

ಹಾನಗಲ್: ಮುಖ್ಯಮಂತ್ರಿಯಾಗಿದ್ದಾಗ ಸಿದ್ದರಾಮಯ್ಯ ಅವರು ಘೋಷಣೆ ಮಾಡಿದ 'ಭಾಗ್ಯ'ಗಳು ಜನರ ಮನೆ ಬಾಗಿಲಿಗೆ ತಲುಪದೆ ಮಧ್ಯವರ್ತಿಗಳ ಪಾಲಾದವು. ಅದಕ್ಕಾಗಿಯೇ ಕಾಂಗ್ರೆಸ್ ಪಕ್ಷವನ್ನು ರಾಜ್ಯದ ಜನ ತಿರಸ್ಕರಿಸಿ ಪ್ರತಿಪಕ್ಷದಲ್ಲಿ ಕೂರಿಸಿದ್ದಾರೆ ಎಂದು ಸಿದ್ದರಾಮಯ್ಯ ವಿರುದ್ಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಾಕ್ಸಮರ ನಡೆಸಿದರು.
ಇಂದು ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಬೊಮ್ಮನಹಳ್ಳಿ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಅನ್ನಭಾಗ್ಯ ಯೋಜನೆ ಜಾರಿ ಮಾಡಿದ ನಂತರವೇ ಜನ ಅಕ್ಕಿ ನೋಡಿದ್ದಾರೆ ಎನ್ನುವ ರೀತಿಯಲ್ಲಿ ಸಿದ್ದರಾಮಯ್ಯ ಮಾತನಾಡುತ್ತಾರೆ. ಈ ಅಕ್ಕಿಯಲ್ಲಿ ಕೇಂದ್ರದ ಪಾಲು ಹೆಚ್ಚು. ರಾಜ್ಯ ಸರ್ಕಾರದ ಪಾಲು ಪ್ರತಿ ಕೆ.ಜಿ.ಗೆ ಕೇವಲ 3 ರೂಪಾಯಿ. ಆದರೆ ಅನ್ನಭಾಗ್ಯ ಯೋಜನೆ ತಮ್ಮದೆಂದು ಹೇಳಿಕೊಳ್ಳುವ ಮೂಲಕ ಜನರನ್ನು ತಪ್ಪುದಾರಿಗೆ ಎಳೆಯುತ್ತಿದ್ದಾರೆ ಎಂದು ಆರೋಪಿಸಿದರು.
ಕಾಂಗ್ರೆಸ್ ಸರ್ಕಾರ ರೈತರ ಪರವಾಗಿರಲಿಲ್ಲ, ರೈತರನ್ನು ಉದ್ಧಾರ ಮಾಡುವ ಮನಸ್ಥಿತಿ ಅವರಿಗಿಲ್ಲ. ಅಧಿಕಾರವನ್ನು ಸ್ವಾರ್ಥಕ್ಕಾಗಿ ಬಳಕೆ ಮಾಡಿಕೊಳ್ಳುವುದೇ ಕಾಂಗ್ರೆಸ್ ಕೆಲಸ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟೀಕಿಸಿದರು.
ಉಪಚುನಾವಣೆಯಲ್ಲಿ ಕಾಂಗ್ರೆಸ್ನವರು ಈ ಹಿಂದೆ ಗೆದ್ದಾಗಲೆಲ್ಲ ಸಂಘಟನೆಯಿಂದ ಗೆದ್ದಿದ್ದೇವೆ ಎಂದು ಬೀಗುತ್ತಿದ್ದರು. ಅದೇ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಗಳು ಉಪಚುನಾವಣೆಯಲ್ಲಿ ಜಯಗಳಿಸಿದರೆ ಅದು ಹಣದಿಂದ ಎಂದು ಡಿ.ಕೆ. ಶಿವಕುಮಾರ್ ಆರೋಪಿಸುತ್ತಾರೆ. ಡಿ.ಕೆ.ಶಿವಕುಮಾರ್ ಹತಾಶರಾಗಿದ್ದಾರೆ. ಸೋಲಿನ ಭಯದಿಂದ ಈ ತರಹದ ಮಾತುಗಳನ್ನು ಆಡುತ್ತಿದ್ದಾರೆ. ಹಾನಗಲ್ ಕ್ಷೇತ್ರದಲ್ಲಿ ದೊಡ್ಡ ಮಟ್ಟದಲ್ಲಿ ಜನಶಕ್ತಿ ನಮ್ಮೊಂದಿಗಿದೆ. ಭಾರತೀಯ ಜನತಾ ಪಕ್ಷದ ಅಭ್ಯರ್ಥಿಗೆ ಗೆಲುವು ಖಚಿತ. ಇದೇ ಕಾರಣಕ್ಕಾಗಿ ಗಾಬರಿಯಿಂದ ಕಾಂಗ್ರೆಸ್ ಪಕ್ಷದವರು ಮಾತನಾಡುತ್ತಿದ್ದಾರೆ ಎಂದು ಸಿಎಂ ಹೇಳಿದರು.
