400 ಕೆವಿ ಕಾಮಗಾರಿಗೆ ರೈತರಿಂದ ತಡೆ : ಹಸಿರು ಸೇನೆಯ ಜಿಲ್ಲಾಧ್ಯಕ್ಷ ಶ್ರೀಧರ್ ಶೆಟ್ಟಿ ಪುಣಚ ನೇತೃತ್ವ ಅಗ್ರಹಾರ್ ಬಳಿ ಕೆಲಸ

New Project (11)
Published on

ಬಂಟ್ವಾಳ: ನಾಲ್ಕುನೂರು ಕೆವಿ ವಿದ್ಯುತ್ ಪ್ರಸರಣ ತಂತಿ ಅಳವಡಿಸಲು ಟವರ್ ನಿರ್ಮಾಣದ ಕಾಮಗಾರಿ ನಡೆಯುತ್ತಿದ್ದ ಬಂಟ್ವಾಳ ಕಸ್ಬಾ ಗ್ರಾಮದ ಅಗ್ರಹಾರ್ ಬಳಿಯ ದರ್ಬಳಿಕೆ ಎಂಬಲ್ಲಿಗೆ ರೈತ ಸಂಘ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಶ್ರೀಧರ್ ಶೆಟ್ಟಿ ಪುಣಚ ನೇತೃತ್ವದಲ್ಲಿ ರೈತ ಸಂಘದ ಸದಸ್ಯರು, ಸಂತ್ರಸ್ತ ರೈತರು ಹಾಗೂ ಗ್ರಾಮಸ್ಥರು ಮುತ್ತಿಗೆ ಹಾಕಿ ತಡೆಯೊಡ್ಡಿದ್ದಾರೆ.

ಗುರುವಾರ ಮಧ್ಯಾಹ್ನ ಕಾಮಗಾರಿ ನಡೆಯುತ್ತಿದ್ದ ದರ್ಬಳಿಕೆಗೆ ಬಂದ ರೈತ ಸಂಘದ ಮುಖಂಡರು ಎರಡು ಜೆಸಿಬಿಗಳ ಮೂಲಕ ಮಣ್ಣು ತೋಡುವ ಕೆಲಸವನ್ನು ನಿಲ್ಲಿಸಿ ಕಾಮಗಾರಿ ನಡೆಸದಂತೆ ಗುತ್ತಿಗೆ ಕಂಪನಿ ಕಾರ್ಮಿಕರಿಗೆ ಎಚ್ಚರಿಕೆ ನೀಡಿದರು.

ಘಟನಾ ಸ್ಥಳದಲ್ಲಿ ಒಂದು ವ್ಯಾನ್ ಪೊಲೀಸರನ್ನು ನಿಯೋಜಿಸಿ ಕಾಮಗಾರಿ ನಡೆಯುತ್ತಿದ್ದರೂ ಕ್ಯಾರೇ ಎನ್ನದ ರೈತ ಸಂಘದ ಮುಖಂಡರು, ಕಾಮಗಾರಿ ನಿಲ್ಲಿಸಿರುವ ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಬಂಟ್ವಾಳ ನಗರ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ಅನಂತ ಪದ್ಮನಾಭ ಕೆ.ವಿ, ಹಾಗೂ ಎಸ್‌ಐ ರಾಮಕೃಷ್ಣ ಕಾಮಗಾರಿ ನಡೆಸಲು ಅವಕಾಶ ಮಾಡಿಕೊಡುವಂತೆ ರೈತ ಸಂಘದ ಮುಖಂಡರಲ್ಲಿ ವಿನಂತಿಸಿಕೊಂಡರೂ ಜಗ್ಗದೆ ಇದ್ದಾಗ ಕೆಲಹೊತ್ತು ಮಾತಿನ ಚಕಮಕಿ ನಡೆಯಿತು.

