

ಸರಗೂರು: ಕಾನೂನು ಹಾಗೂ ನಿಯಮಗಳನ್ನು ಅರಿತು ಸಾರ್ವಜನಿಕರಿಗೆ ಅರಿವು ಮೂಡಿಸುವಷ್ಟು ವಿದ್ಯಾರ್ಥಿಗಳು ಪ್ರಬುದ್ಧವಾಗಬೇಕು ಎಂದು ಸರಗೂರು ಪೊಲೀಸ್ ಠಾಣೆ ವೃತ್ತ ನಿರೀಕ್ಷಕ ಪ್ರಸನ್ನ ಕುಮಾರ್ ಕಿವಿಮಾತು ಹೇಳಿದರು.
ಪಟ್ಟಣದ ಪೊಲೀಸ್ ಠಾಣೆಯ ಮುಂಭಾಗದಲ್ಲಿ ಗುರುವಾರ ಸರಗೂರು ಪೊಲೀಸ್ ಠಾಣೆ ವತಿಯಿಂದ ಆಯೋಜಿಸಿದ್ದ ಕಾನೂನು ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜನರಲ್ಲಿ ಕಾನೂನು ಬಗ್ಗೆ ಅರಿವು ಕಡಿಮೆಯಿದೆ. ಕಾನೂನುಗಳು, ಅಪರಾಧಗಳನ್ನು ಕುರಿತಂತೆ ತಿಳಿಸುವ ಪ್ರಯತ್ನ ಮಾಡಿದಲ್ಲಿ ಅಪರಾಧ ಪ್ರಕರಣಗಳು ಕಡಿಮೆಯಾಗಲಿವೆ ಎಂದರು.
ಗ್ರಾಮೀಣ ಪ್ರದೇಶಗಳಲ್ಲಿ ಅಪರಾಧಗಳು ಹೆಚ್ಚಾಗುತ್ತಿದ್ದು ಇದನ್ನು ತಡೆಯಲು ಪೊಲೀಸ್ ಇಲಾಖೆ ಸಾಕಷ್ಟು ಜಾಗೃತಿ ವಹಿಸಿದೆ. ಇಲ್ಲಿಯವರೆಗೆ ಹಲವು ಜಾಗೃತಿ ಕಾರ್ಯಕ್ರಮಗಳನ್ನು ಗ್ರಾಮೀಣ ಪ್ರದೇಶಗಳಲ್ಲಿ ನಡೆಸಲಾಗಿದ್ದು, ಇದರಿಂದಾಗಿ ಸ್ವಲ್ಪ ಮಟ್ಟಿಗಿನ ಪ್ರಯೋಜನ ಕಂಡಿದೆ. ಸಾರ್ವಜನಿಕರು ಸಹಕಾರ ನೀಡಿದಲ್ಲಿ ಕಾರ್ಯಕ್ರಮ ಯಶಸ್ವಿಯಾಗಲಿದೆ ಎಂದು ಹೇಳಿದರು.
ಇತ್ತೀಚೆಗೆ ಒಂಟಿ ಮಹಿಳೆಯರು ರಸ್ತೆಯಲ್ಲಿ ಹೋಗುವಾಗ ಸರಗಳ್ಳತನ, ಯಾರೂ ಇಲ್ಲದ ಮನೆಗಳಲ್ಲಿ ದರೋಡೆ ಪ್ರಕರಣಗಳು ಹೆಚ್ಚಾಗುತ್ತಿದ್ದು ಇಂಥ ಪ್ರಕರಣಗಳನ್ನು ತಡೆಯಲು ಬೀಟ್ ಪೊಲೀಸರಿಂದ ಅಪರಾಧ ಮಾಸಾಚರಣೆ ಕಾರ್ಯಕ್ರಮವನ್ನು ಪ್ರತಿ ಗ್ರಾಮಗಳಲ್ಲೂ ನಡೆಸಲಾಗುತ್ತಿದೆ ಎಂದರು.
ಇನ್‌ಸ್ಪೆಕ್ಟರ್ ಆರ್.ಕಿರಣ್ ಮಾತನಾಡಿ, ಪ್ರಸ್ತುತ ಮೊಬೈಲ್ ಪ್ರಪಂಚ ನಿರ್ಮಾಣವಾಗಿದ್ದು ಇದರಿಂದಲೂ ಹೆಚ್ಚು ಸೈಬರ್ ಅಪರಾಧಗಳು ನಡೆಯುತ್ತಿವೆ. ಸಾರ್ವಜನಿಕರು ಯಾವುದೇ ಅಪರಿಚಿತ ಕರೆಗಳು ಬಂದರೆ ನಿಮ್ಮ ಬ್ಯಾಂಕ್ ಖಾತೆ, ಮನೆ ವಿಳಾಸ ಸೇರಿದಂತೆ ಇನ್ನಿತರ ಯಾವುದೇ ವೈಯಕ್ತಿಕ ಮಾಹಿತಿಗಳನ್ನು ಕೇಳಿದಲ್ಲಿ ನೀಡಬಾರದು ಎಂದು ಎಚ್ಚರಿಸಿದರು.