ವಿರೋಧ ಪಕ್ಷದ ಎಲ್ಲ ಟೀಕೆ-ಟಿಪ್ಪಣಿಗಳಿಗೆ ನಾನು ಉತ್ತರ ಕೊಡಲು ಬಯಸುವುದಿಲ್ಲ. ನಮ್ಮ ಮೂಲಮಂತ್ರ ಅಭಿವೃದ್ಧಿಯಾಗಿದ್ದು, ಕಾಂಗ್ರೆಸ್ ಪಕ್ಷದವರು ತಮಗೆ ಬೇಕಾದ ಅಜೆಂಡಾ ಇಟ್ಟುಕೊಳ್ಳಲಿ, ಆದರೆ ಭಾರತೀಯ ಜನತಾ ಪಕ್ಷದ ಏಕೈಕ ಅಜೆಂಡಾ ಅಭಿವೃದ್ಧಿ. ಕಾಂಗ್ರೆಸ್ ಪಕ್ಷ ಮಾಡುವಂತಹ ಎಲ್ಲ ಟೀಕೆಗಳಿಗೆ ಹಾನಗಲ್ ಕ್ಷೇತ್ರದ ಜನರು ಉತ್ತರ ಕೊಡಲಿದ್ದಾರೆ ಎಂದು ಸಿಎಂ ಬೊಮ್ಮಾಯಿ ನುಡಿದರು.
ಭಾರತೀಯ ಜನತಾ ಪಕ್ಷದ ಸರ್ಕಾರಕ್ಕೆ ಜನಪರ ಕಾಳಜಿ ಹೆಚ್ಚು. ಜನರಿಗೆ ಅಗತ್ಯದ ಯೋಜನೆಗಳು ಸರಕಾರ ರೂಪಿಸಿ, ಮನೆಗೆ ತಲುಪುವಂತೆ ನೋಡಿಕೊಂಡಿದೆ. ಹೆಣ್ಣು ಮಕ್ಕಳು ಹುಟ್ಟಿದರೆ ಶಾಪ ಅನ್ನುವಂತಹ ಕಾಲದಲ್ಲಿ ಯಡಿಯೂರಪ್ಪನವರು ಭಾಗ್ಯಲಕ್ಷ್ಮಿ ಯೋಜನೆಯನ್ನು ಪರಿಚಯಿಸಿದರು. ಇಡೀ ಭಾರತದಲ್ಲಿಯೇ ಮೊಟ್ಟಮೊದಲ ಬಾರಿಗೆ ಈ ಯೋಜನೆಯನ್ನು ಪರಿಚಯಿಸಿದ ಹೆಮ್ಮೆ ಭಾರತೀಯ ಜನತಾ ಪಕ್ಷ ಸರ್ಕಾರದ್ದು ಎಂದು ಬಸವರಾಜ ಬೊಮ್ಮಾಯಿ ಹೇಳಿದರು.
ನಮ್ಮ ರೈತರು ಅಭಿವೃದ್ಧಿ ಹೊಂದಬೇಕು, ಹಣ ಗಳಿಸಬೇಕು. ಜೂರ್ಕಿ ಚಪ್ಪಲಿ, ರೇಷ್ಮೆ ಜುಬ್ಬಾ-ರುಮಾಲು ಹಾಕಬೇಕು, ಕೈಯಲ್ಲಿ ಬಾರಕೋಲು ಹಿಡಿದುಕೊಳ್ಳಬೇಕು. ಇದು ಭಾರತೀಯ ಜನತಾ ಪಕ್ಷದ ಅಭಿವೃದ್ಧಿಯ ಕನಸು. ರೈತರ ಜೀವನ ಸುಧಾರಿಸುವುದೇ ನಮ್ಮ ಉದ್ದೇಶ, ರೈತನ ಬಾಳು ಬೆಳಗಬೇಕು ಎಂದು ಅವರು ಹೇಳಿದರು.