ಬಂಟ್ವಾಳ ಪುರಸಭೆ ಅಧ್ಯಕ್ಷ ವಾಸು ಪೂಜಾರಿ, ರೈತ ಸಂಘ ಹಸಿರು ಸೇನೆಯ ಪ್ರಮುಖರಾದ ಆನಂದ ಸಾಲ್ಯಾನ್, ಚಿತ್ತರಂಜನ್, ರೋಹಿತಾಶ್ವ, ರಾಜೀವ ಗೌಡ, ಶಿವಚಂದ್ರ, ಧನು ಮಂಜನಾಡಿ, ಅಣ್ಣು ಗೌಡ, ಹರೀಶ್ ನಾಯ್ಕ ಪುಣಚ, ಬೆನಡಿಕ್ಟ್ ಕಾರ್ಲೋ, ಬುಡಾ ಸದಸ್ಯ ಮನೋಹರ ನೇರಂಬೋಳು, ರೋಷನ್ ಡಿಸೋಜ, ಕಂದಾಯ ನಿರೀಕ್ಷಕ ಜನಾರ್ದನ, ವಿ.ಎ.ಪ್ರಕಾಶ್ ಮೊದಲಾದವರು ಇದ್ದರು.

ಕರೆ ಸ್ವೀಕರಿಸದ ಎಸಿ, ತಹಸೀಲ್ದಾರ್

400 ಕೆವಿ ವಿದ್ಯುತ್ ಪ್ರಸರಣದ ಟವರ್ ನಿರ್ಮಾಣಕ್ಕೆ ಸಂಬಂಧಪಟ್ಟಂತೆ ಹೈಕೋರ್ಟ್‌ನಲ್ಲಿ ಕೇಸ್ ನಡೆಯುತ್ತಿದ್ದು ಎಸ್‌ಒಪಿ ಜಾರಿಯಾಗದೆ ಕಾಮಗಾರಿ ನಡೆಸಲು ಬಿಡುವುದಿಲ್ಲ ಎಂದು ರೈತ ಸಂಘದವರು ಪಟ್ಟುಹಿಡಿದು ರಸ್ತೆಯಲ್ಲಿಯೇ ಧರಣಿ ಕುಳಿತರು. ಸಹಾಯಕ ಆಯುಕ್ತ ಹರ್ಷವರ್ಧನ್ ಅವರಿಗೆ ಹಲವು ಬಾರಿ ದೂರವಾಣಿ ಕರೆ ಮಾಡಿದಾಗಲೂ ಅವರು ಕರೆ ಸ್ವೀಕರಿಸಿರಲಿಲ್ಲ. ತಹಸೀಲ್ದಾರ್ ಅರ್ಚನ್ ಭಟ್ ಅವರಿಗೆ ಕರೆ ಮಾಡಿ ಆದೇಶ ಪತ್ರವನ್ನು ಸ್ಥಳಕ್ಕೆ ತರುವಂತೆ ತಿಳಿಸಿದಾಗ ಕರೆ ಕಟ್ ಮಾಡಿರುವುದಾಗಿ ಶ್ರೀಧರ್ ಶೆಟ್ಟಿ ಆರೋಪಿಸಿದರು.

ನಡುವಿಂದ ಪ್ರಾರಂಭಿಸಿದ್ದೇಕೆ?

