾಟು ಕಂಡುಕೊಂಡಿದ್ದಾರೆ.
1993ರಲ್ಲಿ ಪಂಚಾಯಿತಿ ಸದಸ್ಯರಾಗಿ ಬಳಿಕ ಮೂರು ಬಾರಿ ತಾಪಂ ಸದಸ್ಯರಾಗಿ, ಒಮ್ಮೆ ಅಧ್ಯಕ್ಷರಾಗಿ ಅಧಿಕಾರ ನಿರ್ವಹಿಸಿರುವ ಗದ್ದಿಗೆ ತಿಪ್ಪೇಸ್ವಾಮಿ ಪ್ರಸ್ತುತ ರಾಜ್ಯ ಸರ್ಕಾರ ಜಾರಿ ಮಾಡಿರುವ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ತಾಲೂಕು ಅಧ್ಯಕ್ಷರಾಗಿದ್ದಾರೆ.
ರಾಜಕೀಯದಲ್ಲಿನ ಆರ್ಥಿಕ ಸಮಸ್ಯೆಗಳ ನಿರ್ವಹಣೆಗೆ ಕುಟುಂಬದ ಕೃಷಿ ಚಟುವಟಿಕೆಯೇ ಆಧಾರ, 10 ಎಕರೆ ಭೂಮಿಯನ್ನು ನಂಬಿಕೊಂಡು 4 ಬೋರ್‌ವೆಲ್ ಕೊರೆಸಲಾಗಿದೆ. ತಲಾ ಎರಡು ಇಂಚು ನೀರು ಲಭ್ಯವಿದೆ. ತೋಟದಲ್ಲಿ ಹಸುಗಳ ಸಾಕಾಣಿಕೆಯಿಂದ ಹೈನುಗಾರಿಕೆ ಸೇರಿ ಸಮಗ್ರ ಕೃಷಿ ಮಾಡಿಕೊಂಡು ಜನಸೇವೆ ರಾಜಕೀಯದಲ್ಲೂ ತೊಡಗಿದ್ದಾರೆ.
ಎಲೆ ಬಳ್ಳಿ ಒಮ್ಮೆ ನಾಟಿ ಮಾಡಿಕೊಂಡರೆ ಸಂತತಿಯಂತೆ ಹಬ್ಬಿಬಿಡುತ್ತದೆ. ವರ್ಷಕ್ಕೆ ಒಂದು ಬಾರಿ ಎಲೆ ಬಳ್ಳಿಯನ್ನು ಅಡಕೆ ಮರದ ಬುಡಕ್ಕೆ ಇಳಿಸಿ ಮಣ್ಣಲ್ಲಿ ಮುಚ್ಚಿಕೊಳ್ಳುತ್ತೇವೆ. ಮತ್ತೆ ಚಿಗುರೊಡೆದು ಕವಲಿನಂತೆ ಅಡಕೆ ಗಿಡಕ್ಕೆ ಹಬ್ಬಿ ಬೆಳೆಯುತ್ತದೆ. ನಿರಂತರವಾಗಿ ಎಲೆ ಕೊಡುತ್ತದೆ. 5 ಎಕರೆಯಲ್ಲಿ ಇರುವ 2 ಸಾವಿರ ಅಡಕೆ ಮರಗಳ ನಡುವೆ ಎಲೆ ಬಳ್ಳಿ ನಾಟಿ ಮಾಡಿಕೊಳ್ಳಲಾಗಿದೆ.
ಎಲೆ ಬಳ್ಳಿಗೆ ಆರಂಭದಲ್ಲಿ 25 ಲಕ್ಷ ಖರ್ಚು ಮಾಡಲಾಗಿತ್ತು. ಕೊಟ್ಟಿಗೆ ಗೊಬ್ಬರ ಹೊರತಾಗಿ, ಬೇರೆ ಔಷಧ ಬಳಸಿಲ್ಲ. ಫಸಲು ನಿರಂತರವಾಗಿದೆ. ಕರೊನಾ ಪರಿಸ್ಥಿತಿಯಲ್ಲಿ ಮಾತ್ರ ಕುಂಠಿತವಾಗಿತ್ತು. ಪ್ರತಿದಿನ 15 ರಿಂದ 20 ಸಾವಿರ ಲಾಭ ದೊರೆಯುತ್ತಿದೆ. ಎಲೆ ತೋಟ ಒಂದು ಕುಟುಂಬವನ್ನು ಆರ್ಥಿಕವಾಗಿ ಸಂಪೂರ್ಣ ಕಾಪಾಡುವ ಭದ್ರತೆಯಾಗಿದೆ. ಗದ್ದಿಗೆ ತಿಪ್ಪೇಸ್ವಾಮಿ, ಎಲೆ ಬಳ್ಳಿ ತೋಟದ ಮಾಲೀಕ
ಗದ್ದಿಗೆ ತಿಪ್ಪೇಸ್ವಾಮಿ, ಎಲೆ ಬಳ್ಳಿ ತೋಟದ ಮಾಲೀಕ
ತಾಲೂಕಿನಲ್ಲಿ 60 ಎಕರೆಯಲ್ಲಿ ವೀಳ್ಯದೆಲೆ ಬೆಳೆ ಇದೆ. ಅಡಕೆ ತೋಟಗಳ ನಡುವೆ ಅಂತರ ಬೆಳೆಯಾಗಿ ಸುಲಭವಾಗಿ ಬೆಳೆಯಬಹುದು. ಈ ಮಣ್ಣಿನ ಫಲವತ್ತತೆಯಲ್ಲಿ ರೋಗಬಾಧೆ ಕಡಿಮೆ. ಲಾಭದಾಯಕ ಬೆಳೆಯಾಗಿದೆ. ಖಾತ್ರಿ ಯೋಜನೆಯಲ್ಲಿ ವೀಳ್ಯದೆಲೆ ಬೆಳೆದುಕೊಳ್ಳಲು ಅವಕಾಶವಿದೆ. ಒಬ್ಬ ರೈತನಿಗೆ 2.5 ಎಕರೆ ಬೆಳೆಗೆ 49 ಸಾವಿರ ಸಹಾಯಧನ ನೀಡಲಾಗುತ್ತದೆ. ಡಾ.ಆರ್.ವಿರೂಪಾಕ್ಷಪ್ಪ, ಸಹಾಯಕ ನಿರ್ದೇಶಕ, ತೋಟಗಾರಿಕೆ ಇಲಾಖೆ, ಚಳ್ಳಕೆರೆ.
ಡಾ.ಆರ್.ವಿರೂಪಾಕ್ಷಪ್ಪ, ಸಹಾಯಕ ನಿರ್ದೇಶಕ, ತೋಟಗಾರಿಕೆ ಇಲಾಖೆ, ಚಳ್ಳಕೆರೆ.