

ಸವಣೂರ: ಬಡತನ ಹಸಿವು ನಿವಾರಣೆಗೆ ಮನುಷ್ಯ ಮಾನವೀಯ ಮೌಲ್ಯವುಳ್ಳ ವಿದ್ಯಾವಂತನಾಗುವುದು ಅವಶ್ಯವಿದೆ ಎಂದು ಹೂವಿನಶಿಗ್ಲಿ ವಿರಕ್ತಮಠದ ಶ್ರೀ ಚನ್ನವೀರ ಸ್ವಾಮೀಜಿ ಹೇಳಿದರು.
ತಾಲೂಕಿನ ಹೂವಿನಶಿಗ್ಲಿ ಗ್ರಾಮದ ವಿರಕ್ತಮಠದ ಗುರುಕುಲ ಆಶ್ರಮದಲ್ಲಿ ಶನಿವಾರ ಏರ್ಪಡಿಸಿದ್ದ ಜೆಸಿಐ ಸಪ್ತಾಹ ಸಂಪನ್ನ ಸಂಭ್ರಮಾಚರಣೆಯೊಂದಿಗೆ ಗುರುತಿಸುವಿಕೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಅನಾಥ ಮಕ್ಕಳಿಗೆ ಅನ್ನದಾನ ಕೈಗೊಳ್ಳುವ ಇಚ್ಛೆಯ ಸಾಮಾಜಿಕ ಚಿಂತನೆಯೊಂದಿಗೆ ಜೆಸಿಐ ನಮ್ಮ ಸವಣೂರು ಪದಾಧಿಕಾರಿಗಳು ಆಶ್ರಮದಲ್ಲಿ ಸಪ್ತಾಹ ಸಂಪನ್ನ ಕಾರ್ಯಕ್ರಮ ಏರ್ಪಡಿಸಿರುವುದು ಶ್ಲಾಘನೀಯವಾಗಿದೆ ಎಂದರು.
ಜೆಸಿಐ ನಮ್ಮ ಸವಣೂರು ಘಟಕದ ಕಾರ್ಯದರ್ಶಿ ಬಸವರಾಜ ಚಳ್ಳಾಳ ಜೆಸಿಐ ಸಪ್ತಾಹ ವರದಿ ವಾಚನ ಮಾಡಿ, ಸೆ. 9ರಿಂದ 15ರ ವರಿಗೆ ಜೆಸಿಐ ಮಾರ್ಗದರ್ಶನದಡಿ ವಿವಿಧ ಸಾಮಾಜಿಕ ಕಾರ್ಯ ಕೈಗೊಂಡ ಬಗ್ಗೆ ತಿಳಿಸಿದರು.
ಆರೋಗ್ಯ ಇಲಾಖೆ ಸಹಯೋಗದಲ್ಲಿ ಹೆಸ್ಕಾಂ ಅಧಿಕಾರಿ, ಸಿಬ್ಬಂದಿ ಸೇರಿ ಕುಟುಂಬಸ್ಥರಿಗೆ ಉಚಿತ ಆರೋಗ್ಯ ತಪಾಸಣೆ, ನೈರ್ಮಲ್ಯ ಮತ್ತು ಶುದ್ಧ ಕುಡಿಯುವ ನೀರಿನ ಕುರಿತು ಜಾಗೃತಿ, ವಿದ್ಯಾರ್ಥಿಗಳಿಗೆ ಮಾದಕದ್ರವ್ಯ ತಂಬಾಕು ಮುಕ್ತ ಸಮಾಜ ನಿರ್ವಣಕ್ಕೆ ಜಾಗೃತಿ, ಭಾರತ ಮಹಿಳಾ ಅಂಧರ ಕ್ರಿಕೆಟ್ ತಂಡದ ಉಪ ನಾಯಕಿ ಗಂಗಮ್ಮ ಹರಿಜನ ಅವರಿಗೆ ಸನ್ಮಾನ, ಗುರುಕುಲದ ಅನಾಥ ಮಕ್ಕಳಿಗೆ ಅನ್ನದಾನ ಸೇರಿದಂತೆ ವಿವಿಧ ಕಾರ್ಯಕ್ರಮ ನಡೆಸಲಾಯಿತು.
ಜೆಸಿಐ ನಮ್ಮ ಸವಣೂರು ಘಟಕದ ಅಧ್ಯಕ್ಷ ಬಾಪುಗೌಡ ಕೊಪ್ಪದ ಅಧ್ಯಕ್ಷತೆ ವಹಿಸಿದ್ದರು. ಆನಂದ ಮತ್ತಿಗಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಜೆಸಿಐ ಪದಾಧಿಕಾರಿಗಳಾದ ರಮೇಶ ಅರಗೋಳ, ಪ್ರಕಾಶ ಜಮಾದಾರ, ಹರೀಶ ಹಳ್ಳಳ್ಳಿ, ಪುಷ್ಪಾ ಬತ್ತಿ, ಸುನಂದಾ ಚಿನ್ನಾಪುರ, ಗಂಗಾಧರ ಬಾಣದ, ಗಣೇಶಗೌಡ ಪಾಟೀಲ, ಸುಭಾಸ ಗಡೆಪ್ಪನವರ, ಬಸನಗೌಡ ಕೊಪ್ಪದ, ಎಂ.ಕೆ. ಬಿಜ್ಜೂರ, ಶಿವಪುತ್ರಪ್ಪ ಕಲಕೋಟಿ, ಶೋಭಾ ನಿಸ್ಸೀಮಗೌಡ್ರ ಇತರರು ಪಾಲ್ಗೊಂಡಿದ್ದರು. ಜೆಸಿಐ ತರಬೇತುದಾರ ವಿದ್ಯಾಧರ ಕುತನಿ, ಜೆಸಿ ತೇಜಸ್ವಿನಿ ಕೊಂಡಿ, ಜೆಸಿ ಪ್ರೇಮಾ ಚಳ್ಳಾಳ ಹಾಗೂ ಶಿಕ್ಷಕ ಮಹೇಶಗೌಡ ಪಾಟೀಲ ನಿರ್ವಹಿಸಿದರು.