ಬಂಟ್ವಾಳ ತಾಲೂಕಿನ 93 ಕಡೆ ಟವರ್ ನಿರ್ಮಾಣ ನಡೆಯಬೇಕಾಗಿದ್ದು, ಇಲ್ಲಿ ಮಧ್ಯಭಾಗದಿಂದ ಕಾಮಗಾರಿ ಆರಂಭಿಸಿರುವ ಉದ್ದೇಶ ಏನು ಎಂದು ಪ್ರತಿಭಟನಾಕಾರರು ಪ್ರಶ್ನೆ ಮಾಡಿದರು. ಮಂಗಳವಾರ ದರ್ಬಳಿಕೆಯಲ್ಲಿ 400 ಕೆವಿ ವಿದ್ಯುತ್ ಪ್ರಸರಣದ ತಂತಿ ಅಳವಡಿಸಲು ಟವರ್ ನಿರ್ಮಿಸುತ್ತಿರುವ ಬಗ್ಗೆ ಮಾಹಿತಿ ಪಡೆದ ಸ್ಥಳೀಯ ಸಂತ್ರಸ್ತ ರೈತರು, ರೈತ ಸಂಘದ ಓಸ್ವಾಲ್ಡ್ ಪ್ರಕಾಶ್ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ್ದರು. ಈ ಸಂದರ್ಭ ಸ್ಥಳಕ್ಕೆ ಬಂದ ಮಂಗಳೂರು ಸಹಾಯಕ ಆಯುಕ್ತ ಹರ್ಷವರ್ಧನ್ ಹಾಗೂ ತಹಸೀಲ್ದಾರ್ ಅರ್ಚನಾ ಭಟ್ ಪ್ರತಿಭಟನಕಾರರ ಮನವೊಲಿಸಿ ಕಾಮಗಾರಿ ಆರಂಭಿಸಲು ಅನುವು ಮಾಡಿಕೊಟ್ಟಿದ್ದರು.

ಹೈಕೋರ್ಟ್ ಆದೇಶ ಉಲ್ಲಂಘನೆ

ರೈತ ಸಂಘ ಹಾಗೂ ಸ್ಥಳೀಯ ಸಂತ್ರಸ್ತ ರೈತರ ವಿರೋಧದ ನಡುವೆಯೂ ತಹಸೀಲ್ದಾರ್ ಸೂಚನೆಯಂತೆ ಕಾಮಗಾರಿ ಸಂಜೆಯ ವೇಳೆಗೆ ಪುನಾರಂಭಗೊಂಡಿತು. ಜಿಲ್ಲಾಧಿಕಾರಿ ಅವರ ಮೌಖಿಕ ಆದೇಶದಂತೆ ಕಾಮಗಾರಿ ನಡೆಸಲು ತಹಸೀಲ್ದಾರ್ ಸೂಚನೆ ನೀಡಿ ಹೈಕೋರ್ಟ್ ಆದೇಶ ಉಲ್ಲಂಘಿಸಿದ್ದಾರೆ ಎಂದು ಶ್ರೀಧರ ಶೆಟ್ಟಿ ಆರೋಪಿಸಿದ್ದಾರೆ.

ಪೊಲೀಸರ ವಿರುದ್ಧ ಆಕ್ರೋಶ

ಪ್ರತಿಭಟನೆಯ ವೇಳೆ ಸ್ಥಳದಲ್ಲಿ ಹಾಜರಿದ್ದ ಹಾಗೂ ಘಟನಾ ದೃಶ್ಯಗಳನ್ನು ಮೊಬೈಲ್‌ನಲ್ಲಿ ಸೆರೆ ಹಿಡಿಯುತ್ತಿದ್ದ ಸ್ಥಳೀಯ ಯುವಕರನ್ನು ಒತ್ತಾಯಪೂರ್ವಕವಾಗಿ ಹೆಸರು ಕೊಡಿ ಎಂದು ಪೊಲೀಸರು ಸತಾಯಿಸುತ್ತಿದ್ದು ರೈತ ಮುಖಂಡರ ಆಕ್ರೋಶಕ್ಕೆ ಕಾರಣವಾಯಿತು. ಹೆಸರು ಪಡೆದುಕೊಂಡು ನೀವೇನು ಪೆನ್ಶನ್ ನೀಡುತ್ತಿರಾ? ಎಂದು ಶ್ರೀಧರ್ ಶೆಟ್ಟಿ ಪೊಲೀಸರಿಗೆ ಖಾರವಾಗಿಯೇ ಪ್ರಶ್ನಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net