

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಇತ್ತೀಚಿನ ದಿನಗಳಲ್ಲಿ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಯುವಕರು ಜೇನುಕೃಷಿ ತರಬೇತಿಯಲ್ಲಿ ಭಾಗವಹಿಸುತ್ತಿರುವುದು ತುಂಬ ಸಂತೋಷದ ವಿಷಯವಾಗಿದೆ. ಜೇನು ಹೇಗಿದೆ ಎಂದು ನೋಡಬೇಕಾದರೆ ಅದರ ಸಿಹಿಯನ್ನು ಸವಿಯಬೇಕು. ರುಡ್‌ಸೆಟ್ ಸಂಸ್ಥೆಗೆ ಬಂದರೆ ಇಲ್ಲಿನ ವಿಶೇಷತೆ ತಿಳಿಯಲು ಸಾಧ್ಯ. ಒಂದು ದೇಶ ಸುಭಿಕ್ಷೆ ಆಗಬೇಕಾದರೆ ಅಲ್ಲಿನ ಜನ ವಿದ್ಯಾವಂತರಾದರೆ ಸಾಲದು ಪ್ರಜ್ಞಾವಂತರಗಾಬೇಕು ಎಂದು ಉಜಿರೆಯ ಪ್ರಗತಿಪರ ಕೃಷಿಕ ಜಗದೀಶ್ ಪ್ರಸಾದ್ ಹೇಳಿದರು.
ಉಜಿರೆ ರುಡ್‌ಸೆಟ್ ಸಂಸ್ಥೆಯಲ್ಲಿ 10 ದಿನಗಳ ಕಾಲ ನಡೆದ ಜೇನು ಕೃಷಿ ತರಬೇತಿಯ ಸಮಾರೋಪ ಸಮಾರಂಭದಲಿ ಪ್ರಮಾಣಪತ್ರ ವಿತರಿಸಿ ಮಾತನಾಡಿದರು.
ರುಡ್‌ಸೆಟ್ ಸಂಸ್ಥೆಗಳ ಕಾರ್ಯನಿರ್ವಾಹಕ ನಿರ್ದೇಶಕ ಬಿ.ಪಿ.ವಿಜಯ ಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಸರ್ಕಾರ ಮತ್ತು ಬ್ಯಾಂಕಿನ ಹೊಸ ಯೋಜನೆಯ ಮೂಲಕ ಸಹಾಯಧನ, ಸಾಲ ಪಡೆದುಕೊಂಡು ಉದ್ಯಮ ಆರಂಭಿಸಿ, ಏನಾದರೂ ಮಾಹಿತಿ, ಮಾರ್ಗದರ್ಶನ ಬೇಕಾದರೆ ಸಂಸ್ಥೆಯನ್ನು ಸಂಪರ್ಕಿಸಿ ಎಂದರು.
ರುಡ್‌ಸೆಟ್ ಸಂಸ್ಥೆಯ ನಿರ್ದೇಶಕ ಅಜೇಯ ಸ್ವಾಗತಿಸಿದರು ಹಿರಿಯ ಉಪನ್ಯಾಸಕ ಅಬ್ರಹಾಂ ಜೇಮ್ಸ್ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕ ಕೆ.ಕರುಣಾಕರ ಜೈನ್ ವಂದಿಸಿದರು. ಶಿಬಿರಾರ್ಥಿಗಳಾದ ಸುಧೀರ್ ಸಾಲ್ಯಾನ್, ರೋಹಿತ್, ಖಲೀಲ್, ಸುಬ್ರಮಣ್ಯ ತರಬೇತಿಯ ಅನುಭವ ಹಂಚಿಕೊಂಡರು.