

ಬೆಂಗಳೂರು: ರಾಜ್ಯದಲ್ಲಿ ಡೆಂಘೆ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಡೆಂಘೆ ರೋಗಿಗಳ ಚಿಕಿತ್ಸೆಗಾಗಿ ಬೆಂಗಳೂರಿನ 5 ಆಸ್ಪತ್ರೆಗಳಿಗೆ ನಿರ್ದಿಷ್ಟ ಸಂಖ್ಯೆಯ ಹಾಸಿಗೆಗಳನ್ನು ಮೀಸಲಿಡುವಂತೆ ಸೂಚಿಸಿದೆ.
ಈ ಕುರಿತು ಸುತ್ತೋಲೆ ಹೊರಡಿಸಿರುವ ಇಲಾಖೆ ಆಯುಕ್ತ ಡಿ. ರಂದೀಪ್, ನಗರದ ಕೆ.ಸಿ. ಜನರಲ್ ಆಸ್ಪತ್ರೆ, ಸರ್ ಸಿ.ವಿ. ರಾಮನ್ ಸಾರ್ವಜನಿಕ ಆಸ್ಪತ್ರೆ, ಜಯನಗರದ ಜನರಲ್ ಆಸ್ಪತ್ರೆಗಳಲ್ಲಿ ತಲಾ 25 ಹಾಸಿಗೆಗಳನ್ನು ಹಾಗೂ ಯಲಹಂಕ ತಾಲೂಕು ಆಸ್ಪತ್ರೆ ಮತ್ತು ಕೆ.ಆರ್.ಪುರ ತಾಲೂಕು ಆಸ್ಪತ್ರೆಗಳಲ್ಲಿ ತಲಾ 10 ಹಾಸಿಗೆಗಳನ್ನು ಡೆಂಘೆ ರೋಗಿಗಳ ಚಿಕಿತ್ಸೆಗೆ ಮೀಸಲಿಡುವಂತೆ ತಿಳಿಸಿದ್ದಾರೆ.
ಡೆಂಘೆ ರೋಗಿಗಳಿಗೆ ನಿಗದಿತ ಸಮಯದಲ್ಲಿ ಆರೈಕೆ ಮತ್ತು ಚಿಕಿತ್ಸೆ ನೀಡುವ ಮೂಲಕ ಸಾವು ತಡೆಗಟ್ಟಬಹುದಾಗಿದೆ. ಹೀಗಾಗಿ ಪರಿಣಾಮಕಾರಿ ನಿರ್ವಹಣೆ ಮತ್ತು ತೀವ್ರತರವಾದ ಪ್ರಕರಣಗಳಿಗೆ ನಿರ್ಣಾಯಕ ಚಿಕಿತ್ಸೆ ಒದಗಿಸಲು ಈಗಾಗಲೇ ರಾಜ್ಯದ ಎಲ್ಲ ಜಿಲ್ಲಾ ಆಸ್ಪತ್ರೆಗಳಲ್ಲಿ ತಲಾ 10 ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ 5 ಹಾಸಿಗೆಗಳನ್ನು ಮೀಸಲಿಡುವಂತೆ ಸೂಚಿಸಲಾಗಿದ್ದು, ಮುಂದಿನ ಆದೇಶದವರೆಗೂ ಮುಂದುವರೆಸಿಕೊಂಡು ಹೋಗುವಂತೆ ತಿಳಿಸಿದ್ದಾರೆ.