ಇತ್ತೀಚಿನ ದಿನಗಳಲ್ಲಿ ರಸ್ತೆ ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿದ್ದು, ಪ್ರತಿಯೊಬ್ಬರು ಕಾನೂನು, ನಿಯಮಗಳ ಬಗ್ಗೆ ತಿಳಿದುಕೊಳ್ಳುವ ಅಗತ್ಯ ಇದೆ, ರಸ್ತೆ ಸುರಕ್ಷತೆಯ ನಿಯಮಗಳು, ಮೋಟಾರು ಕಾಯಿದೆ ನಿಯಮಗಳ ಬಗ್ಗೆ ಅರಿತುಕೊಂಡರೆ ಅಪರಾಧ ಪ್ರಕರಣಗಳನ್ನು ತಡೆಗಟ್ಟಲು ಸಾಧ್ಯ ಎಂದರು.
ವಿದ್ಯಾರ್ಥಿಗಳು ಸೇರಿದಂತೆ 18 ವರ್ಷದೊಳಗಿನ ಮಕ್ಕಳು ಯಾವುದೇ ವಾಹನವನ್ನು ಓಡಿಸುವುದು ಕಾನೂನಿನ ಪ್ರಕಾರ ಅಪರಾಧವಾಗುತ್ತದೆ. ಪ್ರತಿ ವಾಹನ ಸವಾರರು ಕಡ್ಡಾಯವಾಗಿ ಡಿಎಲ್ ಮಾಡಿಸಿಕೊಳ್ಳಬೇಕು. ದ್ವಿಚಕ್ರವಾಹನ ಸೇರಿದಂತೆ ಪ್ರತಿ ವಾಹನಗಳಿಗೆ ಕಡ್ಡಾಯವಾಗಿ ವಾಹನ ವಿಮೆ ಮಾಡಿಸಿಕೊಳ್ಳಬೇಕು. ಅಪಘಾತ ಸಂದರ್ಭದಲ್ಲಿ ಮೃತಪಟ್ಟರೆ ಹಾಗೂ ಗಾಯಗೊಂಡಲ್ಲಿ ವಿಮೆಯ ಮೂಲಕ ಪರಿಹಾರ ದೊರೆಯುತ್ತದೆ. ಈ ನಿಟ್ಟಿನಲ್ಲಿ ವಾಹನಗಳಿಗೆ ಡಿಎಲ್, ವಾಹನ ವಿಮೆ ನೋಂದಣಿ ಮಾಡಿಸಿಕೊಳ್ಳುತ್ತಿರಬೇಕು. ದ್ವಿಚಕ್ರ ವಾಹನ ಸವಾರ ಮತ್ತು ಹಿಂಬದಿ ಸವಾರರಿಬ್ಬರೂ ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು ಎಂದರು.
ಕ್ರೈಂ ಬ್ರಾಂಚ್ ಇನ್‌ಸ್ಪೆಕ್ಟರ್ ಗೋಪಾಲ್ ಮಾತನಾಡಿ, ಸಂಚಾರ ನಿಯಮಗಳನ್ನು ಉಲ್ಲಂಘಿಸುವುದು ಅಪರಾಧ. ರಸ್ತೆ ಅಪಘಾತ ಪ್ರಕರಣಗಳನ್ನು ತಡೆಗಟ್ಟುವ ಉದ್ದೇಶದಿಂದ ಪೊಲೀಸ್ ಇಲಾಖೆ ಇಂತಹ ಕಾನೂನು, ನಿಯಮಗಳನ್ನು ರೂಪಿಸಿದೆ ಎಂದರು .
ಸರಗೂರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಕಾನೂನು ಅರಿವು ಜಾಥಾ ಮಾಡಲಾಯಿತು.
ಈ ಸಂದರ್ಭದಲ್ಲಿ ಪೊಲೀಸ್ ಠಾಣೆಯ ಸಿಬ್ಬಂದಿ ಪುರುಷೋತ್ತಮ್, ನಾರಾಯಣ್, ಇಮ್ರಾನ್, ಆನಂದ,ಜಗದೀಶ್, ಸುನೀಲ್, ರಾಜು, ಕೃಷ್ಣಯ್ಯ, ಶಿವರಾಜು, ದೇವರಾಜು, ವಿವೇಕ ಸ್ಕೂಲ್ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಜಾಥಾದಲ್ಲಿ ಪಾಲ್ಗೊಂಡಿದ್ದರು.